ಅಂತೂ ರಾಖಿಯ ಮದುವೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ರಾಖಿ ಆಗಸ್ಟ್ 2ರಂದು ಇಳೇಶ್ನನ್ನು ಮದ್ವೆಯಾಗೋದೇ ಗ್ಯಾರೆಂಟಿ ಅಂತ ಸುದ್ದಿ ಹಬ್ಬಿದೆ. ಅದಕ್ಕಾಗಿ ಭರ್ಜರಿ ತಯಾರಿಯೂ ನಡೆದಿದೆ. ಮದುವೆಗೆ ