ಡೂಂಢತೇ ರೆಹ್ ಜಾವೋಗೇ.
ಈ ಸಿನಿಮಾದ ಒಂದೇ ಶಬ್ದದ ವಿಮರ್ಶೆ ಎಂದರೆ ಇದೊಂದು ಚೆಂದನೆಯ ಪ್ಲಸೆಂಟ್ ಸರ್‌ಪ್ರೈಸ್ ಅಂತ ವಿವರಿಸಬಹುದೇನೋ. ಈ ಹಿಂದೆ ಎಷ್ಟೋ ಕಾಮಿಡಿ ಸಿನಿಮಾಗಳು ಬಂದು ಹೋಗಿವೆ. ಕಥೆಯೇ ಇಲ್ಲದ ನಾನ್‌ಸ್ಟಾಪ್ ನಾನ್‌ಸೆನ್ಸ್ ಕಾಮಿಡಿಯಾಗಿದ್ದರೂ ಜನ ಅವನ್ನು ನೋಡಿ ಸಾಕಷ್ಟು ನಕ್ಕಿದ್ದರು. ನಿಜಕ್ಕೂ ಡೂಂಢ್‌ತೇ..ಯೂ ಅಂಥದ್ದೇ ಒಂದು ನಾನ್‌ಸ್ಟಾಪ್ ನಾನ್‌ಸೆನ್ಸ್ ಕಾಮಿಡಿ. ಆದರೆ ಇಲ್ಲಿ ಕಾಮಿಡಿಯ ಜತೆಜತೆಗೆ ಕಥೆಯೂ ಇದೆ. ಬಹುದೊಡ್ಡ ನಿರೀಕ್ಷೆಯೊಂದಿಗೆ ಈ ಚಿತ್ರ ನೋಡಲು ಹೋದರೆ ನಿಮಗೆ ನಿರಾಶೆ ಗ್ಯಾರೆಂಟಿ. ಜತೆಗೆ ನಿಮ್ಮ ಅಮೂಲ್ಯ ಮೂರು ಗಂಟೆಗಳನ್ನು ವೇಸ್ಟ್ ಮಾಡಿದ ಹಪಹಪಿತನ ನಿಮ್ಮನ್ನು ಸುಮ್ಮನೆ ಕಾಡದೆ ಬಿಡದು. ಆದರೂ, ಸದ್ಯದ ಜಾಗತಿಕ ಆರ್ಥಿಕ ಕುಸಿತದ ಪರಿಣಾಮದಿಂದ ಕಚೇರಿ, ಮನೆ ಎಲ್ಲೆಲ್ಲೂ ಟೆನ್ಶನ್ ನಿಮ್ಮನ್ನು ಕಾಡುತ್ತಿದ್ದರೆ, ಆಕಾಶವೇ ನಿಮ್ಮ ತಲೆ ಮೇಲೆ ಕಳಚಿ ಬಿದ್ದಂತಿದ್ದರೆ, ಮನಸ್ಸ ಹಗುರ ಮಾಡಿ ನಿರಾಳರಾಗಬೇಕೆಂದಿದ್ದರೆ, ಖಂಡಿತ ಧಾರಾಳವಾಗಿ ಢೂಂಢ್‌ತೇ..ಗೆ ಶರಣು ಹೋದರೆ ತಪ್ಪಲ್ಲ.ಇದೊಂದು ಸಿಲ್ಲಿ ಸಿನಿಮಾ. ಆದರೂ ಫನ್ನಿಯಂತೂ ನಿಜ. ಒಂದು ಹಾಸ್ಯಾಸ್ಪದ ಕಥಾಹಂದರ. ಜತೆಗೆ ಪರೇಶ್ ರವಾಲ್, ಜಾನಿ ಲಿವರ್ ಗ್ಯಾಂಗ್ ಹೊತ್ತು ತರುವ ಹೊಟ್ಟೆಹುಣ್ಣಾಗಿಸುವ ಜೋಕುಗಳು, ಚಿತ್ರದುದ್ದಕ್ಕೂ ರಿಪೀಟ್ ಆಗುತ್ತಿರುವ ಅದೇ ಸೆಟ್. ಹೀಗಿದ್ದರೂ, ಚಿತ್ರ ನಗಿಸುತ್ತದೆ.ಆನಂದ್ (ಕುನಾಲ್ ಖೇಮು) ಹಾಗೂ ರಾಜ್ (ಪರೇಶ್ ರವಾಲ್) ಇಬ್ಬರು ಮುಂಬೈ ರಸ್ತೆಗಳಲ್ಲಿ ತಿರುಗುತ್ತಿರುತ್ತಾರೆ. ಆನಂದ್ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರೆ ರಾಜ್ ನಿರ್ಮಾಪಕ. ಅವರಿದ್ದರೂ ಸೇರಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಒಂದು ಫೀಚರ್ ಫಿಲ್ಮ್ ತರಲು