ಎಲ್ಲ ಕುತೂಹಲಭರಿತ ಕಣ್ಣುಗಳು ಶಾಂತವಾಗಿವೆ. ಹೇಗಿದೆ, ಏನಿದೆ ಎಂಬುದಕ್ಕೆಲ್ಲಾ ತೆರೆ ಬಿದ್ದಿದೆ. ಯಾರು ಏನೇ ಹೇಳಲಿ, ಓಂ ಶಾಂತಿ ಓಂ ಅಂತೂ ಹಿಟ್ ಆಗಿಬಿಟ್ಟಿದೆ.
ಫರಾ ಖಾನ್ ಅವರು ಗೆದ್ದಿದ್ದಾರೆ. ಆದರೆ ಇದನ್ನು ನೋಡಿದ ಬಾಲಿವುಡ್ ಅಭಿಮಾನಿಗಳಿಗೆ, ಸುಭಾಷ್ ಘಾಯ್ ಅವರ ಕರ್ಜ್, ಅಥವಾ ಇತರ ಚಿತ್ರಗಳಾದ ಕುದ್ರತ್, ಮಧು ಮತಿ, ಮಿಲನ್, ಕರಣ್ ಅರ್ಜುನ್ ಇವುಗಳೆಲ್ಲವೂ ನೆನಪಿಗೆ ಬರಬಹುದು. ಅವೆಲ್ಲವುಗಳ ಟೇಸ್ಟ್ ಇಲ್ಲಿದೆ.
ಒಟ್ಟಿನಲ್ಲಿ ಓಂ ಶಾಂತಿ ಓಂ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸಿದ್ಧತೆ ಮಾಡುತ್ತಿದೆ. ಹಲವು ಕಾಲದಿಂದ ಶಾರೂಖ್ ಖಾನ್ ಅವರಿಂದ ಮಸಾಲಾ ಚಿತ್ರವೊಂದನ್ನು ನಿರೀಕ್ಷಿಸುತ್ತಿದ್ದ ಪ್ರೇಕ್ಷಕ ಖುಷ್ ಆಗಿದ್ದಾನೆ. ಮನರಂಜನೆಯ ಎಲ್ಲಾ ವಿಭಾಗದಲ್ಲೂ ನಟನೆ ಮಾಡಿರುವ ಶಾರೂಖ್, ತಾನು ಬಾಲಿವುಡ್ ಬಾದಷಾ ಎಂಬುದನ್ನು ಈ ಚಿತ್ರದ ಮೂಲಕ ಸಮರ್ಥಿಸಿಕೊಂಡಿದ್ದಾರೆ.
ಕಥೆ ಓಂ (ಶಾರೂಖ್ ಖಾನ್) ಮತ್ತು ಶಾಂತಿ (ದೀಪಿಕಾ ಪಡುಕೋಣೆ) ಅವರದು. ಓಂ 70ರ ದಶಕದ ಕಿರಿಯ ಕಲಾವಿದ. ಶಾಂತಿಯು ಅದಾಗಲೇ ಸೂಪರ್ ಸ್ಟಾರ್ ಪಟ್ಟಕ್ಕೇರಿದವಳು. ಆತ ಆಕೆಯ ದೊಡ್ಡ ಫ್ಯಾನ್. ಅವನು ಆಕೆಯನ್ನು ಪ್ರೇಮಿಸುತ್ತಾನೆ. ಓಂ ಕೂಡ ಸೂಪರ್ ಸ್ಟಾರ್ ಆಗುವ ಕನಸು ಕಾಣುತ್ತಾನೆ. ಆದರೆ ಆ ಒಂದು ಘಟನೆ ಅವನ ಜೀವನವನ್ನೇ ಬದಲಾಯಿಸಿಬಿಡುತ್ತದೆ.
ಅಪಘಾತವೊಂದರಲ್ಲಿ ಓಂ ಸಾವನ್ನಪ್ಪುತ್ತಾನೆ. ಆದರೆ ಆತ ಮರುಜನ್ಮ ಪಡೆಯುತ್ತಾನೆ. ತನ್ನ ಸಾವಿನ ನೆನಪಿರುತ್ತದೆ ಆತನಿಗೆ. ಅದರ ಹಿಂದಿನ ನಿಗೂಢತೆ ಭೇದಿಸಲು ಆತ ಪ್ರಯತ್ನಿಸುತ್ತಾನೆ.
