ರೋಂಮಾಂಚಕ ಥ್ರಿಲ್ಲರ್ ಈ ಲಕ್
ಈಗಲೇ ನಿಮ್ಮ ಸೀಟ್‌ಬೆಲ್ಟನ್ನು ಗಟ್ಟಿಯಾಗಿ ಕಟ್ಟಿಕೊಂಡು ಒಂದು ಭಾರೀ ಸ್ಟಂಟ್‌ಗಳಿರುವ ಹಾಲಿವುಡ್ ಮಾದರಿಯ ಚಿತ್ರ ನೋಡಲು ತಯಾರಾಗಿ. ಬಾಲಿವುಡ್ ಈಗ ಬದಲಾಗಿದೆ. ಕಾಮಿಡಿ ಹಾಗೂ ಇತರ ಚಿತ್ರಗಳಲ್ಲಿ ಬಾಲಿವುಡ್‌ಗೆ ಬದಲಾವಣೆಯ ಗಾಳಿ ಬೀಸಿದಂತೆಯೇ ಆಕ್ಷನ್ ಚಿತ್ರಗಳಲ್ಲೂ ತನ್ನ ಗತಿ ಬದಲಾಯಿಸಿದೆ ಎನ್ನುವುದಕ್ಕೆ ಲಕ್ ಚಿತ್ರವೇ ಸಾಕ್ಷಿ. ಧೂಮ್ 2 ಚಿತ್ರದ ನಂತರ ಬಾಲಿವುಡ್‌ನಲ್ಲಿ ಇಂತಹ ಥ್ರಿಲ್ಲರ್ ಚಿತ್ರವೊಂದನ್ನು ನೀವು ನೋಡಿರಲಿಕ್ಕಿಲ್ಲ.ಲಕ್ ಚಿತ್ರವೊಂದು ಹೈ ಕಾನ್ಸೆಪ್ಟ್ ಚಿತ್ರ. ಲಕ್‌ನಲ್ಲಿ ಅಂಥ ಗಟ್ಟಿಯಾದ ಕಥಾಹಂದರವಿಲ್ಲ. ಆದರೂ ಚಿತ್ರದ ವಿಶೇಷ ಕಾನ್ಸೆಪ್ಟ್, ವಿಶಿಷ್ಟವಾಗಿ ನಿರೂಪಿಸಿದ ಥ್ರಿಲ್ಲಿಂಗ್ ದೃಶ್ಯಗಳು ಚಿತ್ರವನ್ನು ನೋಡುವಂತೆ ಮಾಡುತ್ತದೆ. ಇವೇ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಕೂಡಾ. ಇದರಿಂದಾಗಿ ಲಕ್ ಚಿತ್ರ ಲಕ್ಕಿಯಾಗುವ ಸಾಧ್ಯತೆಗಳಿವೆ.ಲಕ್‌ನಲ್ಲಿ ಲೋಡ್‌ಗಟ್ಟಲೆ ಥ್ರಿಲ್ ಇರಬಹುದು. ಆದರೆ, ಅದಕ್ಕೆ ತಕ್ಕನಾದ ಗಟ್ಟಿಯಾದ ಚಿತ್ರಕಥೆ ಇಲ್ಲ ಎಂಬ ಕೊರತೆಯೂ ಕಾಡುತ್ತದೆ. ಚಿತ್ರಕಥೆ ಸಂಭಾಷಣೆ ಬರೆದ ನಿರ್ದೇಶಕ ಸೋಹಂ ಶಾ ಹಾಗೂ ರೆನ್ಸಿಲ್ ಡಿ ಸಿಲ್ವಾ ಸ್ವಲ್ಪ ಇನ್ನೂ ಹೆಚ್ಚು ಕಥೆಯನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದ್ದಿದ್ದರೆ ಖಂಡಿತವಾಗಿ ಇದೊಂದು ಅದ್ಭುತ ರೋಮಾಂಚಕ ಕಥಾನಕವಾಗುತ್ತಿತ್ತು. ಆದರೂ ಲಕ್ ದೊಡ್ಡ ಸ್ಟಾರ್‌ಗಳ ತಾರಾಗಣದಿಂದ ಮೇಳೈಸಿರುವುದರಿಂದ ಇಂತಹ ಕೆಲವು ಸಣ್ಣಪುಟ್ಟ ಕೊರತೆಗಳು ಸಾಮಾನ್ಯ ವೀಕ್ಷಕರಿಗೆ ಅಡ್ಡಿ ಬರಲಾರದು. ಲಕ್ ಚಿತ್ರ ಬೆಟ್ಟಿಂಗ್ ಮಾಫಿಯಾದ ಕಥೆ. ಮೂಸಾ (ಸಂಜಯ್ ದತ್) ಇದರಲ್ಲಿ ಬೆಟ್ಟಿಂಗ್ ಮಾಫಿಯಾದ ಅಧಿಪತಿ. ಆತನಿಗೆ ಜೀವನವೇ ಒಂದು ಜೂಜಿದ್ದಂತೆ. ಚಿತ್ರದಲ್ಲಿ ಇಮ್ರಾನ್ ಖಾನ್ ತನ್ನ ಅದೃಷ್ಟ ಪರೀಕ್ಷೆಗೆ ಹೊರಡುವ ಯುವಕ. ಶ್ರುತಿ ಹಾಸನ್ ಆನ ಅದೃಷ್ಟ ಪರೀಕ್ಷೆಯಲ್ಲಿ ಜತೆಯಾಗುವ ನಾಯಕಿ.