ರಾಖಿ ಸಾವಂತಳ ಸ್ವಯಂವರದ ಎನ್‌ಡಿಟಿವಿ ಇಮ್ಯಾಜಿನ್‌ನಲ್ಲಿ ಭರ್ಜರಿಯಾಗಿ ಶುರುವಾಗಿ ವಾರ ಕಳೆದಿದೆ. ಮೊದಲ ದಿನದ ಕಾರ್ಯಕ್ರಮದಲ್ಲಿ ರಾಖಿ 30 ನಿಮಿಷಗಳ ನಂತರ ದೇವಕನ್ಯೆ ಸ್ವರ್ಗದಿಂದ ಇಳಿದ ಹಾಗೆ ಬೆಕ್ಕಿನ ಹೆಜ್ಜೆಯಿಡುತ್ತಾ ಫತೇಘರ್ ಅರಮನೆಯಲ್ಲಿ ನಡೆದು ಬರುತ್ತಿದ್ದರೆ, ಎಲ್ಲ 16 ನವ ತರುಣರಿಗೆ ತಾವೇ ರಾಖಿಯನ್ನು ಮದುವೆಯಾಗುತ್ತಿರೋರು ಎಂಬ ಸಂತಸವೇನೋ... ಪುಟ್ಟ ಕೆಂಪು ಬಿಂದಿಯನ್ನು ಹಣೆಯಲ್ಲಿ ಧರಿಸಿ ರಾಜಕುಮಾರಿ ನಡೆದುಬಂದಂತೆ ವೇದಿಕೆಗೆ ಬಂದಳು ರಾಖಿ. ಚಿನ್ನದ ಬಣ್ಣದ ಕುಸುರಿ ಕೆಲಸದಿಂದ ವೈಭವೀಕೃತವಾದ ಸೀರೆಯುಟ್ಟಿದ್ದ ಆಕೆ ಕಾರ್ಯಕ್ರಮದ ಕೇಂದ್ರ ಬಿಂದು. ಸೀರೆಯಿಂದಾಗಿ ರಾಖಿ ಹೊಳೆಯುತ್ತಿದ್ದಳೋ... ರಾಖಿಯಿಂದಾಗಿ ಸೀರೆ ಹೊಳೆಯುತ್ತಿತ್ತೋ... ಒಟ್ಟಾರೆ ಹೊಳೆಯುವ ರಾಖಿಯನ್ನೇ ಎವೆಯಿಕ್ಕದೆ 16 'ಕಿಂಪುರುಷ'ರೂ ನೋಡುತ್ತಿದ್ದರು. ಈವರೆಗೆ ಸ್ವಲ್ಪ ದಪ್ಪಕ್ಕಿದ್ದ ರಾಖಿ ಇಗ ಬಳ್ಳಿಯಂತೆ ಬಳುಕುವ ಶರೀರವನ್ನೂ ಪಡೆದಿದ್ದು ವಿಶೇಷ.
ರಾಖಿಯನ್ನು ಮದುವೆಯಾಗಬಯಸುವವರಲ್ಲಿ 21ರ ಹರೆಯದ ಕಾಲೇಜು ಹುಡುಗನೂ ಸೇರಿದಂತೆ ಭಾರತೀಯ ಮೂಲದ ವಿದೇಶೀಯರೂ ಇದ್ದಾರೆ. ಆಶ್ಚರ್ಯವೆಂದರೆ, 21ರ ಹರೆಯದ ಕಾಲೇಜು ಹುಡುಗನ ಅರ್ಜಿಯನ್ನು ರಾಖಿ ಸ್ವಯಂವರಕ್ಕೆ ಪೋಸ್ಟ್ ಮಾಡಿದ್ದು ಆತನ ಅಮ್ಮ. ರಾಖಿ ಹೇಳುವಂತೆ, ಈಗಾಗಲೇ ಆ ಹುಡುಗನ ಅಮ್ಮ ಅಪ್ಪ ಇಬ್ಬರೂ ನನ್ನನ್ನು ಸೊಸೆ ಅಂತ ಸ್ವೀಕರಿಸಿದ್ದಾರೆ! ರಾಖಿಯನ್ನು ಮದ್ವೆಯಾಗಲು ಕ್ಯೂನಲ್ಲಿರುವ ಇನ್ನೊಬ್ಬ, ಅತಿರೇಕ್ ಶರ್ಮಾ ರಾಖಿಯ ಮಾಜಿ ಪ್ರೇಮಿ ಅಭಿಷೇಕ್ ಅವಸ್ತಿಯ ಖಾಸಾ ಗೆಳೆಯನಂತೆ! ಮತ್ತೊಬ್ಬ ನಾಗಪುರದ ಅಶ್ವಿನ್ ಚೌಧರಿಯಂತೂ ರಾಖಿಯ ಪ್ರೇಮದಲ್ಲಿ ಬಂಧಿಯಾಗಿ ಹಲವು ವರ್ಷಗಳಿಂದ ಒದ್ದಾಡುತ್ತಿದ್ದನಂತೆ. ರಾಖಿಯ ಹುಚ್ಚು ಪ್ರೇಮದ ಹೊಳೆಯಲ್ಲಿ ಮಿಂದಿರುವ ಅಶ್ವಿನ್ ಈಗ ಆಯ್ಕೆಯಾದ 16 ಮಂದಿಯಲ್ಲಿ ಸ್ಥಾನ ಪಡೆದಿದ್ದಾನಂತೆ. ರಾಖಿಯನ್ನು ಮದ್ವೆಯಾಗುವ ಸ್ವಯಂವರದಲ್ಲಿ ಭಾಗವಹಿಸಲು ತನ್ನ ಅಮ್ಮ, ಅಪ್ಪನ ಜತೆಗೆ ಕೋಪ ಮಾಡಿಕೊಂಡು ಬಂದಿದ್ದಾನಂತೆ!!! ಒಟ್ಟಾರೆ ಒಬ್ಬೊಬ್ಬರದು ಒಂದೊಂದು ಕಥೆ...
ಏನೋಪ್ಪಾ... ಆದರೆ ರಾಖಿ ಮಾತ್ರ ಹಳೆಯ ಸೀತೆ ಮಾಡಿದಂತೆ ಬಿಲ್ಗಾರಿಕೆ ಪರೀಕ್ಷೆ ಮಾಡುತ್ತಿಲ್ಲ. ಬದಲಾಗಿ ಅಗ್ನಿಪರೀಕ್ಷೆಯೇ ಮಾಡುತ್ತಿದ್ದಾಳೆ. ರಾಖಿ ಕೂರು ಎಂದರೆ 16 ಮಂದಿಯೂ ಕೂರುತ್ತಾರೆ. ನೃತ್ಯ ಮಾಡು ಎಂದರೆ ಮನಃಪೂರ್ವಕವಾಗಿ ನೃತ್ಯವನ್ನೂ ಮಾಡುತ್ತಾರೆ. ಹಾಡನ್ನೂ ಹಾಡುತ್ತಾರೆ. ಊಟದ ವೇಳೆ ಭಾವುಕವಾಗಿ ಸಿನಿಮಾದಲ್ಲಿ ಮಾತನಾಡಿದಂತೆ ಲವ್ ಸೀನನ್ನೇ ಕ್ರಿಯೇಟ್ ಮಾಡುತ್ತಾರೆ. ಒಟ್ಟಾರೆ ದಿನದಿಂದ ದಿನಕ್ಕೆ ರಾಖಿಯ ಪರೀಕ್ಷೆ ಕಷ್ಟವಾಗುತ್ತಾ ಸಾಗುತ್ತಿದೆ. ಈಗಾಗಲೇ ಆ ಅಗ್ನಿ ಪರೀಕ್ಷೆಯಲ್ಲಿ ಆರು ಮಂದಿ ಹೊರಬಿದ್ದು 10 ಮಂದಿ ಕಣದಲ್ಲಿದ್ದಾರೆ. ಎನ್‌ಡಿಟಿವಿಗಂತೂ ಭರ್ಜರಿ ಟಿಆರ್‌ಪಿ!
ಅಂದಹಾಗೆ, ವಿಶೇಷವೆಂದರೆ ಕಾರ್ಯಕ್ರಮದ ಬಗ್ಗೆ ರಾಖಿ ಹೆತ್ತವರು ಮಾತ್ರ ಮುಖ ಊದಿಸಿಕೊಂಡು ಕೂತಿದ್ದಾರಂತೆ. ಮಗಳ ಹಾರಾಟ ಇಂದು ನಿನ್ನೆಯದಲ್ಲ. ಆಕೆಯನ್ನು ಕಂಟ್ರೋಲ್ ಮಾಡಲು ನಮ್ಮ ಕೈಯಲ್ಲಂತೂ ಸಾಧ್ಯವಿಲ್ಲ. ಅವಳ ಜೀವನ ಅವಳಿಗೆ. ಅವಳ ನಿರ್ಧಾ ಅವಳೇ ತೆಗೆದುಕೊಳ್ಳಲಿ. ಬೇಕಾದ್ದು ಮಾಡಲಿ ಎಂದಿದ್ದಾರಂತೆ!
IFM
ಮೊನ್ನೆ ಮೊನ್ನೆ, '16 ಮಂದಿಯೂ ಚೆನ್ನಾಗಿದ್ದಾರೆ, ಎಲ್ಲರನ್ನೂ ಮದ್ವೆಯಾಗಿ ದ್ರೌಪದಿಯಾಗುತ್ತೇನೆ' ಎಂದಿದ್ದ ರಾಖಿ, ಈಗ ಆ 16 ಮಂದಿ ವರಮಹಾಶಯರ ಬಗ್ಗೆ ಕೇಳಿದರೆ ಮುಖ ಕೆಂಪಗಾಗಿಸಿ ನಾಚುತ್ತಾಳೆ. ಅರೆ, 'ರಾಖಿಗೆ ನಾಚಿಕೆಯೂ ಆಗುತ್ತಾ... ವಿಶ್ವದ ಎಂಟನೇ ಅದ್ಭುತವೇ ಸರಿ!' ಎಂದೆಲ್ಲಾ ಬಣ್ಣಿಸಲು ಶುರುಮಾಡಬೇಡಿ. ಒಟ್ಟಾರೆ, ನಿಜಕ್ಕೂ ರಾಖಿಯ ಮುಖವೆಲ್ಲಾ ಕೆಂಪಗಾಯಿತಂತೆ. ಮೇಕಪ್ ಹೆಚ್ಚಾಗಿ ಕೆಂಪಾದದ್ದಂತೂ ಖಂಡಿತ ಅಲ್ಲ!
ಅಂದಹಾಗೆ ರಾಖಿ ಈ 16 ಮಂದಿಯಲ್ಲಿ ಯಾರನ್ನು ಮದುವೆಯಾಗುತ್ತಾಳೆ? ಆಕೆಯ ಸತ್ವಪರೀಕ್ಷೆಯಲ್ಲಿ ಗೆದ್ದವ ಹೇಗಿರಬೇಕು? ಎಂದರೆ ರಾಖಿ ನಾಚಿ ನೀರಾಗಿ ಹೇಳೋದು ಹೀಗೆ, ''ಆತ ಯಾವುದೇ ಒಪ್ಪಂದ, ಕಂಡೀಶನ್‌ಗಳಿಲ್ಲದೇ ನನ್ನನ್ನು ಮದುವೆಯಾಗಬೇಕು. ಆತನಂತಿರುವವರು ನನಗೆ ಈವರೆಗೆ ಯಾರೂ ಸಿಕ್ಕಿರಲೇಬಾರದು. ಸಿಗಲೂಬಾರದು. ಆತ ಜೀವನದಲ್ಲಿ ಮುಂದೆ ಬರಲು 'ರಾಖಿಯ ಗಂಡ' ಎಂಬ ಮಾರ್ಗವನ್ನು ಬಳಸಿಕೊಳ್ಳಬಾರದು. ಅರ್ಥಾತ್ ನನ್ನನ್ನು ಆತ ಅವಲಂಬಿಸಬಾರದು. ಅದಕ್ಕೂ ಮುಖ್ಯವಾಗಿ ಆತನ ಮನಸ್ಸು ಪರಿಶುದ್ಧವಾಗಿರಬೇಕು.''
ಇಷ್ಟೆಲ್ಲ ಬಯಸುವ ರಾಖಿಯೂ ಕೂಡಾ ಆತನಿಗೆ ಸತಿ ಸಾವಿತ್ರಿಯಂತೆ ಸೇವೆ ಮಾಡುತ್ತಾಳಂತೆ! ಆಕೆ ಹೇಳುವಂತೆ, ಆಕೆಯಲ್ಲಿ ಆದರ್ಶ ಪತ್ನಿಯಲ್ಲಿರಬೇಕಾದ ಎಲ್ಲ ಗುಣಗಳೂ ಇವೆಯಂತೆ! ''ನಾನು ಗಂಡನೊಂದಿಗೆ ಬೇರೆ ಮನೆ ಮಾಡುವುದಿಲ್ಲ. ನಾನು ಮದುವೆ ಎಂದರೆ ಅದೊಂದು ಪವಿತ್ರ ಸಂಬಂಧ ಎಂದುಕೊಳ್ಳುತ್ತೇನೆ. ಹಾಗಾಗಿ ಅತ್ತೆ ಮಾವ ಇರುವ ತುಂಬು ಕುಟುಂಬದಲ್ಲಿ ಸೊಸೆಯಾಗಿ ಎಲ್ಲ ಕಾರ್ಯಗಳನ್ನೂ, ಜವಾಬ್ದಾರಿಗಳನ್ನೂ ಹೊತ್ತುಕೊಳ್ಳುತ್ತೇನೆ. ಆತನಿಗೆ ಪತ್ನಿಯಾಗಿಯೂ ಎಲ್ಲ ಕಾರ್ಯಗಳನ್ನು ನಿಭಾಯಿಸುತ್ತೇನೆ. ನಾನು ನಿಜಕ್ಕೂ ಆತನನ್ನು ಗಂಡ ಎಂದು ಸ್ವೀಕರಿಸಿ ಜೀವನಪೂರ್ತಿ ಆತನ ಜತೆ ಚೆನ್ನಾಗಿರಬೇಕೆಂದೇ ಆಶಾವಾದ ಹೊತ್ತಿದ್ದೇನೆ. ಇದು ಕಾಂಟ್ರ್ಯಾಕ್ಟ್ ಅಂತೂ ಖಂಡಿತ ಅಲ್ಲ.'' ಎಂದು ಅಚ್ಚರಿ ಮೂಡಿಸುತ್ತಾಳೆ.
ಇಷ್ಟೆಲ್ಲಾ ಕಥೆ ನಡೆದ್ರೂ, ಹಾಗಾದರೆ, ರಾಖಿ ನಿಜವಾಗಿಯೂ ಮದ್ವೆಯಾಗುತ್ತಾಳಾ ಅಂತ ಇನ್ನೂ ಹಲವರಲ್ಲಿ ಸಂಶಯ ಇದೆ. ರಾಖಿಯ ಹಲವು ಅವತಾರಗಳನ್ನು ನೋಡುತ್ತಲೇ ಬಂದವರಿಗೆ ಈ ಪ್ರಶ್ನೆ ಬಂದರೆ ಅದು ಅವರ ತಪ್ಪಲ್ಲ ಬಿಡಿ. ಆದರೆ ರಾಖಿ ಹೇಳೋದು ಮಾತ್ರ, ನಾನು ಪಬ್ಲಿಸಿಟಿಗಾಗಿ ಮದ್ವೆ ಆಗ್ತಾ ಇಲ್ಲ. ನಾನು ಮದುವೆಯಾಗಬೇಕು. ಹಲವು ಹುಡುಗೀರು ನನ್ನ ಮದ್ವೆಯಿಂದ ಪ್ರಭಾವಿತರಾಗಲಿ. ನಾನು ಇತಿಹಾಸ ಬರೆಯುತ್ತೇನೆ ಅನ್ನುತ್ತಾಳೆ!
ಅಂದಹಾಗೆ, ಸೋಮವಾರದಿಂದ ಶುಕ್ರವಾರದವರೆಗೆ ಟಿವಿ ಪರದೆಯಲ್ಲಿ 9 ಗಂಟೆ ರಾತ್ರಿಗೆ ಕಾಣಿಸುವ 'ರಾಖಿ ಕಾ ಸ್ವಯಂವರ' ಕಾರ್ಯಕ್ರಮಕ್ಕೆ ಅತ್ಯುತ್ತಮ ಟಿಆರ್‌ಪಿಯಂತೆ. ಕೆಲವೇ ಸಮಯಗಳ ಹಿಂದೆ ಆರಂಭವಾದ ಎನ್‌ಟಿವಿ ಇಮ್ಯಾಜಿನ್ ಚಾನಲ್ ಮನರಂಜನೆಯ ಯುಗದಲ್ಲಿ ತನ್ನ ಟಿಆರ್‌ಪಿ ಹೆಚ್ಚಿಸಲು ಶತ ಪ್ರಯತ್ನ ನಡೆಸುತ್ತಿರುವಾಗಲೇ ದುತ್ತೆಂದು ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿ ಬಂದಿದ್ದು ಈ ರಾಖಿ. ಎನ್‌ಡಿಟಿವಿ ಇಮ್ಯಾಜಿನ್ ಪಾಲಿಗೀಗ ಇಮ್ಯಾಜಿನ್ನೇ ಮಾಡದ ಹಾಗೆ ದೇವತೆಯಾಗಿಬಿಟ್ಟಿದ್ದಾಳೆ ಈ ರಾಖಿ. ಹೊಸ ಮನರಂಜನಾ ಚಾನಲ್ ಕಲರ್ಸ್, ಸ್ಟಾರ್ ಪ್ಲಸ್, ಝೀ ಚಾನಲ್‌ಗಳಿಗೆ ಈ ಕಾರ್ಯಕ್ರಮ ಪ್ರಬಲ ಪ್ರತಿಸ್ಪರ್ಧೆಯನ್ನು ಒಡ್ಡಿದೆ. 3.5ರಷ್ಟು ಟಿಆರ್‌ಪಿ ಪಡೆದಿರುವ ರಾಖಿ ಕಾ ಸ್ವಯಂವರ ಉಳಿದ ಚಾನಲ್‌ಗಳ ಕಾರ್ಯಕ್ರಗಳಿಗಿಂತ ಮುಂದಿದೆ.
