ನರ್ಗಿಸ್-ಸುನಿಲ್ ದತ್ ಪ್ರೇಮ ಕಥಾನಕ- "ಡಾರ್ಲಿಂಗ್‌ಜೀ"
ಆರಂಭದಲ್ಲಿ ಗೌಪ್ಯತೆ ಕಾಪಾಡಿಕೊಂಡು, ನಿಧಾನವಾಗಿ ಬಿರುಗಾಳಿಯಷ್ಟು ಪ್ರಬಲವಾಗುವ ಸಂಬಂಧಗಳು, ಯಾವುದೇ ಪರಿಸ್ಥಿತಿಯನ್ನೂ, ಯಾವುದೇ ಬಿಕ್ಕಟ್ಟನ್ನೂ ತಾಳಿಕೊಳ್ಳುವಷ್ಟರಮಟ್ಟಿಗೆ ಬಲವಾಗಿಬಿಡುತ್ತವೆ.
ಸುನಿಲ್ ದತ್, ಅವರ ಪತ್ನಿ ನರ್ಗಿಸ್ ಮತ್ತು ಅವರ ಪುತ್ರಿ ಪ್ರಿಯಾ ಅವರ ದಿನಚರಿಗಳು, ಮತ್ತು ಬಂಧುಗಳು ಮಿತ್ರರ ಸಂಭಾಷಣೆಗಳು, ಸಂದರ್ಶನಗಳನ್ನು ಒಳಗೊಂಡ "ಡಾರ್ಲಿಂಗ್‌ಜೀ"ಯನ್ನು ನೋಡಿದರೆ ಇದು ವೇದ್ಯವಾಗುತ್ತದೆ.
ಪರಸ್ಪರರನ್ನು "ಡಾರ್ಲಿಂಗ್‌ಜೀ" ಎಂದೇ ಸಂಬೋಧಿಸುತ್ತಿದ್ದ ಹಿಂದಿ ಚಿತ್ರರಂಗದ ದಂತೆಕತೆಗಳೇ ಆಗಬಲ್ಲಷ್ಟು ಖ್ಯಾತಿ ಗಳಿಸಿದ ಸುನಿಲ್ ದತ್, ನರ್ಗಿಸ್ ಅವರಿಬ್ಬರ ಆತ್ಮಚರಿತ್ರೆಯು ಅದೇ ಹೆಸರಿನಲ್ಲಿ ಈಗ ಹೊರಬಿದ್ದಿದೆ.
ಕಥೆ ಆರಂಭವಾಗುವುದು 19ನೇ ಶತಮಾನದ ಅಂತ್ಯಭಾಗದಿಂದ. ಉತ್ತರ ಭಾರತದ ಒಂದು ಪುಟ್ಟ ಹಳ್ಳಿ, ಅಲ್ಲಿ, 13 ವರ್ಷದ ಬ್ರಾಹ್ಮಣ ವಿಧವೆಯೊಬ್ಬಳು, ಮುಸಲ್ಮಾನ "ಸಾರಂಗಿ" ವಾದಕನನ್ನು ಭೇಟಿಯಾಗಿ, ಆತನ ಜೊತೆ ಓಡಿ ಹೋಗುತ್ತಾಳೆ. ಹಲವು ವರ್ಷಗಳ ಬಳಿಕ ಅವರ ಮಹಳು ಜದ್ದಾನ್‌ಬಾಯಿ ಮುಂಬಯಿಗೆ ಬಂದು, ಸಿನಿಮಾ ಜಗತ್ತಿನ ತಾರೆಯಾಗುತ್ತಾಳೆ. ಮರೀನ್ ಡ್ರೈವ್‌ನಲ್ಲಿರುವ ಆಕೆಯ ಮನೆ "ಚಾತ್ಯೂ ಮರೀನ್" ತನ್ನ ಸಾಯಂಕಾಲದ "ಮೆಹಫಿಲ್"ಗಳಿಗೆ ಪ್ರಸಿದ್ಧಿ. ಇಲ್ಲಿ ದಿಲೀಪ್ ಕುಮಾರ್, ಮೆಹಬೂಬ್ ಮತ್ತು ಕಮಲ್ ಅಮ್ರೋಹಿ ಅವರು ಖಾಯಂ ಸಂದರ್ಶಕರು.
ಇದು ಜದ್ದಾನ್‌ಬಾಯಿಯ ಮಗಳು ಫಾತಿಮಾಳ ಮನೆಯೂ ಹೌದು. ಆಕೆಯೇ ಹಿಂದಿ ಚಿತ್ರ ಜಗತ್ತಿನಲ್ಲಿ ಕೋಲ್ಮಿಂಚು ಮೂಡಿಸಿದ ತಾರೆ ನರ್ಗೀಸ್ ಆಗಿ ಪ್ರಸಿದ್ಧಿಯಾದವಳು.
ಈ ಗ್ಲಾಮರ್ ಜಗತ್ತಿನಿಂದ ದೂರವೇ ಇದ್ದ ಹುಡುಗ ಬಲರಾಜ್ ದತ್ತ್. ದೇಶ ವಿಭಜನೆಯ ಕಾಲದಲ್ಲಿ ಈತ ತನಗೆ ಮತ್ತು ಕುಟುಂಬಿಕರ ವಸತಿಗಾಗಿ ಹೆಣಗಾಡುತ್ತಾ ಯೌವನಾವಸ್ಥೆಯನ್ನು ಕಳೆಯುತ್ತಿದ್ದ. 1950ರಲ್ಲಿ, 20ರ ವಯಸ್ಸಿನಲ್ಲಿ ಅವನೂ ಮುಂಬಯಿಗೆ ಬರುತ್ತಾನೆ. ಅಲ್ಲಿ ಅವನ ಜೀವನ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಚಲನಚಿತ್ರವೊಂದರಲ್ಲಿ ಅವನಿಗೆ ಪ್ರಧಾನ ಪಾತ್ರ ನೀಡಲಾಗುತ್ತದೆ. ಅಲ್ಲಿಂದ ಬೆಳೆದು ಬೆಳೆದು, ತಾರಾ ನಟನಾಗಿ ಬೆಳೆದು ನಿಂತ ಆತನೇ "ಸುನಿಲ್ ದತ್ತ್".
ಆನಂತರ, ಅವರ ಜೀವನದ ಮತ್ತೊಂದು ಬದಲಾವಣೆಯ ಹಂತ ಬರುತ್ತದೆ. 1957ರ ಮಾರ್ಚ್ 1ರಂದು, ಮದರ್ ಇಂಡಿಯಾ ಚಿತ್ರ ನಿರ್ಮಾಣದ ಸಂದರ್ಭ, ನರ್ಗಿಸ್ ಅವರು ಬೆಂಕಿಯ ಜ್ವಾಲೆಗಳ ಮಧ್ಯೆ ಸಿಲುಕಿದಾಗ, ಸುನಿಲ್ ತನ್ನ ಪ್ರಾಣ ಒತ್ತೆಯಿಟ್ಟು ಆಕೆಯನ್ನು ಕಾಪಾಡುತ್ತಾರೆ. ಅಲ್ಲಿಂದ ಅವರಿಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ.
ಈ ಹಿಂದೆ, ನರ್ಗಿಸ್ ಸುದೀರ್ಘ, ಆದರೆ ವಿಫಲವಾದ ಸಂಬಂಧವೊಂದನ್ನು ಹೊಂದಿದ್ದರು. ಇದು ಹೊಸ ಸಂಬಂಧದ ಮೇಲೆ ಪರಿಣಾಮ ಬೀರದಿದ್ದರೂ, ಪ್ರತಿಯೊಂದು ಅಡೆತಡೆಯನ್ನೂ ಮೀರಿ ಬೆಳೆಯಿತು. 1958ರ ಮಾರ್ಚ್ 11ರಂದು ಅವರಿಬ್ಬರೂ ವಿವಾಹವಾದರು.
ನಂತರದ್ದು ಒಂದಾಗಿ ಬಾಳ್ವೆ, ಸಂಜಯ್, ನಮ್ರತಾ ಮತ್ತು ಪ್ರಿಯಾ ಎಂಬ ಮುದ್ದಾದ ಮೂರು ಮಕ್ಕಳ ಜನನದೊಂದಿಗೆ ಜೀವನ ಸಂತಸಮಯವಾಗಿತ್ತಾದರೂ, ಆನಂತರ ಕಾಡಿದ್ದು ಆರ್ಥಿಕ ಬಿಕ್ಕಟ್ಟು, ನರ್ಗಿಸ್ ಅನಾರೋಗ್ಯ ಮತ್ತು ಮಾದಕದ್ರವ್ಯದ ದಾಸನಾದ ಮಗ ಸಂಜಯ್.
19ನೇ ಶತಮಾನದ ಅಂತ್ಯಭಾಗದಿಂದ ಇಂದಿನವರೆಗೂ ಘಟನಾವಳಿಗಳ ಮೇಲೆ ಬೆಳಕು ಚೆಲ್ಲುವ ಈ ಪುಸ್ತಕವು, ಹಿಂದಿ ಸಿನಿಮಾದಲ್ಲಿನ ಕ್ರಾಂತಿಕಾರಿ ಬದಲಾವಣೆಗಳು ಮತ್ತು ಸಮಾಜದಲ್ಲಾದ ಬದಲಾವಣೆಗಳ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.