'ಮೈ ನೇಮ್ ಈಸ್ ಅಂಥೋನಿ ಗೊನ್ಸಾಲ್ವಿಸ್' ಎಂಬುದು ಅನಾಥ, ಕನಸುಗಾರ ಯುವಕನೊಬ್ಬನ ಕಥೆ. ಇಡೀ ದಿನ ತಾನೊಬ್ಬ ದೊಡ್ಡ ಸ್ಟಾರ್ ಆಗುತ್ತೇನೆಂದು ಕನಸು ಕಾಣುತ್ತಾ, ಪಾರ್ಟ್ ಟೈಂನಲ್ಲಿ ತನ್ನ ಗೆಳತಿಯೊಂದಿಗೆ ಡ್ಯುಯೆಟ್ ಹಾಡುತ್ತಾ ಕಾಲ ಕಳೆಯುವಾತ. ಗೊನ್ಸಾಲ್ವಿನ್ (ನಿಖಿಲ್ ದ್ವಿವೇದಿ). ಆದರೆ ಕನಸು ಕಾಣುವುದು ಮತ್ತು ಬಾರ್ ಒಂದರಲ್ಲಿ ಮದಿರೆ ಸರ್ವ್ ಮಾಡುವುದರ ಹೊರತಾಗಿ, ಈ ನಟ ತಮ್ಮ ಚೊಚ್ಚಲ ಚಿತ್ರದಲ್ಲಿ ಹೀರೋ ಅಂತ ತೋರಿಸಿಕೊಳ್ಳಲು ಇನ್ನಷ್ಟು ಪೋಷಕ ದೃಶ್ಯಾವಳಿಯೂ ಇರಬೇಕಿತ್ತು ಅಂತ ಅನ್ನಿಸುತ್ತದೆ.
ಅಂತೆಯೇ, ಆತನ ಗೆಳತಿಯ ಜೀವನ ಇತರ ಚಿತ್ರಗಳಂತೆಯೇ ಅಂಡರ್‌ವರ್ಲ್ಡ್ ಸುತ್ತ ಸುತ್ತುತ್ತಾ ಇರುತ್ತದೆ. ಅದೇ ಡಿಶುಂ ಡಿಶುಂಗಳು ಕಾಣಿಸುತ್ತಿರುತ್ತವೆ.
ಇನ್ನೇನು ಜೀವನದಲ್ಲಿ ತಾನು ಸೆಟ್ ಆಗಿಬಿಟ್ಟೆ ಎಂದು ಆತನಂದುಕೊಂಡಾಗ ತಿರುವುಗಳು ಎದುರಾಗುತ್ತವೆ. ಆತ ಅಂಡರ್‌ವರ್ಲ್ಡ್ ಡಾನ್ (ಪವನ್ ಮಲ್ಹೋತ್ರಾ)ನನ್ನು ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾನೆ. ಯಾಕೆಂದರೆ ಆತ ಕಟ್ಟಾ ಕ್ರಿಮಿನಲ್ ಆಗಿದ್ದರೂ, ಈ ಅನಾಥ ಮಗುವನ್ನು ತಂದು ಒಳ್ಳೆಯ ಮನುಷ್ಯನನ್ನಾಗಿ ರೂಪಿಸಿದವನು. ಇದು ಋಣಾನುಬಂಧ.
ಉತ್ತರಾರ್ಧದಲ್ಲಿ ಆತ ಹಲವಾರು ಏಳು ಬೀಳುಗಳನ್ನು ಕಂಡು ಕೊನೆಯಲ್ಲಿ ಹೇಗೆ ವಿಜಯಿಯಾಗುತ್ತಾನೆ ಎಂಬ ಕಥೆಯಿದೆ.