ಕಥೆ ಆರಂಭವಾಗುತ್ತಿದ್ದಂತೆ ಪ್ರೇಕ್ಷಕರು ಬೇರೆಯೇ ಲೋಕಕ್ಕೆ ಹೋಗುತ್ತಾರೆ. ಸಾವಿನೊಂದಿಗೇ ಸೆಣಸುವಂತಹ ಮೈ ನಡುಗಿಸುವ ಸ್ಟಂಟ್‌ಗಳು ಎಂಟ್ರಿ ಕೊಡುತ್ತವೆ. ರಿವಾಲ್ವರ್ ದೃಶ್ಯ, ಹೆಲಿಕಾಪ್ಟರ್‌ನಿಂದ ಜಂಪ್ ಮಾಡುವ ದೃಶ್ಯ, ನೀರಿನಡಿಯಲ್ಲಿ ಶಾರ್ಕ್ ಮೀನುಗಳ ಜತೆಗಿನ ದೃಶ್ಯಾವಳಿಗಳು ನಿಮ್ಮನ್ನು ಕುಳಿತಲ್ಲಿಯೇ ಬೆವರುವಂತೆ ಮಾಡುತ್ತವೆ. ಚಿತ್ರದ ಮೊದಲ ದೃಶ್ಯವೇ ಅದ್ಭುತವಾಗಿದೆ. ಅಂತಿಮವಾಗಿ ಕ್ಲೈಮ್ಯಾಕ್ಸ್‌ನಲ್ಲಿ ಬರುವ ರೈಲಿನ ದೃಶ್ಯಾವಳಿ ನಿಮ್ಮ ಸ್ಮೃತಿಪಟಲದಲ್ಲಿ ಎಂದಿಗೂ ಉಳಿಯುವಂತಹ ದೃಶ್ಯ. ಇಂತಹ ದೃಶ್ಯಗಳು ಈವರೆಗೆ ಹಿಂದಿ ಸ್ಕ್ರೀನ್‌ನಲ್ಲಿ ಬಂದಿರಲಿಲ್ಲ. ಇವೆಲ್ಲವೂ ಚಿತ್ರಕ್ಕೆ ತೂಕ ನೀಡಿದೆ. ಪ್ರೇಕ್ಷಕರರಲ್ಲಿ ಭರಪೂರ ಚಪ್ಪಾಳೆ, ವಿಶಲ್‌ಗಳನ್ನೂ ಗಳಿಸುವಲ್ಲಿ ಯಶಸ್ವಿಯಾಗುತ್ತದೆ. ಆದರೆ ಚಿತ್ರಕ್ಕೆ ಖಂಡಿತವಾಗಿಯೂ ಉತ್ತಮ ಸಂಭಾಷಣೆಯ ಕೊರತೆಯಾಗಿದೆ ಎಂದು ಧಾರಾಳವಾಗಿ ಹೇಳಬಹುದು. ಪ್ರಮುಖವಾಗಿ ಚಿತ್ರ ಆರಂಭವಾದ ಎರಡಜನೇ ಗಂಟೆಯಲ್ಲಿ ಇದು ಢಾಳಾಗಿ ಕಾಣಿಸುತ್ತದೆ. ಆಸ್ಪತ್ರೆಯ ದೃಶ್ಯಾವಳಿ ವೈದ್ಯಕೀಯವಾಗಿ ಸರಿಯಾದರೂ, ಇಂತಹ ಚಿತ್ರಕ್ಕೆ ಅಂಥದ್ದೊಂದು ಸೇರ್ಪಡೆ ಅಗತ್ಯವಿರಲಿಲ್ಲ ಅನಿಸುತ್ತದೆ. ಇದು ಚಿತ್ರದ ಗಂಭೀರತೆಗೆ ಬ್ರೇಕ್ ಹಾಕಿದಂತೆ ಕಂಡರೆ ಅಚ್ಚರಿಯಿಲ್ಲ. ಅಷ್ಟೇ ಅಲ್ಲ. ಶ್ರುತಿ ಹಾಸನ್‌ರ ದ್ವಿಪಾತ್ರವೂ ಲೆಕ್ಕಕ್ಕೆ ಬಾರದಂತೆ ಅನಿಸಿದರೂ ತಪ್ಪಲ್ಲ. ಇವೆಲ್ಲ ತಪ್ಪು ಒಪ್ಪುಗಳಿದ್ದರೂ ನಿರ್ದೇಶಕ ಸೋಹಂ ಶಾ ಅವರನ್ನು ಹೊಗಳಲೇ ಬೇಕು. ಅವರೊಂದು ವಿಶಿಷ್ಟ ಶೈಲಿಯಲ್ಲಿ ಚಿತ್ರವನ್ನು ನಿರೂಪಿಸಿದ್ದಾರೆ. ಸಲೀಂ- ಸುಲೇಮಾನ್ ಅವರ ಸಂಗೀತ ಅದ್ಭುತ. ಸಂತೋಷ್ ತುಂದಿಯಿಲ್ ಅವರ ಸಿನೆಮಾಟೋಗ್ರಫಿ ಕೂಡಾ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕುದಾಗಿದೆ. ಅಲ್ಲಾನ್ ಅಮಿನ್ ಅವರ ಸ್ಟಂಟ್ ಹಾಗೂ ಥ್ರಿಲ್‌ಗಳು ಚಿತ್ರಕ್ಕೆ ಭಾರೀ ತೂಕವನ್ನೇ ಒದಗಿಸಿವೆ.