ಬಾಲಿವುಡ್‌ನ ವಿವಾದಾತೀತ ಬಾದಶಾ ಶಾರೂಖ್ ಖಾನ್ ಅವರಿಂದು 42ನೇ ವರ್ಷಕ್ಕೆ ಕಾಲಿಟ್ಟರು.
ಮುಂಬಯಿಯಿಂದ ಮ್ಯಾನ್‌ಹಟನ್‌ವರೆಗೆ, ಬೆಂಗಳೂರಿನಿಂದ ಬೋಸ್ಟನ್‌ವರೆಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಶಾರೂಖ್ ಅವರು ಜನಿಸಿದ್ದು 1965ರ ನವೆಂಬರ್ 2ರಂದು ನವದೆಹಲಿಯಲ್ಲಿ. ಮುಂಬಯಿಗೆ ಬಂದ ಅವರು ಫೌಜಿ ಮತ್ತು ಸರ್ಕಸ್ ಮುಂತಾದ ದೂರದರ್ಶನ ಧಾರಾವಾಹಿಗಳಲ್ಲಿ ನಟಿಸುತ್ತಾ ಜನಮನ ಗೆದ್ದುಕೊಂಡಿದ್ದರು.
2004ರಲ್ಲಿ ನಟನೆಗಾಗಿ ಪದ್ಮ ಪ್ರಶಸ್ತಿಯನ್ನೂ ಗಳಿಸಿದ್ದ ಶಾರೂಖ್, ಕಳೆದ ಸುಮಾರು ಎರಡು ದಶಕಗಳಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಬಿರುಗಾಳಿ ಎಬ್ಬಿಸಿದ್ದಾರೆ. 1995ರ ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ (ಡಿಡಿಎಲ್‌ಜೆ), 1997ರ ದಿಲ್ ತೋ ಪಾಗಲ್ ಹೈ ಮತ್ತು 1998ರ ಕುಚ್ ಕುಚ್ ಹೋತಾ ಹೈ ಮುಂತಾದ ಚಿತ್ರಗಳ ಮೂಲಕ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲಾ ಚಿಂದಿ ಮಾಡಿದವರು. ಯಾವತ್ತೂ ನಾಯಕ ಪಾತ್ರಗಳಿಗೇ ಸೀಮಿತವಾಗದ ಅವರು ಅಂಜಾಮ್, ಡರ್, ಬಾಜಿಗರ್ ಮುಂತಾದ ಚಿತ್ರಗಳಲ್ಲಿ ಖಳ-ನಾಯಕನ ಪಾತ್ರದ ಮೂಲಕವೂ ಜನಮನ ಗೆದ್ದವರು.
ಈಗಾಗಲೇ 13 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಶಾರೂಖ್, 10 ರೂಪಾ ಸಿನೆಗೋಯರ್ಸ್ ಪ್ರಶಸ್ತಿಗಳು, 6 ಸ್ಟಾರ್ ಸ್ಕ್ರೀನ್ ವೀಡಿಯೋಕಾನ್ ಪ್ರಶಸ್ತಿಗಳು, ಆರು ಸನ್‌ಸುಯೀ ವೀಕ್ಷಕರ ಆಯ್ಕೆ ಚಿತ್ರ ಪ್ರಶಸ್ತಿಗಳು, ನಾಲ್ಕು ಝೀ ಸಿನೆ ಪ್ರಶಸ್ತಿಗಳು, 4 ಜನರ ಆಯ್ಕೆಯ ಚಲನಚಿತ್ರ ಪ್ರಶಸ್ತಿಗಳು, ಮೂರು ಐಐಎಫ್ಎ ಪ್ರಶಸ್ತಿಗಳು ಹಾಗೂ ಮೂರು ಝೀ ಗೋಲ್ಡ್ ಬಾಲಿವುಡ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ತನ್ನ ಬಾಲ್ಯದ ಗೆಳತಿ ಗೌರಿ ಛಿಬ್ಬಾ ಅವರನ್ನು ವಿವಾಹವಾಗಿರುವ ಶಾರಖ್‌ಗೆ ಆರ್ಯನ್ ಮತ್ತು ಸುಹಾನಾ ಎಂಬಿಬ್ಬರು ಮಕ್ಕಳಿದ್ದಾರೆ. ಗೆಳೆಯರಾದ ಆಜೀಜ್ ಮಿರ್ಜಾ ಮತ್ತು ಜೂಹಿ ಚಾವ್ಲಾ ಜತೆ ಸೇರಿಕೊಂಡು ಅವರು ಡ್ರೀಮ್ಸ್ ಅನ್‌ಲಿಮಿಟೆಡ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನೂ ಹುಟ್ಟು ಹಾಕಿದ್ದಾರೆ.
ಶಾರೂಖ್‌ಗೆ 1997ರಲ್ಲಿ ಅತ್ಯುತ್ತಮ ಭಾರತೀಯ ಪೌರ ಪ್ರಶಸ್ತಿ ದೊರೆತಿದೆ. 2002ರಲ್ಲಿ ಮನರಂಜನಾ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಗಾಗಿ ಅವರಿಗೆ ರಾಜೀವ್ ಗಾಂಧಿ ಎಕ್ಸಲೆನ್ಸ್ ಪ್ರಶಸ್ತಿಯೂ ಲಭ್ಯವಾಗಿದೆ.