ಕಾಮಿಡಿ/ರೋಮ್ಯಾನ್ಸ್ ಪ್ರಕಾರದ ಈ ಚಿತ್ರದ ನೆರೇಶನ್, ವಿಶೇಷವಾಗಿ ಪೂರ್ವಾರ್ಧದಲ್ಲಿ, ಹೀರೋನ ಬಿಂದಾಸ್ ಜೀವನದ ಕುರಿತಾಗಿ ವಿವರಿಸುವಾಗ ನಿಧಾನ ಅನಿಸುತ್ತದೆ. ಆದರೆ, ತಮ್ಮ ಚೊಚ್ಚಲ ಚಿತ್ರ 'ತೇರೇ ಮೇರೇ ಸಪ್ನೇ'ಯಿಂದ ಇತ್ತೀಚಿನ 'ಮುನ್ನಾಭಾಯಿ ಎಂಬಿಬಿಎಸ್' ಮತ್ತು 'ಲಗೇ ರಹೋ ಮುನ್ನಾಭಾಯಿ'ವರೆಗೆ ರಂಜಿಸಿದ್ದ ಅರ್ಷಾದ್ ವಾರ್ಸಿ, ಇಲ್ಲಿಯೂ ತಮ್ಮ ಟಪೋರಿಗಿರಿಯ ಮೂಲಕ ಅದ್ಭುತವಾಗಿ ಮನರಂಜಿಸುತ್ತಾರೆ. ಎಷ್ಟೆಂದರೆ, ಎಲ್ಲೋ ಹೀರೋ ಅಂತೋನಿಯೇ ಕಳೆದುಹೋದಂತೆ ಭಾಸವಾಗುತ್ತದೆ.
ಚಿತ್ರದಲ್ಲಿ ಅಮೃತಾ ರಾವ್ ಹಾಟ್ ಆಗಿ ಕಂಡುಬಂದರೂ, ಆಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿಲ್ಲ. ಆಕೆಯ ಪಾತ್ರಕ್ಕೆ ಹೆಚ್ಚಿನ ಕೆಲಸವೂ ಇರಲಿಲ್ಲ. ಅನುಪಮ್ ಖೇರ್ ಮತ್ತು ವಿದ್ಯಾಶಂಕರ್ ಪಾಂಡೆ ಮುಂತಾದ ನಟರ ಕೌಶಲ್ಯವೂ ಸರಿಯಾಗಿ ಬಳಕೆಯಾಗಿಲ್ಲ. ಹೋಲಿಸಿದರೆ, ಪಾಕಿಸ್ತಾನಿ ನಟ ಜಾವೇದ್ ಶೇಖ್ ಮತ್ತು ಪವನ್ ಮಲ್ಹೋತ್ರಾ ಅವರ ಸ್ಥಿತಿ ಉತ್ತಮ. ಸ್ಥಳೀಯ ಚರ್ಚೊಂದರ ಪಾದ್ರಿಯ ಪಾತ್ರ ನಿರ್ವಹಿಸುವ ಮಿಥುನ್ ಚಕ್ರವರ್ತಿ ಅವರು ಕೆಲವು ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ.
ನಿರ್ದೇಶಕ ಇ.ನಿವಾಸ್ ಅವರ ಬಗ್ಗೆ ಹೇಳುವುದಾದರೆ, ಶೂಲ್‌ನಂತಹ ಚಿತ್ರ ನಿರ್ದೇಶಿಸಿದವರಿಂದ ಪ್ರೇಕ್ಷಕರು ಮತ್ತಷ್ಟು ಸರಾಗವಾದ ಕಥಾ ಪ್ರಸ್ತುತಿಯನ್ನು ನಿರೀಕ್ಷಿಸುತ್ತಾರೆ. ಮಾಮೂಲಿ ಚಿತ್ರಕಥೆಯ ಕಾರಣಕ್ಕೋ ಏನೋ, ಇದು ರಂಜಿಸುವಲ್ಲಿ ಸೋಲುತ್ತದೆ.
ಆದರೆ ಕೆಲವು ಗಮನ ಸೆಳೆಯು ಅಂಶಗಳೂ ಇವೆ. ಉದಾಹರಣೆಗೆ ಟಾಪ್ ಡಾನ್ ಅನುಪಮ್ ಖೇರ್ ಪರಿಸ್ಥಿತಿಗೆ ತಕ್ಕಂತೆ ಹಾಡುವುದು ಮತ್ತು ಅಂಥೋನಿಯನ್ನು ಒಬ್ಬ ಒಳ್ಳೆಯ ಮನುಷ್ಯನನ್ನಾಗಿ ಮಾಡಲು ಕರೆತಂದೆ ಅಂತ ಪವನ್ ತನ್ನ ಒಡೆಯ ಅನುಪಮ್‌ಗೆ ಹೇಳುವುದು... ಕಾಮಿಡಿ ಮತ್ತು ರೋಮ್ಯಾನ್ಸ್ ಜತೆಯಾಗಿಸುವ ಪ್ರಯತ್ನಕ್ಕೆ ಸಂಬಂಧಿಸಿ, ನಿವಾಸ್ ಅವರ 'ಲವ್ ಕೇ ಲಿಯೇ ಕುಛ್ ಬೀ ಕರೇಗಾ' ಉತ್ತಮ ಅಂತನಿಸುತ್ತದೆ.