ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಅದ್ಭುತ ರೊಮ್ಯಾಂಟಿಕ್ ಕಥಾನಕ ಈ ಲವ್ ಆಜ್ ಕಲ್ (Love Aaj Kal | Deepika Padukone | Saif Ali Khan | Rishi Kapoor | Imtiaz Ali)
ಸಿನಿಮಾ ವಿಮರ್ಶೆ
Feedback Print Bookmark and Share
 
ಸೈಫ್ ಆಲಿಖಾನ್ ನಿರ್ಮಾಣದ ಮೊದಲ ಬಹುನಿರೀಕ್ಷಿತ ಚಿತ್ರ ಲವ್ ಆಜ್ ಕಲ್ ಬಿಡುಗಡೆಗೊಂಡಿದೆ. ನಿರೀಕ್ಷೆಯಂತೆಯೇ ಚಿತ್ರದ ತುಂಬ ಒಂದು ಸುಂದರ ಪ್ರೀತಿಯ ನವಿರು ಸ್ಪರ್ಷ ಎದ್ದು ಕಾಣುತ್ತದೆ. ಅಂದುಕೊಂಡಂತೆಯೇ ಇದೊಂದು ಲವ್ ಸ್ಟೋರಿ. ಲವ್ ಆಜ್ ಕಲ್ ಚಿತ್ರದ ಕ್ರೆಡಿಟ್ಟು ಖಂಡಿತವಾಗಿಯೂ ನಿರ್ದೇಶಕನಿಗೆ ಸಲ್ಲಬೇಕು. ಇಮ್ತಿಯಾಜ್ ಅಲಿ ಒಂದು ಡಿಫರೆಂಟಾದ ಕಥೆ ಬರೆದಿದ್ದಾರೆ. ಆದರೆ ಇದು ಎಲ್ಲ ಲವ್ ಸ್ಟೋರಿಗಳ ಥರ ಖಂಡಿತಾ ಅಲ್ಲ. ಇಲ್ಲಿ ಎರಡು ಕಥೆಗಳು ಜತೆಜತೆಯಾಗಿ ನಡೆಯುತ್ತದೆ. ಆದರೆ ಎರಡಕ್ಕೂ ಕೊನೆಯಲ್ಲಿ ಸಾಮಾನ್ಯ ಒಂದೇ ಅಂತ್ಯವೂ ಕಾಣುತ್ತದೆ. ಆದರೆ, ಹೇಳಿದಷ್ಟು ಸುಲಭವಾಗಿ ಈ ಕಥೆಯನ್ನು ತೆರೆಗೆ ತರಲು ಕಷ್ಟವಿದೆಯಾದರೂ, ಲವ್ ಆಜ್ ಕಲ್ ಚಿತ್ರ ಮನಸ್ಸಿಗೆ ನಾಟುತ್ತದೆ.

ಲವ್ ಆಜ್ (ಈಗಿನ ಲವ್)
ಲಂಡನ್, ಸಾನ್‌ಫ್ರಾನ್ಸಿಸ್ಕೋ, ದೆಹಲಿ- 2009
ಜೈ ಹಾಗೂ ಮೀರಾ ಲಂಡನ್‌ನಲ್ಲಿರುವ ಆಧುನಿಕ ಪ್ರೇಮಿಗಳು. ಅವರಿಬ್ಬರೂ ಜತೆಗೆ ಇದ್ದಷ್ಟು ಕಾಲ ತುಂಬ ಸಂತೋಷವಾಗಿರುತ್ತಾರೆ. ಆದರೆ ಇಬ್ಬರೂ ಮದುವೆಯ ಗಂಟು ಹಾಕಿಕೊಳ್ಳುವ ಸಂಬಂಧದಲ್ಲಿ ನಂಬಿಕೆ ಇಟ್ಟಿರುವುದಿಲ್ಲ. ಹಾಗಾಗಿ ಜೀವನ ಇಬ್ಬರನ್ನೂ ಬೇರೆ ಬೇರೆ ದಿಕ್ಕಿನತ್ತ ಸೆಳೆಯುತ್ತದೆ. ಇಬ್ಬರೂ ಸೆಳೆದತ್ತ ವಾಲುತ್ತಾರೆ. ಅರ್ಥಾತ್ ಬೇರೆಬೇರೆಯಾಗುತ್ತಾರೆ. ರೋಮಿಯೋ- ಜೂಲಿಯಟ್ ತರಹದ ಜನುಮ ಜನುಮದ ಪ್ರೇಮಿಗಳು ಕೇವಲ ಕಾಣ ಸಿಗುವುದು ಕಥೆ ಪುಸ್ತಕಗಳಲ್ಲಿ ಮಾತ್ರ ಅಂತ ಜೈ ಹೇಳುತ್ತಾನೆ. ಆದರೆ ಜೀವನದಲ್ಲಿ ನಾವು ಪ್ರಾಕ್ಟಿಕಲ್ ಆಗಿರಬೇಕು ಎಂಬುದು ಜೈ, ಮೀರಾ ಅಭಿಪ್ರಾಯ.
Love Aaj Kal
IFM

ಲವ್ ಕಲ್ (ಹಿಂದಿನ ಲವ್)
ದೆಹಲಿ, ಕಲ್ಕತ್ತಾ- 1965.
ವೀರ್ ಸಿಂಗ್ ಒಮ್ಮೆ ಹರ್ಲೀನ್‌ಳನ್ನು ನೋಡಿ ಒಂದೇ ನೋಟದಲ್ಲಿ ಆಕೆಯೆಡೆಗೆ ಆಕರ್ಷಿತನಾಗುತ್ತಾನೆ. ಆಗಿಂದಾಗಲೇ ಆತ ಮರದಡಿಯಲ್ಲಿ ನಿಂತು ನನ್ನ ಈ ಜನ್ಮವೂ ಸೇರಿದಂತೆ ಮುಂದಿನ ಜನ್ಮದಲ್ಲೂ, ಜನುಮ ಜನುಮದಲ್ಲಿ ಹರ್ಲೀನ್ ಕೌರ್ ನನಗೆ ಪತ್ನಿಯಾಗಿಯೇ ಇರಬೇಕು ಎಂದು ಪ್ರತಿಜ್ಞೆ ಮಾಡುತ್ತಾನೆ. ಆಕೆಗಾಗಿ ಸಾವಿರಾರು ಕಿ.ಮೀ ಸಾಗುತ್ತಾನೆ. ಆಕೆಯ ಮನೆಯ ಬಾಲ್ಕನಿಯ ಅಡಿಯಲ್ಲೇ ನಿಲ್ಲುತ್ತಾನೆ. ಆಕೆಯ ಒಂದೇ ಕ್ಷಣದ ಮುಖದರ್ಶನಕ್ಕಾಗಿ ಹಪಹಪಿಸುತ್ತಾನೆ. ಆದರೂ, ಆಕೆಯನ್ನು ಕಂಡರೆ ಒಂದು ಮಾತೂ ಆತನಿಂದ ಹೊರಬರುವುದಿಲ್ಲ. ಇಂತಹ ಪ್ರೀತಿ ವೀರ್ ಸಿಂಗ್‌ದು.

ಲವ್ ಆಜ್‌ ಕಲ್
ವೀರ್‌ಗೆ ಜೈ ಯಾಕೆ ಹೃದಯದ ಭಾವನೆಗಳನ್ನು, ಬ್ಯಾಂಕಿನಲ್ಲಿರುವ ಹಣದ ಟ್ರಾನ್ಸ್ಯಾಕ್ಷನ್ ತರಹ ನಿರ್ಭಾವುಕನಾಗಿ ನೋಡುತ್ತಾನೆ ಎಂಬುದೇ ಅರ್ಥವಾಗುವುದಿಲ್ಲ. ಆದರೆ ಜೈಗೆ ವೀರ್ ಯಾಕೆ ಹರ್ಲೀನಳ ಪ್ರೇಮದಲ್ಲಿ ಕಳೆದುಹೋಗಿ ವೃಥಾ ತನ್ನ ಯೌವನವನ್ನು ವೇಸ್ಟ್ ಮಾಡುತ್ತಿದ್ದಾನೆ ಎಂಬುದು ಅರ್ಥವಾಗುವುದಿಲ್ಲ. ಈ ಎರಡು ಕಥೆಗಳು ಮುಗಿದಾಗ, ಲವ್ ಎನ್ನುವ ಅನುಭವ ಯಾವುದೇ ಕಾಲದಲ್ಲೂ ಎಲ್ಲರಿಗೂ ಒಂದೇ. ಆದರೆ ಸಂಬಂಧಗಳಲ್ಲಿ ಮಾತ್ರ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ ಎಂಬುದು ಅರ್ಥವಾಗುತ್ತದೆ.

ಹೀಗ್ ಲವ್ ಆಜ್ ಕಲ್ ಚಿತ್ರವೊಂದು ಎರಡು ಕಥಾನಕಗಳ ಮೂಲಕ ಪ್ರೀತಿಯ ಸಂಬಂಧಗಳ ವ್ಯತ್ಯಾಸವನ್ನು ಹೇಳುತ್ತಾ ಹೋಗುತ್ತದೆ. ಆಧುನಿಕ ಜೀವನಶೈಲಿಯ ಸ್ವಾತಂತ್ರ್ಯ, ಸ್ವೇಚ್ಛೆ ಸಂದೇಹ, ಸಂಶಯಗಳೊಂದಿಗೆ ಹಳೆಯ ಮುಗ್ಧತೆ, ಬದ್ಧತೆಗಳ ಕೊಂಡಿಯನ್ನು ವಿವರಿಸುತ್ತದೆ. ಸಂಬಂಧಗಳ ಅಂತರವಿಸ್ತರಿಸುತ್ತಾ, ದೂರವಾಗುತ್ತಾ ಹೋಗುತ್ತದೆ. ಇಬ್ಬರ ನಡುವೆ ಅಂತರ ಹೆಚ್ಚಾದಂತೆ ಸೇತುವೆಯ ದೂರವೂ ಹೆಚ್ಚುತ್ತಾ ಹೋಗುವುದು ಇಲ್ಲಿರುವ ಭಾವುಕ ಕ್ಷಣಗಳು.

Love Aaj Kal
IFM
ಪ್ರಾಮಾಣಿಕವಾಗಿ ಹೇಳುವುದಾದರೆ, ಚಿತ್ರದ ಕಥೆಯೊಳಗೆ ಪ್ರೇಕ್ಷಕರು ಇಳಿಯಲು ಸ್ವಲ್ಪ ಹೊತ್ತಾಗುತ್ತದೆ. ಚಿತ್ರದಲ್ಲಿ ನಡೆಯುತ್ತಿರುವುದೇನು ಎಂದು ತಲೆಯೊಳಕ್ಕೆ ಹೊಕ್ಕಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಭೂತ ಮತ್ತು ವರ್ತಮಾನ ಜತೆಜತೆಯಾಗಿ ಸಾಗುತ್ತದೆ. ಚಿತ್ರದಲ್ಲಿ ಸೈಫ್‌ದು ದ್ವಿಪಾತ್ರ.

ಚಿತ್ರದ ಎರಡನೇ ಭಾಗವೇ ಚಿತ್ರ ಜೀವಾಳ. ಚಿತ್ರದಲ್ಲಿ ದೀಪಿಕಾ ತಾನು ಮದುವೆಯಾಗುತ್ತೇನೆಂದು ನಿರ್ಧಾರ ಮಾಡುವ ಹೊತ್ತಿಗೆ ಚಿತ್ರ ಕುತೂಹಲದ ಘಟ್ಟಕ್ಕೆ ತಿರುಗುತ್ತದೆ. ಇದು ಚಿತ್ರದ ಅತ್ಯಂತ ಭಾವುಕ ಕ್ಷಣಗಳೂ ಹೌದು. ಮದುವೆಯಲ್ಲಿ ಸೈಫ್ ದೀಪಿಕಾ ಜತೆ ಮಾತನಾಡುವ ಸನ್ನಿವೇಶ, ಅಮೆರಿಕಾದಲ್ಲಿ ಸೈಫ್ ವರ್ತನೆಯಲ್ಲಿ ಕಂಡ ವಿಶೇಷ ಬದಲಾವಣೆ, ಮದುವೆಯಾದುದೇ ದೊಡ್ಡ ತಪ್ಪು ಎಂಬ ಅರಿವು... ಇವೆಲ್ಲ ದೃಶ್ಯಗಳು ಪ್ರೇಕ್ಷಕರನ್ನು ಒಂದು ಕ್ಷಣ ಭಾವುಕರನ್ನಾಗಿಸುತ್ತದೆ. ಹೀಗಾಗಿ ನಿರ್ದೇಶಕ ಇಮ್ತಿಯಾಜ್ ಅಲಿ ಅವರನ್ನು ಜೀನಿಯಸ್ ಅಂತ ಧಾರಾಳವಾಗಿ ಹೇಳಬಹುದು. ಜತೆಗೆ ತನ್ನಲ್ಲಿರುವ ಅಮೋಘವಾಗಿ ಕಥೆ ಹೇಳುವ ಪ್ರತಿಭೆಯನ್ನೂ ಅವರು ಈ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ.

ಸದ್ಯದ ಯುವ ಮನಸ್ಸುಗಳ ಹೊಯ್ದಾಟ, ಯುವ ಮನಸ್ಸುಗಳ ದೃಷ್ಟಿಯಲ್ಲಿ ಲವ್ ಅರ್ಥಾತ್ ಪ್ರೀತಿ ಹೇಗೆಂಬುದನ್ನು ಸಮರ್ಥವಾಗಿ ತೆರೆಗೆ ತಂದಿದ್ದಾರೆ ಇಮ್ತಿಯಾಜ್. ಎಲ್ಲ ಹಾಡುಗಳೂ ಚೆನ್ನಾಗಿವೆ. ಒಂದು ಹಾಡು ಕುಣಿಸಿದರೆ ಇನ್ನೊಂದು ಭಾವುಕರಾಗಿಸುತ್ತದೆ. ಮತ್ತೊಂದು ಮಧುರವಾಗಿದೆ. ಇದರ ಕ್ರೆಡಿಟ್ಟು ಪ್ರೀತಂಗೆ ಸಲ್ಲಬೇಕು. ನಟರಾಜನ್ ಸುಬ್ರಹ್ಮಣಿಯಂ ಅವರ ಸಿನೆಮ್ಯಾಟೋಗ್ರಫಿ ಸೂಪರ್. ಆರತಿ ಬಜಾಜ್ ಅವರ ಸಂಕಲನ ಅದ್ಭುತ.

Love Aaj Kal
IFM
ಸೈಫ್ ಹಾಗೂ ದೀಪಿಕಾ ಇಬ್ಬರ ನಟನೆಯೂ ಅವರವರ ವೃತ್ತಿಜೀವನದ ಅದ್ಭುತ ಅಭಿನಯಗಳು. ಅದರಲ್ಲೂ ಸೈಫ್ ಪಾತ್ರ ತಂಬ ಚಾಲೆಂಜಿಂಗ್. 20 ವರ್ಷ ಹಳೆಯ ಹಾಗೂ ಈಚೆಗಿನ ಆಧುನಿಕ ಯುವಕ ಹೀಗೆ ಎರಡು ಪಾತ್ರಗಳಲ್ಲೂ ಸೈಫ್ ಅದ್ಭುತವಾಗಿ ಮಿಂಚಿದ್ದಾರೆ.

ದೀಪಿಕಾ ಸುಂದರವಾಗಿ ಕಂಡಷ್ಟೇ ಅದ್ಭುತವಾಗಿ ನಟಿಸಿದ್ದಾರೆ. ಸೈಫ್ ಜತೆಗೆ ಸರಿಸಾಟಿಯಾಗಿ ನಟಿಸುವುದು ಸುಲಭದ ಕೆಲಸವಲ್ಲ. ಆದರೆ ದೀಪಿಕಾ ಅದನ್ನು ನಿಭಾಯಿಸಿದ್ದಾರೆ. ಹೀಗಾಗಿ ದೀಪಿಕಾ ಕೆರಿಯರ್ ದೃಷ್ಟಿಯಿಂದ ಇದೊಂದು ಟರ್ನಿಂಗ್ ಪಾಯಿಂಟ್. ರಿಶಿ ಕಪೂರ್ ಬಗ್ಗೆ ಎರಡು ಮಾತಿಲ್ಲ. ಹರ್ಲೀನ್ ಪಾತ್ರದಾಕೆ ತುಂಬ ಸುಂದರವಾಗಿ ಕಂಗೊಳಿಸುತ್ತಾಳೆ.

ಒಟ್ಟಾರೆ ಲವ್ ಆಜ್ ಕಲ್ ಯುವ ಮನಸ್ಸುಗಳಿಗೊಂದು ಗಿಫ್ಟ್. ರೊಮ್ಯಾಂಟಿಕ್ ಹಾಗೂ ಯುವ ಚೈತನ್ಯದಿಂದ ತುಳುಕುವ ಲವ್ ಆಜ್ ಕಲ್ ಚಿತ್ರದಲ್ಲಿ ಮನಕಲಕುವ ಭಾವುಕ ಸನ್ನಿವೇಶವೂ ಇದೆ. ಕೊನೆಯ 35 ನಿಮಿಷವಂತೂ ಮನಮಿಡಿಯುವ ಕಥೆಯಿದು. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ ಹಿಟ್ ಚಿತ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದ್ಭುತ ಸಂಗೀತ, ಸೊಗಸಾದ ನಿರೂಪಣೆ, ಯುವ ಚೈತನ್ಯವಿರುವ ಸುಂದರ ಕಥೆ ಇವು ಚಿತ್ರವನ್ನು ಇಷ್ಟಪಡುವಂತೆ ಮಾಡುತ್ತದೆ. ಜಬ್ ವಿ ಮೆಟ್ ನಂತರ ಇಮ್ತಿಯಾಜ್ ಮತ್ತೆ ತಮ್ಮ ಪ್ರತಿಭೆಯನ್ನು ಇಲ್ಲಿ ತೋರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲವ್ ಆಜ್ ಕಲ್, ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ, ಇಮ್ತಿಯಾಜ್ ಅಲಿ