ಹಿಂದಿನ ಸಲ ಆಶಾ ಬೋಂಸ್ಲೆ ಅವರು ಬ್ರೆಟ್ ಲೀ, ಉರ್ಮಿಳಾ ಮಾತೊಂಡ್ಕರ್ ಮತ್ತು ಸಂಜಯ್ ದತ್ ಅವರನ್ನು ತಮ್ಮೊಂದಿಗೆ ಹಾಡಿಸಿ ವಿಜೇತೆಯಾಗಿದ್ದರು. ಈ ಬಾರಿ ಇನ್ನಷ್ಟು ಜನರನ್ನು ಅವರು ತಮ್ಮೊಂದಿಗೆ ಹಾಡಿಸಲು ಸೆಳೆದಿದ್ದಾರೆ. 75ರ ಹರೆಯದಲ್ಲೂ ಆಶಾರ ಉತ್ಸಾಹಕ್ಕೆ ಎಣೆಯಿಲ್ಲ. ಸಂಗೀತ ಯಾತ್ರೆಯ ಬಗೆಗಿನ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಈ ವಯಸ್ಸಿನಲ್ಲಿಯೂ ಇಂತಹ ಉತ್ಸಾಹ ನಿಮಗೆಲ್ಲಿಂದ ದೊರಕುತ್ತದೆ ?
ಹ್ಹ...ಹ್ಹ...ಹ್ಹ... ಬಹುಶಃ, ನಾನು ಸಾಯುವವರೆಗೂ ಹೀಗೆ ಇರಲು ಬಯಸುತ್ತೇನೆ. ಇದು ಹೃದಯದ ಯೌವನವನ್ನು ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದು. ನಾನು ಜೀವನವನ್ನು ಆನಂದಿಸುತ್ತೇನೆ ಮತ್ತು ನನ್ನ ಜೀವನದ ಕೊನೆಯ ದಿನದವರೆಗೂ ಹೀಗೇ ಇರಲು ಬಯಸುತ್ತೇನೆ.
ನೀವು ಸಂಗೀತದ ಬಗ್ಗೆ ಹೇಳುತ್ತಿದ್ದೀರಿ ಅಲ್ಲವೇ?
ಹೌದು, ಬೇರೇನು. ನಾನು ಯಾವಾಗಲು ಸಂಗೀತದೊಂದಿಗೇ ಇದ್ದೇನೆ. ನಾನು ಸಂಗೀತದೊಂದಿಗೆ ಬದುಕುತ್ತೇನೆ ಮತ್ತು ಅದರೊಂದಿಗೆ ಮಡಿಯುತ್ತೇನೆ.
ಅದ್ದರಿಂದಲೇ ನೀವು ಆಶಾ ಮತ್ತು ಮಿತ್ರರು ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೀರಾ ?
ಹೌದು, ಅದೊಂದು ಸುಂದರ ಅನುಭವ.. ವಿಶೇಷವಾಗಿ ಬ್ರೆಟ್ ಲೀಯೊಂದಿಗೆ. ಸಂಜಯ್ ದತ್‌ರೊಂದಿಗೂ ಅಷ್ಟೇ. ಅವರು ಬಹಳ ವಿನಮ್ರ ವ್ಯಕ್ತಿ ಮತ್ತು ಅವರೆಲ್ಲರು ನನ್ನನ್ನು ಪ್ರೀತಿಸುತ್ತಾರೆ. ನಿಜವಾಗಿ ಹೇಳಬೇಕೆಂದರೆ ನಾನು ಆಶಾ ಮತ್ತು ಮಿತ್ರರು 3ಕ್ಕೆ ಸಹ ತಯಾರಾಗಿದ್ದೇನೆ.
ವಾವ್.. ಇದು ನಿಜಕ್ಕೂ ಒಳ್ಳೆಯ ಸುದ್ದಿ..
ಹೌದು, ಇದು ಇನ್ನೂ ಕೆಲವೇ ಸಮಯದಲ್ಲಿ ಕಾರ್ಯಗತವಾಗಲಿದೆ. ಮಿಥುನ್ ಚಕ್ರವರ್ತಿ ಮತ್ತು ಅನಿಲ್ ಕಪೂರ್ ಅವರುಗಳ ಭಾಗದ ಧ್ವನಿಮುದ್ರಣ ಈಗಾಗಲೇ ಮುಗಿದಿದೆ.
ಅವರೂ ಸಹ ಬಹಳ ಉತ್ಸುಕರಾಗಿರಬಹುದು...
ಹೌದು ಅವರಿಬ್ಬರೂ ನಿಜವಾಗಿಯೂ ಬಹಳ ಉತ್ಸುಕರಾಗಿದ್ದಾರೆ ಮತ್ತು ನಿಜಕ್ಕೂ ಅದ್ಭುತವಾಗಿ ಹಾಡಿದ್ದಾರೆ. ಅವರಿಬ್ಬರು ಉತ್ತಮ ಗಾಯಕರು.
IFM
ಯಾರನ್ನು ಅರಿಸಬೇಕೆಂದು ನಿಮಗೆ ಹೇಗೆ ತಿಳಿಯುತ್ತದೆ ಅಥವಾ ಅವರಾಗಿಯೇ ಬಂದು ನಿಮ್ಮಲ್ಲಿ ಕೇಳಿದರೆ ?
ಹೌದು.. ಯಾರು ಉತ್ತಮವಾಗಿ ಹಾಡಬಲ್ಲರೆಂದು ನನಗೆ ತಿಳಿಯುತ್ತದೆ. ನಾವು ಅದನ್ನೆಲ್ಲಾ ತಿಳಿದುಕೊಂಡಿರಬೇಕಾಗುತ್ತದೆ. ಇದುವರೆಗೂ ನನ್ನಲ್ಲಿ ಬಂದು ಕೇಳುವಷ್ಟು ಧೈರ್ಯವನ್ನು ಯಾರೂ ಮಾಡಿಲ್ಲ..(ನಗುತ್ತಾರೆ). ಅವರು ನನ್ನನ್ನು ಬಹಳಷ್ಟು ಗೌರವಿಸುತ್ತಾರೆ. ನಾನು ಯಾರು ಉತ್ತಮವಾಗಿ ಹಾಡಬಲ್ಲರೆಂದು ತಿಳಿದುಕೊಳ್ಳುತ್ತೇನೆ ಮತ್ತು ನಂತರ ಧ್ವನಿಮುದ್ರಣಕ್ಕೆ ತಯಾರಿ ನಡೆಸುತ್ತೇನೆ.
ನಾವು ಈ ಅಲ್ಬಮ್ ಅನ್ನು ಯಾವಾಗ ಕೇಳಬಹುದೆಂಬ ಬಗ್ಗೆ ತಿಳಿಸುತ್ತೀರಾ?
ಇನ್ನೂ ಬಹಳಷ್ಟು ಭಾಗ ಬಾಕಿ ಉಳಿದಿದೆ ಯಾಕೆಂದರೆ ನಾನು ನನ್ನ ಭಾಗವನ್ನು ಧ್ವನಿಮುದ್ರಸಿಲ್ಲ. ಮತ್ತು ಬಹಳಷ್ಟು ನಿರ್ಮಾಣ ನಂತರದ ಕೆಲಸಗಳನ್ನು ಮಾಡಬೇಕಿದೆ. ಆಲ್ಬಮ್ ಯಾವಾಗ ಹೊರಬರುತ್ತದೆ ಎಂಬುದರ ಬಗ್ಗೆ ನನಗೆ ನಿಖರವಾಗಿ ತಿಳಿದಿಲ್ಲ, ಆದರೆ ಅದು ಖಂಡಿತವಾಗಿಯೂ ಹೊರಬರುತ್ತದೆ.
ನಿಮ್ಮ ಪ್ರಕಾರ ಯಾರು ಉತ್ತಮ ಹಾಡುಗಾರರು.. ಮಿಥುನ್ ಚಕ್ರವರ್ತಿ ಅಥವಾ ಅನಿಲ್ ಕಪೂರ್...