ಸಂಜಯ್ ದತ್ ತುಂಬ ಸಹಜವಾಗಿ ಮಾಫಿಯಾ ಕಿಂಗ್ ಪಾತ್ರದಲ್ಲಿ ಮೇಳೈಸಿದ್ದಾರೆ. ಇಮ್ರಾನ್ ಖಾನ್ ತನ್ನ ಚಿತ್ರದಿಂದ ಚಿತ್ರಕ್ಕೆ ಹೆಚ್ಚು ಪ್ರೌಢರಾಗುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಚಿತ್ರದ ಆರಂಭದಲ್ಲಿ ಇಮ್ರಾನ್ ಅಭಿನಯಿಸಿದ ತಳಮಳ, ಅಸಹಾಯಕತೆ ಹಾಗೂ ನಂತರ ಅದೇ ಇಮ್ರಾನ್ ಸ್ಟಂಟ್‌ಗಳಲ್ಲಿ ಅಭಿನಯಿಸುವಾಗ ವಹಿಸಿದ ಆತ್ಮವಿಶ್ವಾಸ ಎರಡೂ ಕೂಡಾ ಇಮ್ರಾನ್ ಪರಿಪಕ್ವ ಅಭಿನಯದ ನಾಯಕ ನಟನಾಗಿದ್ದಾನೆ ಎಂಬುದಕ್ಕೆ ಹಿಡಿದ ಕನ್ನಡಿ.ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಬಗ್ಗೆ ಒಂದೇ ಮಾತಿನಲ್ಲಿ ಆಕೆ ಅದ್ಭುತ ಅಂದು ಬಿಡಬಹುದು. ಮೊದಲ ಪೂರ್ಣ ಪ್ರಮಾಣದ ಅಭಿನಯದಲ್ಲೇ ಶ್ರುತಿ ತನ್ನ ನಟನೆಯಿಂದ ಭಾರೀ ಭರವಸೆ ಹುಟ್ಟಿಸಿದ್ದಾರೆ. ರವಿ ಕಿಶನ್ ಕೂಡಾ ಚಿತ್ರ ಇನ್ನೊಬ್ಬ ಪ್ರತಿಭಾನ್ವಿತ. ಚಿತ್ರದುದ್ದಕ್ಕೂ ತನ್ ಅದ್ಭುತ ನಟನೆಯಿಂದ ಪ್ರೇಕ್ಷಕರ ಕಣ್ಣನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ರವಿ ಕಿಶನ್. ಮಿಥುನ್ ಚಕ್ರವರ್ತಿ ಕೂಡಾ ಅದ್ಭುತ. ಚಿತ್ರಾಶಿ ಎಕ್ಸಲೆಂಟ್. ಒಟ್ಟಾರೆ ಲಕ್ ಚಿತ್ರ ಸ್ಟಾರ್ ಪವರ್ ಜತೆಜತೆಗೇ, ಮೈನವಿರೇಳಿಸುವ ಸಾಹಸ ದೃಶ್ಯಗಳನ್ನು ಒಳಗೊಂಡ ಈ ಚಿತ್ರ ಅದ್ಭುತವಾಗಿಯೇ ಇದೆ. ಹಿಂದಿ ಚಿತ್ರರಂಗದಲ್ಲಿ ಈ ಮಟ್ಟಿನ ಅಂತಾರಾಷ್ಟ್ರೀಯ ಗುಣಮಟ್ಟದ ಎಫೆಕ್ಟ್‌ಗಳಿರುವ ಸ್ಟಂಟ್ ಇಲ್ಲವೆಂದೇ ಹೇಳಬಹುದು. ಸಣ್ಣಪುಟ್ಟ ತೊಡಕುಗಳಿದ್ದರೂ, ಇದು ಬಾಲಿವುಡ್ ಜಗತ್ತಿನಲ್ಲಿ ಬರೆದ ಹೊಸ ಭಾಷ್ಯವೇ ಸರಿ. ಹಾಗಾಗಿ ಇದು ಬಾಕ್ಸ್ ಆಫೀಸಿನಲ್ಲಿ ತನ್ನ ಲಕ್ಕೀ ಪಯಣವ್ನನು ಮುಂದುವರಿಸಿದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ.