'ಕ್ಯೋಂಕಿ, ಸಾಸ್ ಭೀ ಕಭೀ ಬಹೂ ಥೀ' ದಾರಾವಾಹಿ ಮೂಲಕ ಮನೆಮನೆಯ ಮನಗಳಲ್ಲಿ ತುಳಸಿಯಾಗಿ ಸ್ಥಾನ ಗಿಟ್ಟಿಸಿಕೊಂಡ ಸ್ಮೃತಿ ಇರಾನಿ ಸದ್ಯದಲ್ಲೇ ಕಾಮಿಡಿ ರೂಪದಲ್ಲಿ ಹೊರಬರುತ್ತಿದ್ದಾರೆ. ಮಣಿಬೆನ್ ಡಾಟ್ ಕಾಂ ಎಂಬ ಶೋ ಮೂಲಕ ಸ್ಮೃತಿ ಸ್ಯಾಬ್ ಟಿವಿಯಲ್ಲಿ ಜೂನ್ 8ರಿಂದಲೇ ಬರಲು ಆರಂಭಿಸಿದ್ದಾರೆ.
''ಕಾಮಿಡಿ ಪಾತ್ರವೆಲ್ಲವೂ ಊಹಾತ್ಮಕವಾಗಿದ್ದು, ನೈಜತೆಗೆ ಹತ್ತಿರವಿರುವ ತುಳಸಿ ಪಾತ್ರವೇ ನನಗೆ ಅಚ್ಚುಮೆಚ್ಚು. ಈ ಪಾತ್ರವೇ ನನಗೊಂದು ಅದ್ಭುತ ಸಾಧನೆಯ ಗರಿಮೆಯನ್ನು ನೀಡಿತು. ಜನರು ನನ್ನನ್ನು ಇಷ್ಟಪಡತೊಡಗಿದರು. ನನಗೊಂದು ಐಡೆಂಟಿಟಿ ಸಿಕ್ಕಿದ್ದೇ ತುಳಸಿಯಿಂದ'' ಎನ್ನುತ್ತಾರೆ ಸ್ಮೃತಿ ಇರಾನಿ.
ಸ್ಟಾರ್ ಪ್ಲಸ್ ಚಾನಲ್‌ನಲ್ಲಿ 1800 ಎಪಿಸೋಡ್‌ಗಳಲ್ಲಿ ಪ್ರಸಾರವಾದ ಕ್ಯೋಂಕಿ ಸಾಸ್ ಭೀ ಕಭೀ ಬಹೂ ಥೀ ದಾರಾವಾಹಿ ಕೊನೆಗೂ ಕಳೆದ ವರ್ಷ ನವೆಂಬರ್‌ನಲ್ಲಿ ಮುಕ್ತಾಯಗೊಂಡಿತ್ತು. ಸ್ಮೃತಿ ಪ್ರೊಡಕ್ಷನ್, ಬರವಣಿಗೆ ಹಾಗೂ ರಾಜಕಾರಣಗಳಲ್ಲೂ ತೊಡಗಿಕೊಂಡಿದ್ದಾರೆ. ಆದರೂ ಐಡೆಂಟಿಟಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನುತ್ತಾರೆ ಸ್ಮೃತಿ.
''ಮೊದಲೆಲ್ಲ ನನ್ನನ್ನು ಎಲ್ಲರೂ ತುಳಸಿ ಎಂದೇ ಕರೆಯುತ್ತಿದ್ದರೂ, ನಿಧಾನವಾಗಿ ಈಗ ನಿಜ ನಾಮಧೇಯ ತಿಳಿದು ಸ್ಮೃತಿಯೆಂದೇ ಜನರು ನನ್ನನ್ನು ಕರೆಯಲು ಆರಂಭಿಸಿದ್ದಾರೆ. 'ಕುಚ್ ದಿಲ್ ಸೇ' ಕಾರ್ಯಕ್ರಮವನ್ನು ಆಯೋಜಿಸುವಾಗಲೂ ರಾಜಕೀಯದಿಂದ ನನಗೇನೂ ತೊಂದರೆಯಾಗಿಲ್ಲ ಎನ್ನುತ್ತಾರೆ ಸ್ಮೃತಿ.
'ಕ್ಯೋಂಕಿ...' ದಾರಾವಾಹಿಯಿಂದಲೇ ಸ್ಮೃತಿ ರಾತ್ರಿ ಬೆಳಗಾಗುವುದರೊಳಗೆ ತಾರಾಪಟ್ಟ ಪಡೆಯುವಂತಾಯಿತು. ನಂತರ 'ರಾಮಾಯಣ್', 'ಥೋಡಿ ಸೀ ಜಮೀನ್', 'ಥೋಡಾ ಸಾ ಆಸ್‌ಮಾನ್', 'ವಿರುದ್ಧ್' ಮೂಲಕ ಖ್ಯಾತಿ ಪಡೆದರು. ಇಷ್ಟೇ ಅಲ್ಲದೆ, ಸ್ಮೃತಿ ಬಿಜಿಪಿ ಮಹಾರಾಷ್ಟ್ರದ ಯುವಮೋರ್ಚಾದ ಉಪಾಧ್ಯಕ್ಷೆಯೂ ಆಗಿದ್ದಾರೆ.
