ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » 'ಕಲ್ ಕಿಸ್ನೇ ದೇಖಾ'ದಲ್ಲಿ ಹೊಸತೇನಿಲ್ಲ (Kal Kissne Dekha | Jaccky Bhagnani | Vaishali Desai | Bollywood Review)
ಸಿನಿಮಾ ವಿಮರ್ಶೆ
Feedback Print Bookmark and Share
 
ಭವಿಷ್ಯವನ್ನು ಮೊದಲೇ ತಿಳಿಯುವ ಸರಕು ಬಾಲಿವುಡ್‌ಗೆ ಹೊಸತೇನಲ್ಲ. ಅದರಲ್ಲೂ ಇತ್ತೀಚೆಗೆ ಇಂತಹ ಚಿತ್ರಗಳ ಸರಣಿ ಹೆಚ್ಚುತ್ತಿದೆ. ಕಳೆದ ಐದಾರು ತಿಂಗಳಲ್ಲೇ ಇದೇ ಮಾದರಿಯ ಸಾಲು ಸಾಲು ಚಿತ್ರಗಳೇ ಬಿಡುಗಡೆಯಾಗಿವೆ. ಅವುಗಳ ಸಾಲಿಗೆ ಇನ್ನೊಂದು ಸೇರ್ಪಡೆ ಕಲ್ ಕಿಸ್ನೇ ದೇಖಾ.

ನಾಯಕ ನಟ ಹಾಗೂ ನಾಯಕಿ ನಟಿ ಹೊಸಬರು ಎಂಬುದನ್ನು ಬಿಟ್ಟರೆ ನಿರ್ಮಾಪಕರು ಕಲ್ ಕಿಸ್ನೇ ದೇಖಾಕ್ಕೆ ಹೊಸತೇನನ್ನೂ ಕೊಟ್ಟಿಲ್ಲ. ಚಿತ್ರದಲ್ಲಿ ಚೆಂದದ ಮೊಗದ ಪಕ್ಕದ್ಮನೆ ಚಾಕೋಲೇಟ್ ಹುಡುಗನಂತಿರುವ ಜ್ಯಾಕಿ ಬಾಗ್ನಾನಿ ನಾಯಕನಾದರೆ, ಮುದ್ದುಮುಖದ ವೈಶಾಲಿ ದೇಸಾಯಿ ನಾಯಕಿ. ಇಬ್ಬರಿಗೂ ಇದು ಮೊದಲ ಚಿತ್ರ. ಇವರನ್ನು ಬಿಟ್ಟರೆ, ರಿತೇಶ್ ದೇಶ್‌ಮುಖ್ ಡಾನ್ ಆಗಿ ಕಾಣಿಸಿಕೊಂಡರೆ, ಉಪನ್ಯಾಸಕನ ಪಾತ್ರದಲ್ಲಿ ರಿಶಿ ಕಪೂರ್ ಕಾಣಿಸಿಕೊಂಡಿದ್ದಾರೆ. ಕಾಲೇಜು ಹುಡುಗನಂತಿರುವ ಜ್ಯಾಕಿಗೆ ಕಾಲೇಜು ಹುಡುಗನ ಪಾತ್ರ.