ನಿಸ್ಸಂದೇಹವಾಗಿ ಇಬ್ಬರೂ. ಇಲ್ಲದಿದ್ದಲ್ಲಿ ನಾನು ಖಂಡಿತ ಅವರೊಂದಿಗೆ ಹಾಡುತ್ತಿರಲಿಲ್ಲ. ಬೂಮನ್ ಇರಾನಿ ಕೂಡ ಉತ್ತಮ ಗಾಯಕ. ಅನಿಲ್ ಚೆನ್ನಾಗಿ ಹಾಡುತ್ತಾರೆಂದು ನನಗೆ ಮೊದಲೇ ತಿಳಿದಿತ್ತು ಏಕೆಂದರೆ ಈ ಹಿಂದೆ ಒಂದೆರಡು ಬಾರಿ ಅವರು ಹಾಡುವುದನ್ನು ನಾನು ಕೇಳಿದ್ದೆ. ಮಿಥುನ್‌ರಲ್ಲಿ ಈಗಲೂ ಬಹಳಷ್ಟು ಚೈತನ್ಯವಿದೆ, ಅವರಲ್ಲಿ ನಾನು ಹಾಡಲು ಹೇಳಿದಾಗ ಅವರ ಹುಮ್ಮಸ್ಸು ಕಂಡು ನನಗೆ ಆಶ್ಚರ್ಯವಾಗಿತ್ತು.
ನೀವು ಈ ಯೋಜನೆಯನ್ನು ಮೊದಲೇ ರೂಪುಗೊಳಿಸುತ್ತಿದ್ದರೆ ಇದು ಇನ್ನಷ್ಟು ಉತ್ತಮವಾಗಿರುತ್ತಿತ್ತು ಎಂದು ನಿಮಗೆ ಅನಿಸುತ್ತಿಲ್ಲವೇ?
ಹೌದು, ನನಗೂ ಹಾಗೆ ಅನಿಸುತ್ತಿದೆ. ನಾನು ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇನೆ. ನಮ್ಮ ಸಮಯದಲ್ಲಿ ಉತ್ತಮ ಗಾಯಕರಾಗಿದ್ದ ನಟರಿದ್ದರು.
IFM
ಅಂದರೆ, ನೀವು ಹೇಳುತ್ತಿರುವುದು ಕಿಶೋರ್ ಕುಮಾರ್ ಬಗ್ಗೆಯೇ?
ಆತ ಅತ್ಯಂತ ಬುದ್ದಿವಂತ ಮತ್ತು ನನ್ನ ಅತ್ಯುತ್ತಮ ಸ್ನೇಹಿತ. ಅಶೋಕ್ ಕುಮಾರ್ ಕೂಡ ಶ್ರೇಷ್ಟ ಗಾಯಕ. ರಾಜ್ ಕಪೂರ್ ಮತ್ತು ಶಮ್ಮಿ ಕಪೂರ್ ಸಹ ಉತ್ತಮವಾಗಿ ಹಾಡಬಲ್ಲವರಾಗಿದ್ದರು. ಜೀವನ ಜ್ಯೋತಿ ಚಿತ್ರದಲ್ಲಿ ನಾನು ಶಮ್ಮಿ ಕಪೂರ್‌ರೊಂದಿಗೆ ಹಿನ್ನಲೆ ಗಾಯಕಿಯಾಗಿ ದುಡಿದಿದ್ದೆ. ಅವು ಉತ್ತಮ ದಿನಗಳು.
ನೀವು ಉತ್ತಮ ಸಂಗೀತಕ್ಕಾಗಿ ದುಡಿದ್ದೀರಿ.. ಈಗಲೂ ಅದನ್ನು ಮುಂದುವರಿಸಿದ್ದೀರಿ ಆದರೆ ನಿಮ್ಮ ಮಕ್ಕಳು ಎಂದೂ ಈ ವೃತ್ತಿಗೆ ಬಂದಿಲ್ಲ.....
