ಸತ್ಯವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಸತ್ಯವನ್ನು ಮುಚ್ಚಿಟ್ಟರೂ ಒಂದಲ್ಲ ಒಂದು ದಿನ ಸತ್ಯ ಹೊರಬರಲೇಬೇಕಾಗುತ್ತದೆ. ಇದೀಗ ಸ್ಟಾರ್ ಪ್ಲಸ್ ಟಿವಿಯಲ್ಲಿ ಸಚ್ ಕಾ ಸಾಮ್ನಾ ಎಂಬ ಕಾರ್ಯಕ್ರಮದಲ್ಲಿ ಸಾಕಾರಗೊಳ್ಳುತ್ತಿದೆ.
ಈ ಕಾರ್ಯಕ್ರಮ ಎಷ್ಟು ಕುತೂಹಲಕಾರಿಯಾಗಿದೆಯೆಂದರೆ, ಪ್ರತಿ ವೀಕ್ಷಕನೂ ಸ್ಪರ್ಧಿ ಪ್ರಶ್ನೆಗೆ ಏನು ಉತ್ತರಿಸುತ್ತಾನೆ ಎಂದು ಸೀಟಿನ ತುದಿಯಲ್ಲಿ ಕೂರಿಸುತ್ತದೆ. ಇಲ್ಲಿ ಕೇಳುವ ಪ್ರಶ್ನೆಗಳೇ ಅಂತಹುದು. ಬದುಕಿನ ತೀರಾ ಖಾಸಗಿ ಪ್ರಶ್ನೆಗಳಿಗೆ ಸತ್ಯ ಹೇಳುವ ಧೈರ್ಯ ಯಾರಿಗಿದೆಯೋ ಅವರಿಗೆ ಖಂಡಿತಾ ಒಂದು ಕೋಟಿ ರೂಪಾಯಿಗಳ ಬಹುಮಾನ ಗ್ಯಾರೆಂಟಿ.
ಕಾರ್ಯಕ್ರಮವನ್ನು ನಿರ್ವಹಿಸುವುದು ರಾಜೀವ್ ಖಂಡೇಲ್‌ವಾಲಾ. ರಾಜೀವ್ ತನ್ನ ಸ್ಪರ್ಧಿಯನ್ನು ಕೂರಿಸಿಕೊಂಡು 21 ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸ್ಪರ್ಧಿ ಉತ್ತರಿಸಬೇಕು. ಅದು ಸ್ಪರ್ಧಿಯ ಅತೀ ಖಾಸಗಿ ವಿಷಯವಾಗಿರಬಹುದು, ಅಥವಾ ಬಹುಚರ್ಚಿತವಾದ ಅಫೇರ್‌ಗಳ ಕುರಿತಾಗಿಬಹುದು. ಈವರೆಗೆ ಹೇಳದೇ ಇದ್ದ ಸತ್ಯವನ್ನು ಹೊರಹಾಕಿಸೋದು ರಾಜೀವ್ ಖಂಡಾಲ್‌ವಾಲಾರ ಕೆಲಸ.
ಅಂದಹಾಗೆ ಇನ್ನೊಂದು ಇಂಟರೆಸ್ಟಿಂಗ್ ಆದ ವಿಚಾರ ಇಲ್ಲಿದೆ. ಇಲ್ಲಿ ಸುಳ್ಳು ಹೇಳುತ್ತಾರೋ, ಸತ್ಯ ಹೇಳತ್ತಾರೋ ಎಂದು ಗೊತ್ತಾಗೋದು ಹೇಗೆ ಅಂದರೆ, ಪಾಲಿಗ್ರಾಫ್. ಪಾಲಿಗ್ರಾಫ್ ಎಂಬ ಸುಳ್ಳುಪತ್ತೆ ಯಂತ್ರವೂ ಈ ಕಾರ್ಯಕ್ರಮದ ಜತೆಗಿರುತ್ತದೆ. ಕೆಲವು ಪ್ರಶ್ನೆಗಳನ್ನು ವೇದಿಕೆಯಲ್ಲೇ ಕೇಳಿದರೆ, ಇನ್ನೂ ಕೆಲವನ್ನು ಖಾಸಗಿಯಾಗಿ ಕೇಳಿ ಪಾಲಿಗ್ರಫ್ ಯಂತ್ರದ ಸಹಾಯದಿಂದ ಸುಳ್ಳೋ, ಸತ್ಯವೋ ಎಂದು ಕಂಡುಹಿಡಿಯಲಾಗುತ್ತದೆ!
ಸ್ಪರ್ಧಿ 21 ಪ್ರಶ್ನೆಗಳಿಗೂ ಪ್ರಾಮಾಣಿಕವಾಗಿ ಉತ್ತರಿಸಿದರೆ ಒಂದು ಕೋಟಿ ರುಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಎನ್ನುತ್ತಾರೆ ನಿರ್ವಾಹಕ ರಾಜೀವ್.
ಜು.15ರಂದು ಆರಂಭವಾಗಿರುವ ಈ ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿ ಸೀಮಾ. ಆಕೆ ಕೆಲವು ಪ್ರಶ್ನೆಗಳಿಗೆ ದಿಟ್ಟವಾಗಿ ಸತ್ಯ ಹೇಳಿದರೂ, ಖಾಸಗಿ ವಿಚಾರಗಳು ಬಂದಾಗ ಉತ್ತರಿಸಲು ತಡವರಿಸಬೇಕಾಯಿತು. ಆಕೆ ಸತ್ಯ ಹೇಳಿದ್ದ ಪ್ರಶ್ನೆಗಳಿಂದ ಆಕೆಗೆ 10 ಲಕ್ಷ ರುಪಾಯಿಗಳನ್ನು ಗೆಲ್ಲಲು ಸಾಧ್ಯವಾಯಿತು. ಖ್ಯಾತ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವು ಖಾಸಗಿ ವಿಚಾರಗಳನ್ನು ಸತ್ಯವಾಗಿಯೇ ಹೇಳಿದ್ದಾರೆ. ಇನ್ನೂ ಯಾರ‌್ಯಾರ ಬಾಯಿಯಿಂದ ಸತ್ಯ ಹೊರಬೀಳುತ್ತೋ... ಕಾಯಬೇಕು.