ಈ ಹಿಂದಿನ ಎಲ್ಲಾ ದೇವದಾಸ್‌ಗಳಿಗಿಂತ 'ದೇವ್ ಡಿ' ಭಿನ್ನ ಚಿತ್ರ ಎನ್ನಲು ಹಲವು ಕಾರಣಗಳಿವೆ. ಆಧುನಿಕನಾಗಿ ಕಾಣಿಸಿಕೊಂಡಿರುವ ಇಲ್ಲಿನ ದೇವ್ ಪ್ರತಿ ಫ್ರೇಮಿನಲ್ಲೂ ನಾವಿನ್ಯತೆ ಮೆರೆಯುತ್ತಾನೆ. ಎಲ್ಲದಕ್ಕಿಂತ ಹೆಚ್ಚಾಗಿ ಬಾಲಿವುಡ್‌ನಲ್ಲಿರುವ ಈಗಿನ ಮಂತ್ರಗಳಿಗಿಂತ ಭಿನ್ನವಾದುದನ್ನು ನೀವಿಲ್ಲಿ ನೋಡಬಹುದಾಗಿದೆ.
ಅನುರಾಗ್ ಕಶ್ಯಪ್ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣಿಸುತ್ತಾರೆ. ಅಭಯ್ ಡಿಯೋಲ್ ನಟನೆಯ ಬಗ್ಗೆ ಇನ್ನು ಯಾರೂ ಪ್ರಮಾಣ ಪತ್ರ ನೀಡಬೇಕಾಗಿಲ್ಲ. ನಟಿಯರಾದ ಮಾಹಿ ಗಿಲ್ ಮತ್ತು ಕಲ್ಕಿ ಕೊಯಿಚ್ಲಿನ್‌ರದ್ದು ಕೂಡ ಅದ್ಭುತ ನಿರ್ವಹಣೆ.
ಪಂಜಾಬ್‌ನ ಶ್ರೀಮಂತ ಜಮೀನ್ದಾರನ ಮಗನಾದ ದೇವ್‌ನನ್ನು (ಅಭಯ್ ಡಿಯೋಲ್) ಚಿಕ್ಕಂದಿನಲ್ಲೇ ಲಂಡನ್‌ಗೆ ಕಳುಹಿಸಲಾಗಿರುತ್ತದೆ. ಹಲವು ವರ್ಷಗಳ ನಂತರ ವಾಪಸಾಗುವ ದೇವ್ ಬಾಲ್ಯ ಸ್ನೇಹಿತೆ ಪಾರೋ(ಮಾಹಿ ಗಿಲ್)ಳನ್ನು ಭೇಟಿಯಾಗುತ್ತಾನೆ. ಆದರೆ ಆಕೆಯೊಂದಿಗೆ ಬೇರ್ಪಡಿಸಲಾಗದಷ್ಟು ಸಂಬಂಧ ಹೊಂದಿದ್ದ ದೇವ್‌ಗೆ ಅಲ್ಲಿ ನಿರಾಸೆ ಕಾದಿರುತ್ತದೆ. ಯಾವುದೋ ತಪ್ಪುಕಲ್ಪನೆಯಿಂದ ಪಾರೋಗೆ ಆಗಲೇ ಬೇರೆ ಮದುವೆಯಾಗಿರುತ್ತದೆ. ಪಾರೋ ತನ್ನ ಪಾಡಿಗೆ ತಾನಿರುವುದರಿಂದ ದೇವ್ ತನ್ನದೆಲ್ಲವನ್ನೂ ದೇವದಾಸ್‌ನಂತೆ ಕಳೆದುಕೊಂಡು ಖಿನ್ನತೆಗೊಳಗಾಗುತ್ತಾನೆ.
ನಿರ್ಲಕ್ಷ್ಯಕ್ಕೊಳಗಾಗುವ ಆತ ಮನೆಯಿಂದ ದೂರಾಗುತ್ತಾನೆ. ಡ್ರಗ್ಸ್ ಮತ್ತು ಬಾಟ್ಲಿಯಿಲ್ಲದಿದ್ದರೆ ಬದುಕಲಾರ ಎಂಬಷ್ಟು ಅವುಗಳಿಗೆ ಹತ್ತಿರವಾಗಿರುತ್ತಾನೆ. ಇವೆಲ್ಲದಕ್ಕೂ ಆತನ ತಂದೆ ಪುತ್ರ ವ್ಯಾಮೋಹದಿಂದ ಧನ ಸಹಾಯ ಹರಿದು ಬರುತ್ತಿರುತ್ತದೆ.