ಫರಾ ಖಾನ್ ಅವರು ಸುಭಾಷ್ ಘಾಯ್ ಅವರ ಕರ್ಜ್ ಚಿತ್ರವನ್ನು ಎ ಟು ಝಡ್ ಪುನರ್ರಚಿಸಿದ್ದಾರೆ ಎಂಬ ಭಾವನೆ ಬರುತ್ತದೆ ಈ ಚಿತ್ರ ನೋಡಿದವರಿಗೆ. ಆದರೆ ಓಂ ಶಾಂತಿ ಓಂ ಅಲ್ಲಲ್ಲಿ ಪ್ರೇಕ್ಷಕರಿಗೆ ಅನಿರೀಕ್ಷಿತ ಅಚ್ಚರಿಗಳನ್ನು ಮುಂದಿಡುತ್ತದೆ.
ದೀಪಿಕಾಳೊಂದಿಗೆ ಅರ್ಜುನ್ ಜಗಳವಾಡುವುದು, ಈ ಮಹತ್ವದ ಸಂಭಾಷಣೆಯು ಶಾರೀಖ್ ಕಿವಿಗೆ ಬೀಳುವುದು, ಅರ್ಜುನ್ ತನ್ನ ಚಿತ್ರ "ಓಂ ಶಾಂತಿ ಓಂ"ನ ಸೆಟ್‌ಗೆ ದೀಪಿಕಾಳನ್ನು ಕರೆದೊಯ್ಯುವುದು... ಇವೆಲ್ಲವೂ ಮಧ್ಯಂತರಕ್ಕೆ ಮುನ್ನ ಕುತೂಹಲ ಮೂಡಿಸುತ್ತದೆ. ಮುಷ್ತಾಕ್ ಶೇಖ್ ಮತ್ತು ಫರಾ ಖಾನ್ ಅವರ ಚಿತ್ರಕಥೆಯೂ ಮನಮುಟ್ಟುತ್ತದೆ.
ಮಧ್ಯಂತರದ ಬಳಿಕ ಚಿತ್ರವು ಮತ್ತಷ್ಟು ರಸವತ್ತಾಗುತ್ತಾ ಹೋಗುತ್ತದೆ. ಆರಂಭಿಕ ಭಾಗದಲ್ಲಿ ಹಾಸ್ಯ ಪ್ರಧಾನವಾಗಿದ್ದರೆ, ದ್ವಿತೀಯಾರ್ಧವು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ.
ಅದರಲ್ಲಿ ಪುನರ್ಜನ್ಮಕ್ಕೆ ಸಂಬಂಧಿಸಿದ ಕಥೆಯ ಎಳೆ ಬಿಚ್ಚುತ್ತಾ ಹೋಗುತ್ತದೆ. ದರ್ದ್ ಎ ಡಿಸ್ಕೋ ಹಾಡು, ಈಗ ವೃದ್ಧೆಯಾಗಿರುವ ತಾಯಿ (ಕಿರಣ್ ಖೇರ್), ಓಂ ನ ಕಾರನ್ನು ಓಡಿಸಿಕೊಂಡು ಹೋಗುವುದು, ಫಿಲ್ಮ್ ಫೇರ್ ಪ್ರಶಸ್ತಿ ಪಡೆಯುವಾಗ ಶಾರೂಖ್ ಖಾನ್ ಪಾತ್ರದ ಪೂರ್ವ ಜನ್ಮದ ಫ್ಲ್ಯಾಶ್ ಬ್ಯಾಕ್‌ಗಳು, ತನ್ನ ಕಳೆದ ಜನ್ಮ ಅರ್ಧಕ್ಕೇ ಮುಕ್ತಾಯವಾಗಿತ್ತು ಎಂಬುದನ್ನು ಆತ ನೆನಪಿಸಿಕೊಳ್ಳುವ ಪರಿ... ಚೆನ್ನಾಗಿ ಚಿತ್ರಣವಾಗಿದೆ.