ಚಂಡೀಗಡದಿಂದ ಬರುವ ನಿಹಾಲ್ ಸಿಂಗ್(ಜ್ಯಾಕಿ ಬಾಗ್ನಾನಿ) ತನ್ನ ಕನಸಿನ ಮುಂಬೈಯ ಹೊಸ ಕಾಲೇಜಿಗೆ ಸೇರುತ್ತಾನೆ. ಸಿಂಪಲ್ ಎನಿಸಿದರೂ ವಿಲಕ್ಷಣ ಹುಡುಗ ಆತ. ಹೆಚ್ಚು ಮಾತಾಡುತ್ತಾನೆ. ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತಾನೆ. ಸಂದಿಗ್ಧ ಪರಿಸ್ಥಿತಿಯನ್ನೇ ಸೃಷ್ಟಿಸುತ್ತಾನೆ. ಆದರೆ ಅವನು ಬ್ರಿಲಿಯಂಟ್ ಹುಡುಗ. ಹೊಸ ಕಾಲೇಜಿನ ಹೊಸ ಜಗತ್ತಿನಲ್ಲಿ ಆತನನ್ನು ಅಷ್ಟಾಗಿ ಗಂಭೀರವಾಗಿ ಯಾರೂ ತೆಗೆದುಕೊಳ್ಳುವುದಿಲ್ಲ. ಹತ್ತರಲ್ಲಿ ಹನ್ನೊಂದು ಎಂಬ ಹುಡುಗನಂತಿರುವ ನಿಹಾಲ್ ಹಿರಿಯ ವಿದ್ಯಾರ್ಥಿಗಳಿಂದ ರ್ಯಾಂಗಿಂಗ್‌ಗೆ ಒಳಗಾಗುತ್ತಾನೆ. ಇಷ್ಟಪಟ್ಟ ಹುಡುಗಿಯಿಂದ ಮುಜುಗರಕ್ಕೆ ಈಡಾಗುತ್ತಾನೆ. ಇನ್ನೂ ಏನೇನೋ...

Kal Kissne Dekha
IFM
ಆದರೂ, ನಿಹಾಲ್ ತನ್ನ ಪ್ರೊಫೆಸರ್ ವರ್ಮಾ (ರಿಶಿ ಕಪೂರ್)ರ ಮೆಚ್ಚಿನ ವಿದ್ಯಾರ್ಥಿ. ಹಾಸ್ಟೆಲ್‌ನಲ್ಲೂ ವಾರ್ಡನ್‌ರ ಹೃದಯ ಕದ್ದ ಕಳ್ಳ. ನಿಹಾಲ್‌ನನ್ನು ಕಾಲೇಜಿನಲ್ಲಿ ಎಲ್ಲರೂ ಮೆಚ್ಚಕೊಳ್ಳುವುದನ್ನು ಮೀಷಾ ಸಹಿಸುವುದಿಲ್ಲ. ಮೀಷಾ(ವೈಶಾಲಿ ದೇಸಾಯಿ) ಶ್ರೀಮಂತೆ. ಅಹಂ ಹೆಚ್ಚಿರುವ ಜಂಭಗಾತಿ, ಚೇಷ್ಟೆಯ ಒರಟು ಹುಡುಗಿ.

ಹೀಗೇ ಮೀಷಾಳ ಬಗ್ಗೆ ಸುಂದರ ಭಾವನೆ ಇಟ್ಟುಕೊಂಡಿರುವ ನಿಹಾಲ್‌ಗೆ ಒಂದು ದಿನ ಆಕೆಯ ಭವಿಷ್ಯ ಕಣ್ಣ ಮುಂದೆ ಬರುತ್ತದೆ. ಆಕೆ ಅಪಾಯದಲ್ಲಿದ್ದಾಳೆಂದು ತಿಳಿಯುತ್ತದೆ. ನಿಹಾಲ್‌ಗಿದ್ದ ವಿಚಿತ್ರ ಶಕ್ತಿ ಭವಿಷ್ಯವನ್ನು ತಿಳಿಯುವುದು. ಹೀಗಾಗಿ ಆಕೆಯನ್ನು ಸಂಕಷ್ಟದಿಂದ ನಿಹಾಲ್ ಪಾರು ಮಾಡುತ್ತಾನೆ. ಆಗ ಮಾಧ್ಯಮಗಳಲ್ಲೂ ನಿಹಾಲ್ ದೊಡ್ಡ ಸುದ್ದಿಯಾಗುತ್ತಾನೆ. ಭವಿಷ್ಯ ತಿಳಿಯುವ ನಿಹಾಲ್ ಎಂದು ಎಲ್ಲೆಡೆ ಖ್ಯಾತಿ ಪಡೆಯುತ್ತಾನೆ. ಇಂತಿಪ್ಪ ಸಂದರ್ಭದಲ್ಲಿ ಇತ್ತ ಮೀಷಾಳಿಗೂ ನಿಹಾಲ್ ಬಗ್ಗೆ ಇಟ್ಟಿದ್ದ ದ್ವೇಷ ಕರಗುತ್ತದೆ. ಪ್ರೀತಿ ಹುಟ್ಟುತ್ತದೆ. ಇಲ್ಲಿಗೇ ಕಥೆ ಮುಗಿಯುವುದಿಲ್ಲ. ಎಲ್ಲಿವರೆಗೆ ಈ ನೆಮ್ಮದಿಯ ಪ್ರೀತಿ ಇರುತ್ತದೆ ಎಂಬುದೂ ಕೂಡಾ ಚಿತ್ರದ ಪ್ರಮುಖ ಘಟ್ಟ. ನಿಹಾಲ್‌ನ ಅಪರೂಪದ ಶಕ್ತಿಯನ್ನು ಬಳಸಿಕೊಳ್ಳಲು ಹವಣಿಸುವ ಜೀವವೊಂದೂ ಆಗ ತೆರೆಗೆ ಬರುತ್ತದೆ. ನಿಹಾಲ್‌ನ ಈ ಅಪರೂಪದ ಶಕ್ತಿಯೇ ಆತನಿಗೆ ಮುಳುವಾಗುತ್ತದೋ ಎಂಬುದು ಚಿತ್ರದ ಅಂತ್ಯ.