ಲೆನ್ನಿ ಸೆಕ್ಸ್ ಎಂಎಂಎಸ್ ವಿವಾದದಿಂದ ಬದುಕನ್ನು ಕೆಡಿಸಿಕೊಂಡವಳು. ಸ್ವತಃ ಕುಟುಂಬವೇ ಪಾರೋವನ್ನು ಪರಿತ್ಯಕ್ತಗೊಳಿಸಿರುತ್ತದೆ. ಏಕಾಂಗಿಯಾಗುವ ಲೆನ್ನಿಗೆ ಆಶ್ರಯ ಚುನ್ನಿಯಿಂದ ಬಂದಿರುತ್ತದೆ. ಅದು ವೇಶ್ಯಾಗೃಹ, ಚುನ್ನಿ ಪಿಂಪ್..! ನಂತರ ಆಕೆಯ ಬದುಕೇ ಬದಲಾಗಿ ಹೋಗುತ್ತದೆ. ಜತೆಗೆ ಹೆಸರು ಕೂಡ. ಚಂದಾ (ಕಲ್ಕಿ) ಎಂದು ಕರೆಸಿಕೊಳ್ಳುವ ಆಕೆಯ ಬಾಳಿನಲ್ಲಿ ಹೀಗೆ ಎಲ್ಲಾ ಚಟಗಳನ್ನಂಟಿಸಿಕೊಳ್ಳುವ ದೇವ್ ಹತ್ತಿರವಾಗುತ್ತಾನೆ. ದೇವ್ ಮತ್ತು ಚಂದಾಳ ನಡುವೆ ಸಂಬಂಧ ಆರಂಭವಾಗುವುದೇ ದ್ವೇಷ, ತಿರಸ್ಕಾರ ಮತ್ತು ಅಪಹಾಸ್ಯದ ಮೂಲಕ. ಹೀಗೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ ಚಿತ್ರ ಸಾಗುತ್ತದೆ...
ಇಲ್ಲಿ ಹಳೆ ದೇವದಾಸ್‌ಗಳ ಚಿತ್ರಣಗಳಿದ್ದರೂ ಸಂಬಂಧವಿದ್ದಂತೆ ಭಾಸವಾಗುವುದಿಲ್ಲ. ದೇವ್ ಡಗ್ಸ್, ವೊಡ್ಕಾಗಳಿಗೆ ಮೊರೆ ಹೋಗುವಷ್ಟು, ಈಮೈಲ್ ಮೂಲಕ ಪಾರೋ ತನ್ನ ಬೆತ್ತಲೆ ಚಿತ್ರಗಳನ್ನು ದೇವ್‌ಗೆ ಕಳುಹಿಸುವಷ್ಟು, ಆಕೆ ಹೊಲದಲ್ಲಿ ರೊಮ್ಯಾನ್ಸ್ ಮಾಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸುವಷ್ಟು ಚಿತ್ರ ಆಧುನಿಕ. ಚಂದಾ ಕಾಮಪಿಪಾಸುವಿನಂತೆ ಫೋನ್‌ನಲ್ಲೇ ಸೆಕ್ಸ್ ಮಾತನಾಡಿ ತೃಪ್ತಿಪಟ್ಟುಕೊಳ್ಳುತ್ತಾಳೆ. ದೇವ್, ಪಾರೋ ಮತ್ತು ಚಂದಾ ಚಿತ್ರದುದ್ದಕ್ಕೂ ದಿಟ್ಟತನ ಮತ್ತು ಕ್ರಾಂತಿಕಾರಿಗಳಂತೆ ಕಾಣಿಸುತ್ತಾರೆ.
ಅಮಿತ್ ತ್ರಿವೇದಿಯವರ ಸಂಗೀತ ಕಿವಿಯನ್ನು ಇಂಪಾಗಿಸುತ್ತದೆ. ಅದರಲ್ಲೂ 'ಇಮೋಷನಲ್ ಅತ್ಯಾಚಾರ್' ಈಗಾಗಲೇ ಭಾರೀ ಜನಪ್ರಿಯಗೊಂಡಿದೆ. ಜತೆಗೆ ನಯನ್ ತರ್ಸೇ, ಪರ್ದೇಸಿ ಮುಂತಾದ ಗೀತೆಗಳೂ ಗಮನ ಸೆಳೆಯುತ್ತವೆ. ರಾಜೀವ್ ರವಿಯವರ ಛಾಯಾಗ್ರಹಣ ಉತ್ತರ ಭಾರತದ ಸೌಂದರ್ಯವನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿದೆ. ಖಂಡಿತಾ ದೇವ್ ಡಿ ನೋಡಬಹುದಾದ ಚಿತ್ರ.