ಮತ್ತೊಮ್ಮೆ ದೀಪಿಕಾ ಕಾಣಿಸಿಕೊಂಡಾಗ ಪ್ರೇಕ್ಷಕ ಗೊಂದಲಕ್ಕೀಡಾಗುತ್ತಾನೆ. ಆದರೆ ಕಥೆಯ ಅಂತ್ಯದಲ್ಲಿ ಇದರ ಹಿಂದಿನ ನಿಗೂಢತೆ ಬಯಲಾಗುತ್ತದೆ. ಅದು ಕೂಡ ಪ್ರೇಕ್ಷಕರನ್ನು ಅಚ್ಚರಿಯಲ್ಲಿ ಕೆಡಹುತ್ತದೆ.
ಫರಾ ಅವರು ತಮ್ಮ ಪ್ರೇಕ್ಷಕರ ಇಷ್ಟಾನಿಷ್ಟಗಳನ್ನು ತಿಳಿದುಕೊಂಡೇ ಇಂಥ ಸಾಹಸಕ್ಕೆ ಕೈ ಹಚ್ಚಿದ್ದಾರೆ ಅನಿಸುತ್ತದೆ. ಫರಾ ಉತ್ತಮ ಕಥಾ ನಿರೂಪಕಿಯಾಗಿ ಇಲ್ಲಿ ಯಶಸ್ವಿಯಾಗಿದ್ದಾರೆ.
ನಟನೆಗೆ ಸಂಬಂಧಿಸಿದಂತೆ, ಶಾರೂಖ್ ತಮ್ಮ ನಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬಾದಷಾ ಎಂಬ ಹೆಸರನ್ನು ಗಟ್ಟಿಪಡಿಸಿಕೊಂಡಿದ್ದಾರೆ.
ದೀಪಿಕಾ ಅತ್ಯುತ್ತಮ ನಾಯಕಿಯಾಗುವ ಎಲ್ಲ ಲಕ್ಷಣಗಳನ್ನು ತೋರಿಸಿಕೊಟ್ಟಿದ್ದಾರೆ. ಹಾವ ಭಾವ, ವ್ಯಕ್ತಿತ್ವ ಎಲ್ಲವೂ ಪಾತ್ರೋಚಿತವಾಗಿದೆ. ಶಾರೂಖ್ ಅವರಂಥಹ ಟಾಪ್ ನಟನಿಗೆ ಸರಿದಂಡಿಯಾಗಿ ಪರದೆ ಮೇಲೆ ಕಾಣಿಸಿಕೊಳ್ಳುವುದೇನೂ ಸಣ್ಣ ಸಾಧನೆಯಲ್ಲ.
ಅರ್ಜುನ್ ರಾಮ್‌ಪಾಲ್ ನೆಗೆಟಿವ್ ಪಾತ್ರದಲ್ಲಿ ತಮ್ಮದೇ ಸ್ಟೈಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಶ್ರೇಯಸ್ ತಾಲ್ಪಡೆ ಮತ್ತೊಂದು ಅಚ್ಚರಿ. ಕಿರಣ್ ಖೇರ್ ಅದ್ಭುತ ನಟನೆ, ಜಾವೇದ್ ಶೇಖ್ ತಮ್ಮ ಪ್ರತಿಭೆ ಮೆರೆದಿದ್ದರೆ, ಬಿಂದು ಅವರು ಹಾಸ್ಯ ಕ್ಷಣಗಳಿಗೆ ಜೀವ ತುಂಬಿದ್ದಾರೆ.
ಒಟ್ಟಿನಲ್ಲಿ, ಓಂ ಶಾಂತಿ ಓಂ, ಬಾಲಿವುಡ್‌ನ ನಿಜವಾದ ಮಸಾಲಾ ಚಿತ್ರ. ಬಾಕ್ಸಾಫೀಸಿನಲ್ಲಿ ಚಿತ್ರವು ಎಲ್ಲ ದಾಖಲೆಗಳನ್ನು ಹೊಸದಾಗಿ ಬರೆಯುವ ಲಕ್ಷಣಗಳಿವೆ.