ಯೋಚಿಸುತ್ತಾರೆ. ಜತೆಗೆ ಅದು ಎಷ್ಟು ಕೆಟ್ಟದಾಗಿರಬೇಕೆಂದರೆ ವೀಕ್ಷಕರು ಮೊದಲ ದಿನವೇ ಅದನ್ನು ತೂರಿಬಿಡಬೇಕೆಂದು ನಿರೀಕ್ಷಿಸುತ್ತಾರೆ. ಜತೆಗೆ ಈ ಸಿನಿಮಾ ನೆಪದಲ್ಲಿ ಹೆಚ್ಚು ಹಣವನ್ನು ಸಂಗ್ರಹಿಸಿ ಸಿನಿಮಾಕ್ಕೆ ಕಡಿಮೆ ಖರ್ಚು ಮಾಡಿ ಉಳಿದ ಲಾಭವನ್ನು ತಾವೇ ಇಟ್ಟುಕೊಳ್ಳಬೇಕೆಂಬ ಪ್ಲಾನ್ ಅವರಿಬ್ಬರದ್ದು. ಆದರೆ ದುರ(ಅ)ದೃಷ್ಟವಶಾತ್ ಅವರ ಚಿತ್ರ ಸೂಪರ್ ಹಿಟ್ ಆಗುತ್ತದೆ. ಇಂತಹ ಕಥಾಹಂದರದಲ್ಲಿ ನಡೆವ ಢೂಂಢ್‌ತೇ ಚಿತ್ರದಲ್ಲಿ ಕಥೆಗಿಂತಲೂ ಪ್ರೇಕ್ಷಕರನ್ನು ನಗಿಸುವತ್ತ ಗಮನ ಹರಿಸಲಾಗಿದೆ. ಢೂಂಢ್‌ತೇ..ಯಂತಹ ಎಲ್ಲ ಚಿತ್ರಗಳೂ ಮಾಡುವುದು ಅದನ್ನೇ. ಸಿನಿಮಾದುದ್ದಕ್ಕೂ ಬರುವ ಜೋಕ್‌ಗಳೇ ತಮಾಷೆಯಾಗಿ ಕಾಣುವ ಜತೆಗೆ ಹಾಸ್ಯಭರಿತ ಡೈಲಾಗುಗಳು ನಗಿಸುವಲ್ಲಿ ಸೋಲುವುದಿಲ್ಲ.ಆದರೆ ಚಿತ್ರ ಮೊದಲ ಒಂದು ಗಂಟೆ ತಮಾಷೆಯಾಗಿ ಸಾಗಿದರೆ ಎರಡನೇ ತಾಸಿನಲ್ಲಿ ಬೋರು ಹೊಡೆಸುತ್ತದೆ. ಕೊನೆಗೆ ಪರವಾಗಿಲ್ಲ. ನಿರ್ದೇಶಕ ಉಮೇಶ್ ಶುಕ್ಲ ಚಿತ್ರದಲ್ಲಿ ತಾಂತ್ರಿಕತೆಗೆ ಹೆಚ್ಚಿಗೆ ಮಹತ್ವ ನೀಡಿಲ್ಲವಾದರೂ ಪ್ರೇಕ್ಷಕರು ಚಿತ್ರವನ್ನು ಕಣ್ಣಿಟ್ಟು ನೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ನಟರ ಆಯ್ಕೆಯೂ ಚೆನ್ನಾಗಿದೆ. ಸಾಜಿದ್-ವಾಜಿದ್ ಅವರ ಸಂಗೀತ ತುಂಬ ಫಾಸ್ಟ್ ಆಗಿದೆ. ಪರೇಶ್ ಹಾಗೂ ಜಾನ್ ಪ್ರೇಕ್ಷಕರ ಸಮಯವ್ನನು ತಮ್ಮ ನಗುವಿನ ಮೂಲಕ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುನಾಲ್ ಖೇಮು ಹೊಸ ರೂಪ ಇಷ್ಟಪಡುವಂತಿದೆ. ಸೋಹಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ, ತಲೆಗೇನೂ ಕೆಲಸ ಕೊಡದೆ, ಕೇವಲ ಒಂದಷ್ಟು ತಾಸು ನಗಬೇಕು ಎನ್ನುವವರಿಗೆ ಇಲ್ಲಿ ನಗಲು ಯಾರೂ ಅಡ್ಡಿಪಡಿಸುವುದಿಲ್ಲ. ರಿಲ್ಯಾಕ್ಸ್ ಆಗಿ ಮನರಂಜನೆ ಪಡೆಯಲು ಮೂರು ಗಂಟೆಯ ಈ ಚಿತ್ರ ಧಾರಾಳ ಸಾಕು.