ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಚಿಂತನೆಗೆ ಹಚ್ಚುವ ಮನೋಜ್ಞ ಚಿತ್ರ 'ಫಿರಾಕ್'
ಸಿನಿಮಾ ವಿಮರ್ಶೆ
Feedback Print Bookmark and Share
 
IFM
'ಫೈರ್'‌, 'ಅರ್ಥ್' ಚಿತ್ರಗಳಲ್ಲಿ ವಿಶ್ವದ ಗಮನ ಸೆಳೆದ, ಕನ್ನಡದಲ್ಲೂ 'ದೇವೀರಿ'ಯಲ್ಲಿ ಬಂದು ಹೋದ ಕಪ್ಪು ಸುಂದರಿ ನಂದಿತಾ ದಾಸ್‌ರ 'ಫಿರಾಕ್' ಚಿತ್ರ ಹೊರಬಂದಿದೆ. ಅಂದ ಹಾಗೆ, ಅವರು ಈ ಬಾರಿ ನಟನೆ ಮಾಡಿಲ್ಲ ಅನ್ನೋದೇ ಕುತೂಹಲದ ವಿಷಯ. 'ಫಿರಾಕ್' ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ನಂದಿತಾ ದಾಸ್ ಅವರದ್ದು. ನಂದಿತಾ ತಮ್ಮ ನಟನೆಯನ್ನೂ ತಮ್ಮ ನಿರ್ದೇಶನದಲ್ಲಿ ಮೀರಿಸಿದ್ದಾರೆ ಎಂಬ ಉದ್ಗಾರ ಚಿತ್ರ ವೀಕ್ಷಿಸಿ ಹೊರ ಬಂದ ಪ್ರೇಕ್ಷಕನ ಮನಸ್ಸಿನಲ್ಲಿ ಬಾರದಿರದು.

ಮತೀಯ ಗಲಭೆಯಲ್ಲಿ ಅವಯವಗಳನ್ನು ಕಳೆದುಕೊಂಡರೂ ಪ್ರೀತಿ, ನಂಬಿಕೆಯಲ್ಲಿ ಬದುಕುವ ಕ್ಷೋಭೆಯನ್ನು ತೆರೆಯ ಮೇಲೆ ಯಶಸ್ವಿಯಾಗಿ ಹಿಡಿದಿಟ್ಟ ನಂದಿತಾ ದಾಸ್ ನಿರ್ದೇಶನದ ಫಿರಾಕ್ ಚಿತ್ರ ಪ್ರೇಕ್ಷಕರನ್ನು ಮೂಕರನ್ನಾಗಿಸುತ್ತದೆ. ಈ ಚಿತ್ರ ಮಾನವನ ಜೀವನೋತ್ಸಾಹದ ಪಯಣ. ಚಿತ್ರ ನೋಡಿದರೆ, 'ಸಿನಿಮಾ ಅಂದರೆ ಹೀಗಿರಬೇಕು' ಅನ್ನೋ ಉದ್ಗಾರ ತಾನೇ ತಾನಾಗಿ ಹೊರಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂದೇಶ ನೀಡುವ, ಚಿಂತನೆಗೆ ಹಚ್ಚುವ ಚಿತ್ರಗಳಿಗಿಂತಲೂ ಮನರಂಜನೆಯನ್ನೇ ಉದ್ದೇಶವಾಗಿಸುವ ಪ್ರಯತ್ನ ಹೆಚ್ಚಾಗುತ್ತಿರುವ ಸಂದರ್ಭ ಇದೊಂದು ಸಮಯೋಚಿತ, ಸಂದರ್ಭೋಚಿತ ಸಾಮಾಜಿಕ ಕೊಡುಗೆ ಎಂದೇ ಹೇಳಬಹುದು.