(ಮೌನ ವಹಿಸುತ್ತಾರೆ)... ನಾನು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದೆ ಮತ್ತು ಅವರ ನನ್ನ ಮಾತನ್ನು ಪಾಲಿಸುತ್ತಿದ್ದ ಬಗ್ಗೆ ನಾನು ಬಹಳ ಸಂತುಷ್ಟಳಾಗಿದ್ದೇನೆ. ನಾನು ಅವರ ಬಗ್ಗೆ ಖುಷಿಯಾಗಿದ್ದೇನೆ. ಸಣ್ಣ ವಯಸ್ಸಿನಲ್ಲಿಯೇ ಪ್ರಸಿದ್ಧಿಯ ಮದ ಅವರ ತಲೆಗೇರಬಾರದೆಂದು, ನಾನು ಅವರನ್ನು ರೇಕಾರ್ಡಿಂಗ್ ಅಥವಾ ಫಿಲ್ಮ್ ಸೆಟ್‌ಗಳಿಗೆ ನನ್ನೊಂದಿಗೆ ಬರಬಾರದೆಂದು ಹೇಳಿದ್ದೆ.
ನೀವು ನಿಧಾನವಾಗಿ ಹಿನ್ನಲೆ ಸಂಗೀತದಿಂದ ದೂರ ಸರಿಯುತ್ತಿರುವಿರಾ?
ಯಾರು ಹಾಗೆಂದವರು?
ನೀವು ಹೆಚ್ಚು ಹಾಡುತ್ತಿಲ್ಲ...
ಅದಕ್ಕೆ ಕಾರಣ ನಾನು ನನ್ನದೇ ನಿಯಮಗಳಡಿ ದುಡಿಯುತ್ತಿರುವುದು.
ಮತ್ತು ಈಗಲೂ ನೀವು ಬಹಳಷ್ಟು ಲೈವ್ ಶೋಗಳನ್ನು ಮಾಡುತ್ತಿರುವಿರಿ...
ಹೌದು, ಭಾರತ ಮತ್ತು ವಿದೇಶಗಳೆರಡರಲ್ಲಿಯೂ. ನನ್ನ ದುಡಿಮೆಯ ರೀತಿ ಯಾವಾಗಲೂ ವಿಭಿನ್ನವಾಗಿತ್ತು. ಲತಾ ಅಕ್ಕ ಸಹ ಹೀಗೇ ಇದ್ದರು. ಮತ್ತು ಇದರಿಂದಾಗಿಯೇ ನಾವು ಈ ಉದ್ಯಮದಲ್ಲಿ ಒಂದು ಉತ್ತಮ ಸ್ಥಾನ ಪಡೆಯಲು ಶಕ್ತರಾದೆವು. ನಾನು ಲೈವ್ ಶೋಗಳನ್ನು ಮಾಡುವಾಗ ನಾನೇ ನಿಬಂಧನೆಗಳನ್ನು ಸೂಚಿಸುತ್ತೇನೆ.
ವೇದಿಕೆಯ ಮೇಲೆ ಗೊಂದಲಗಳು ನನಗೆ ಹಿಡಿಸುವುದಿಲ್ಲ. ಅದು ನನ್ನ ಕಾರ್ಯಕ್ರಮವಾಗಿರುವುದರಿಂದ ಜನರಿಗೆ ಖುಷಿ ನೀಡುವ ಕಾರ್ಯಕ್ರಮವನ್ನು ನೀಡಬೇಕು ಎಂಬುದು ನನಗೆ ತಿಳಿದಿರುತ್ತದೆ. ಮತ್ತು ನನ್ನ ಸೂಚನೆಗಳನ್ನು ನನ್ನ ಮ್ಯೂಶಿಸಿಯನ್‌ಗಳು ಪಾಲಿಸುತ್ತಾರೆ. ಯಾರೂ ನನ್ನ ಶೋನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಏಕೆಂದರೆ ನಾನು ಯಾರಿಗೂ ಅಂತಹ ಅವಕಾಶವನ್ನು ನೀಡುವುದಿಲ್ಲ.