ಚಿತ್ರದ ಸಂಭಾಷಣೆ ನಾಯಕ ನಟ ಜ್ಯಾಕಿಗೆ ವೇದಿಕೆ ಕಲ್ಪಿಸುವಂತಿದೆ. ದೃಶ್ಯಗಳು ತಮಾಷೆಯೆನಿಸಿದರೂ ಕಥೆ ತಮಾಷೆಯಲ್ಲ. ರಿತೇಷ್ ದೇಶ್‌ಮುಖ್ ಇಲ್ಲಿ ಭಯೋತ್ಪಾದಕನ ರೂಪದಲ್ಲಿ ಕಾಣಿಸಿಕೊಂಡದ್ದು ಅಷ್ಟಾಗಿ ಅರಗಿಸಿಕೊಳ್ಳಲು ಪ್ರೇಕ್ಷಕ ಕಷ್ಟಪಡಬೇಕಾಗುತ್ತದೆ. ಜತೆಗೆ ಅದು ತಮಾಷೆಯಾಗಿಯೂ ಕಾಣುತ್ತದೆ. ಚಿತ್ರ ಪ್ರೇಕ್ಷಕನ ತಾಳ್ಮೆಗೆಡಿಸುವಂತಿದ್ದರೂ, ನಿರ್ದೇಶಕ ವಿವೇಕ್ ಶರ್ಮಾ ಪ್ರೇಕ್ಷಕರಿಗೆ ಅಲ್ಲಲ್ಲಿ ಕೆಲವು ಅತ್ಯುತ್ತಮ ದೃಶ್ಯಗಳನ್ನೂ ನೀಡಿದ್ದಾರೆ.

ಹೊಸ ಮುಖ ವೈಶಾಲಿ ದೇಸಾಯಿ ಹಾಡುಗಳಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ನಟನೆಯಲ್ಲೂ ಒಕೆ, ಕೊಟ್ಟಿದ್ದನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಇನ್ನು ಹೊಸ ಹುಡುಗ ಜ್ಯಾಕಿ ಪಕ್ಕದ್ಮನೆಯ ಕೀಟಲೆ ಹುಡುಗನಂತೆ ಮಿಂಚಿದ್ದಾರೆ. ನಟನೆಯಲ್ಲಿ ಜ್ಯಾಕಿ ಸೈ. ಈ ಚಿತ್ರದ ಮೂಲಕ ಉತ್ತಮ ಓಪನಿಂಗ್ ಜ್ಯಾಕಿ ನೀಡಿದ್ದು, ಬಹುಶಃ ಇದು ಅವರಿಗೆ ಉತ್ತಮ ಭವಿಷ್ಯದ ಆರಂಭವನ್ನೇ ನೀಡಬಹುದು.
Kal Kissne Dekha
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಲ್ ಕಿಸ್ನೇ ದೇಖಾ, ಜ್ಯಾಕಿ ಬಾಗ್ನಾನಿ, ವೈಶಾಲಿ ದೇಸಾಯಿ, ರಿಶಿ ಕಪೂರ್