'ಫಿರಾಕ್' ಎಲ್ಲೂ ಕೋಮುವಾದವನ್ನು ವೈಭವೀಕರಿಸಿಲ್ಲ. ರಾಜಕೀಯವಾಗಿ ಸಾಮಾಜಿಕವಾಗಿ ಬುದ್ಧಿಜೀವಿಗಳ, ಚಿಂತಕರ ತುಡಿತವನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇಡೀ ಚಿತ್ರವನ್ನು ನಿರೂಪಿಸಿದ ಶೈಲಿ ಉಜ್ವಲ ಹಾಗೂ ಮನೋಹರವಾದದ್ದು. ರವಿಚಂದ್ರನ್ ಅವರ ಕ್ಯಾಮರಾ ಕೈಚಳಕ, ಶ್ರೀಕರ ಪ್ರಸಾದ್ ಅವರ ಚಾಕಚಕ್ಯತೆಯ ಎಡಿಟಿಂಗ್, ಗೌತಮ್ ಸೇನ್ ಅವರ ಆರ್ಟ್‌ವರ್ಕ್ ಅದ್ಭುತ ಚಿತ್ರವನ್ನೇ ಸೃಷ್ಟಿಸಿಬಿಟ್ಟಿದೆ.

ಕಥೆಯೊಂದಿಗೆ ಸಂಭಾಷಣೆಯೇ ಚಿತ್ರದ ಜೀವಾಳ. ಚಿತ್ರದ ಪಾತ್ರಗಳು ಹಿಂದಿ, ಇಂಗ್ಲೀಷ್ ಹಾಗೂ ಗುಜರಾತಿ ಭಾಷೆಯಲ್ಲಿ ಮಾತನಾಡುತ್ತವೆ. ಕೆಲವೊಮ್ಮೆ ಸಂಭಾಷಣೆಗಳು ಕಾವ್ಯಾತ್ಮಕವಾಗಿದ್ದರೂ, ಮನಸ್ಸನ್ನು ಹಿಡಿದಿಟ್ಟುತ್ತದೆ. ಭಾವುಕರನ್ನಾಗಿಸುತ್ತದೆ. ಕಥೆಯ ನಿರೂಪಣೆಯಲ್ಲೂ ಅಲ್ಲಲ್ಲಿ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ತಡೆಗಳಿವೆ. ಇದಕ್ಕೆ ಚಪ್ಪಾಳೆಗಿಂತಲೂ ಹೆಚ್ಚಿನ ತೂಕದ ಪ್ರೇಕ್ಷಕರ ಮೌನದ ಉತ್ತರ ಸಿಗುತ್ತದೆ. ನಂದಿತಾ ದಾಸ್ ಹಾಗೂ ಶುಚಿ ಕೊಠಾರಿ ಅವರ ಕಥೆ ತೂಕದ್ದು. ಯಾವುದೇ ಪಾತ್ರವೂ ಚಿತ್ರದಲ್ಲಿ ಅನಗತ್ಯ ಎನಿಸುವುದಿಲ್ಲ.
IFM
ಚಿತ್ರದ ಕಥೆ ಹೀಗೆ ಸಾಗುತ್ತದೆ. ಕೋಮುವಾದಿ ರಾಜಕಾರಣವೇ ಕಥಾವಸ್ತು. ಗುಜರಾತಿನ ಗೋದ್ರಾ ಗಲಭೆಯ ನಂತರದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಕಥೆ ಸಾಗುತ್ತದೆ. ಅಂತರ್ಧಮೀಯ ಮದುವೆಯಾದ ಹಿಂದು- ಮುಸ್ಲಿಂ ದಂಪತಿಗಳು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಗಂಡ (ಸಂಜಯ್ ಸೂರಿ) ತನ್ನ ಪರಿಸರದಲ್ಲಿ ಶಾಂತಿಯಿಂದ ಇರಲು ಸಮೀರ್ ಶೇಖ್ ಸಮೀರ್ ದೇಸಾಯಿ ಆಗುತ್ತಾನೆ. ಇಲ್ಲಿ ಸಮೀರ್ ಎಂಬಾತ ಮಧ್ಯಮ ವರ್ಗದ ಸಮಾಜಲ್ಲಿರುವ ಹಿಂದು ಮುಸ್ಲಿಂ ವಿಭಜನೆಗೆ ಒಂದು ರೂಪಕವಾಗಿ ಗೋಚರಿಸುತ್ತದೆ. ಕೋಮುವಾದಿ ಪ್ರಕ್ಷುಬ್ದತೆಯನ್ನು ನೇಯುತ್ತಾ ಹೋಗಿರುವ ಈ ಚಿತ್ರದಲ್ಲಿ ಪ್ರತಿಯೊಬ್ಬ ನಾಗರಿಕನನ್ನೂ ಮತ್ತೆ ಕೋಮುವಾದದ ಬಗ್ಗೆ ಚಿಂತಿಸುವಂತೆ ಮಾಡುತ್ತದಲ್ಲದೆ ಜವಾಬ್ದಾರಿಯನ್ನು ಎಚ್ಚರಿಸುತ್ತದೆ.