ಮೊದಲ ದಿನದ ಕಾರ್ಯಕ್ರಮದಲ್ಲಿ 16 ಮಂದಿಯೂ ರಾಖಿಯನ್ನು ಇಂಪ್ರೆಸ್ ಮಾಡಲು ಹಲವು ಗಿಫ್ಟ್‌ಗಳನ್ನೇ ನೀಡಿದ್ದಾರೆ. ಕಾಶ್ಮೀರದ ಅಥರ್ ಪರ್‌ವೇಜ್ ಆಕೆಗೆ ಪಶ್ಮೀನಾ ಶಾಲನ್ನು ಉಡುಗೊರೆಯಾಗಿ ನೀಡಿದರೆ, ಮುಂಬೈಯ ರಾಜ್ ಕೃಪಾಲ್ ಸಿಂಗ್ ಬಿಳಿಯ ಬಣ್ಣದ ಮದುವೆ ಗೌನನ್ನೇ ಉಡುಗೊರೆಯಾಗಿ ನೀಡಿದ್ದಾನೆ. ಜತೆಗೆ ತಾನೇ ಆಕೆಯನ್ನು ಮದುವೆಯಾಗುವ ಆತ್ಮವಿಶ್ವಾಸವನ್ನು ಹೊಂದಿದ್ದು, ಮದುವೆಯ ದಿನ ಆತ ಉಡುಗೊರೆ ನೀಡಿದ ಗೌನನ್ನೇ ಆಕೆ ಧರಿಸಬೇಕೆಂದು ಹೇಳಿದ್ದಾರೆ. ಆದರೆ ರಾಜ್ ಕೃಪಾಲ್ ಸಿಂಗ್ ಈಗಾಗಲೇ ಮದುವೆಯಾಗುವ ಭಾಗ್ಯದಿಂದ ವಂಚಿತರಾಗಿದ್ದು ಈ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ ಅನ್ನೋದು ಸದ್ಯದ ಸತ್ಯ. ಅಶ್ವಿನ್ ಚೌಧರಿ ರಾಖಿಗೆ ಪ್ರಿಯವಾಗಿರುವ ನಾಗಪುರದ ಖ್ಯಾತ ಆರೆಂಜ್ ಸಿಹಿ ತಿಂಡಿಯನ್ನು ಉಡುಗೊರೆ ನೀಡಿದ್ದಾರೆ. ಕಪಿಲ್ ಪ್ರೇಮದ ಸಂಕೇತವಾದ ತಾಜ್ ಪ್ರತಿಕ್ರಿತಿಯನ್ನೇ ನೀಡಿದರೆ, ದೆಹಲಿಯ ಮನಾಸ್ ರಾಖಿಯ ಬಾಲ್ಯದ ಚಿತ್ರಗಳ ಕೊಲಾಜ್ ಚಿತ್ರಗಳ ಆಲ್ಬಂ ತಯಾರಿಸಿ ಉಡುಗೊರೆಯಾಗಿ ನೀಡಿದ್ದಾರೆ. ಮತ್ತೊಬ್ಬ ರಾಖಿಗೆ ಪ್ರಿಯಾವಾದ ನೃತ್ಯಕಲೆಯ ಸಂಕೇತವಾದ ನಟರಾಜನ ವಿಗ್ರಹವನ್ನೇ ನೀಡಿದ್ದಾರೆ. ಒಟ್ಟಾರೆ ಏನೆಲ್ಲಾ ನೀಡಿ, ಸರ್ಕಸ್ಸು ಮಾಡಿ, ಸ್ಪರ್ಧೆಯಲ್ಲಿ ಗೆದ್ದು ರಾಖಿಯ ಗಂಡನಾಗುವ ಆಸೆ ಹೊತ್ತ 16 ಮಂದಿಯಲ್ಲಿ ಈಗಾಗಲೇ ಆರು ಮಂದಿ ಗೇಟ್‌ಪಾಸ್ ಪಡೆದಿದ್ದಾರೆ, ಉಳಿದ ಈ 10 ಮಂದಿಯಲ್ಲಿ ಯಾರು ಕೊನೆಗೆ ಮದ್ವೆಯಾಗೋ ಭಾಗ್ಯ (!) ಪಡೆಯುತ್ತಾರೋ... ಕಾಯಬೇಕು.