ಸ್ಮೃತಿ ಇರಾನಿ ಜೂ.8ರಿಂದ ಕಾಮಿಡಿ ರೂಪದಲ್ಲಿ ಸ್ಯಾಬ್ ಟಿವಿಯಲ್ಲಿ ದರ್ಶನ ನೀಡುತ್ತಿದ್ದಾರೆ. ಕಾರ್ಯಕ್ರಮದ ಹೆಸರು ಮಣಿಬೆನ್ ಡಾಟ್ ಕಾಂ. ಇಮ್ತಿಹಾಸ್ ಪಟೇಲ್ ಅವರ ಗುಜರಾತಿ ಹಿಟ್ ನಾಟಕವೂ ಇದೇ ಹೆಸರಿನದ್ದು. ಮುಂಬೈಯ ಉನ್ನತ ಶ್ರೇಣಿಯ ಸಮಾಜದಲ್ಲಿ ಮಧ್ಯಮ ವರ್ಗದ ಮಹಿಳೆಯ ಅನುಭವಗಳ ಕಥೆಯಿದು.
ಈವರೆಗೆ ಗಂಭೀರ ಪಾತ್ರಗಳಲ್ಲೇ ಮಿಂಚಿದ ನಂತರ ಈ ಬಾರಿ ಕಾಮಿಡಿ ಪಾತ್ರದಲ್ಲಿ ನಟಿಸಲು ಕಷ್ಟವಾಗುವುದಿಲ್ಲವೇ ಎಂದಿದ್ದಕ್ಕೆ ಸ್ಮೃತಿ ಹೇಳುತ್ತಾರೆ, ''ಸ್ಟಾರ್‌ನ ಇಮೇಜ್ ಇಂತಹುದೇ ಪಾತ್ರಗಳಲ್ಲಿ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ನನ್ನ ಕೆರಿಯರ್ ಆರಂಭಿಸಿದ್ದೇ 'ಟೀ ಟೈಂ ಮನೋರಂಜನ್' ಎಂಬ ಕಾಮಿಡಿ ಶೋ ಮೂಲಕ. ನಂತರವಷ್ಟೆ ನಾನು ಗಂಭೀರ ಪಾತ್ರಗಳಲ್ಲಿ ಅಭಿನಯಿಸಲು ಆರಂಭಿಸಿದೆ. ಮಣಿಬೆನ್‌ಳನ್ನು ಖಂಡಿತವಾಗಿಯೂ ತುಳಸಿ ಜತೆ ಹೋಲಿಕೆ ಮಾಡಲಾಗುವುದಿಲ್ಲ. ಯಾಕೆಂದರೆ ಆಕೆ ಸಾಮಾನ್ಯ ಮಹಿಳೆ ಅಷ್ಟೆ. ನೇರಾನೇರ ವ್ಯಕ್ತಿತ್ವದ ಒರಟು ಮಹಿಳೆ'' ಎನ್ನುತ್ತಾರೆ.
ಸ್ಮೃತಿ ಹೇಳುವಂತೆ, ''ಈಗ ಜನರಲ್ ಎಂಟರ್‌ಟೈನ್‌ಮೆಂಟ್ ಚಾನಲ್‌ಗಳ ಶೈಲಿ ಬದಲಾಗಿದೆ. ಟಿವಿ ಇರೋದು ಬದಲಾವಣೆ ತರೋದಕ್ಕೆ ಅಲ್ಲ. ಅದು ಖಂಡಿತ ಒಂದು ಮನರಂಜನೆಯ ಸರಕು'' ಎನ್ನುತ್ತಾರೆ.
ಇವೆಲ್ಲವುಗಳ ಜತೆಜತೆಗೇ ಸ್ಮೃತಿ ಎರಡು ಗುಜರಾತಿ ನಾಟಕಗಳನ್ನು ನಿರ್ಮಾಣ ಮಾಡುತ್ತಿದ್ದಾರಂತೆ. ಆದರೆ 'ಕ್ಯೋಂಕಿ...' ನಂತರ ಮತ್ತೆ ಏಕ್ತಾ ಕಪೂರ್ ಜತೆಗೆ ಆಕೆ ಕೆಲಸ ಮಾಡಿಲ್ಲ. ಏಕ್ತಾ ಹಾಗೂ ಸ್ಮೃತಿ ಜತೆ ಇರುವ ಭಿನ್ನಾಭಿಪ್ರಾಯ ದೂರವಾದರೆ ಇದು ಸಾಧ್ಯವಾಗುತ್ತದೆ.ಈ ಬಗ್ಗೆ ಸ್ಮೃತಿಯನ್ನು ಕೇಳಿದರೆ ಆಕೆ, ''ಇದೆಲ್ಲವೂ ಏಕ್ತಾಗೆ ಬಿಟ್ಟ ನಿರ್ಧಾರ'' ಎಂದು ಸುಮ್ಮನಾಗುತ್ತಾರೆ.