ಮಧ್ಯಮವರ್ಗದ ಬ್ಯುಸಿನೆಸ್‌ಮನ್ ಪಾತ್ರವನ್ನು ಪರೇಶ್ ರವಾಲ್ ತುಂಬ ಧೈರ್ಯವಾಗಿಯೇ ನಿಭಾಯಿಸಿದ್ದಾರೆ. ತೊಂದರೆಯ ಸನ್ನಿವೇಶವನ್ನು ಚಿತ್ರದುದ್ದಕ್ಕೂ ಸಮರ್ಥವಾಗಿ ಹಿಡಿದಿಡುವ ಕೆಲಸವನ್ನು ನಂದಿತಾ ಮಾಡಿದ್ದಾರೆ. ಅಪರಾಧಿ ಪ್ರಜ್ಞೆಯಿಂದ ಮಕ್ಕಳನ್ನು ಸಾಕುವ ತಾಯಿಯ ಪಾತ್ರವನ್ನು ದೀಪ್ತಿ ನವಾಲ್ ಅತ್ಯುತ್ತಮವಾಗಿಯೇ ನಿಭಾಯಿಸಿದ್ದಾರೆ. ಶಕ್ತಿ ಸಾಮಂತ ಅವರ 'ಅಮರ್ ಪ್ರೇಮ್' ಚಿತ್ರದಲ್ಲಿನ ಶರ್ಮಿಳಾ ಠಾಗೋರ್ ಥರಹ ಅವರು ಈ ಚಿತ್ರದಲ್ಲಿ ಕಾಣುತ್ತಾರೆ ಎಂದರೆ ಆಶ್ಚರ್ಯವಿಲ್ಲ. ಬ್ರೋಕರ್ ಪಾತ್ರದಲ್ಲಿ ಪರೇಶ್ ರವಾಲ್, ಶಾಸ್ತ್ರೀಯ ಸಂಗೀತಗಾರನ ಪಾತ್ರದಲ್ಲಿ ಹೆಚ್ಚು ಧೈರ್ಯವಂತರಾಗಿಯೇ ನಟಿಸಿದ್ದಾರೆ. ನಾಸಿರುದ್ದೀನ್ ಶಾ ಮನೋಜ್ಞ ಅಭಿನಯದ ಬಗ್ಗೆ ಸಂಶಯ ವ್ಯಕ್ತಪಡಿಸುವ ಅಗತ್ಯ ಈ ಚಿತ್ರದಲ್ಲೂ ಕಾಣುತ್ತಿಲ್ಲ. ಅಲ್ಲದೆ ಹಲವು ಪಾತ್ರಗಳು ಇದರಲ್ಲಿ ತಮ್ಮ ದನಿಯೆತ್ತದೆ ಬಂದು ಹೋಗುತ್ತವೆ. ಅವೆಲ್ಲವೂ ಸ್ವರವೇ ಇಲ್ಲದ ಸಾಮಾನ್ಯ ಮನುಷ್ಯನ ಪ್ರತಿಭಟನೆಯ ರೂಪವಾಗಿ ಕಾಣುತ್ತದೆ.

ಸನ್ನಿವೇಶಗಳ ಜತೆಗೆ ರಾಜಿ ಮಾಡಿಕೊಳ್ಳುವ, ಬದ್ಧತೆಗಳಿಗೆ ಬದ್ಧರಾಗುವ ಹಾಗೂ ವಿಧಿಯಾಟಕ್ಕೆ ಶರಣಾಗುವುದೇ ಬದುಕಲು ದಾರಿ ಎಂಬರ್ಥದಲ್ಲಿ ಚಿತ್ರ ಅಂತ್ಯವಾಗುತ್ತದೆ. ಇಲ್ಲಿ ಹಲವು ಆಯಾಮಗಳಿಗೂ ಅವಕಾಶಗಳಿವೆ. ಮಾನವೀಯತೆಯ ನೆಲೆಗಳನ್ನು ಬಹಳ ಢಾಳಾಗಿ ಚಿತ್ರಿಸಿರುವ ಈ ಕಥಾನಕವು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಜೀವನದಂತೆ ಸಾಗಿ ಹೋಗುತ್ತದೆ. ಪ್ರಶ್ನೆಗಳನ್ನು ಉಳಿಸುತ್ತದೆ. ಮನಸನ್ನು ಕಲಕುತ್ತದೆ. ಹಾಗೆಯೇ ಮೂಕರಾಗಿ ನಿರುತ್ತರಿಗಳಾಗಿಸುತ್ತದೆ.

''ಈ ಪೆಟ್ಟಿಗೆಗಳನ್ನು ನೋಡಿದರೆ ನನಗೆ ಭಯವಾಗುತ್ತದೆ. ಅದರ ತುಂಬ ನನ್ನ ಭಯವೇ ತುಂಬಿದೆ. ಭಯದೊಂದಿಗೆ ನನಗೆ ಬದುಕಲು ಸಾಧ್ಯವಿಲ್ಲ'' ಎಂದು ಮುಸ್ಲಿಂ ಗಂಡ ತನ್ನ ಹಿಂದು ಹೆಂಡತಿಗೆ ಹೇಳುವ ಮಾತುಗಳು ಕಿವಿಯಲ್ಲಿ ಗುನುಗುನಿಸುತ್ತದೆ. ಇದೊಂದು ಮಾತ್ರವಲ್ಲ. ಫಿರಾಕ್ ನೋಡುವಾಗ ನಮ್ಮೊಳಗೇ ಏನೋ ಆದಂತೆ ಭಾಸವಾಗುತ್ತದೆ. ನಮ್ಮೊಳಗೆ ಪರಕಾಯ ಪ್ರವೇಶ ಮಾಡುವ ಈ ಚಿತ್ರದ ಹಲವು ಭಾಗಗಳನ್ನು ಬಿಡಲು ಸಾಧ್ಯವೇ ಆಗುವುದಿಲ್ಲ. ಅದು ನಮ್ಮೊಂದಿಗೇ, ನಮ್ಮ ಹಿಂದೆಯೇ ಮತ್ತೆ ಮತ್ತೆ ಬಂದಂತೆ ಅನಿಸುತ್ತದೆ. ಹಾಗಾಗಿ ಇದು ಮಾಸ್ಟರ್ ಪೀಸೇ ಸರಿ ಎಂದು ನಿಸ್ಸಂದೇಹದಿಂದ ಹೇಳಬಹುದು.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫಿರಾಖ್, ಅರ್ಥ್, ಫೈರ್, ನಂದಿತಾ ದಾಸ್, ನಾಸಿರುದ್ದೀನ್ ಶಾ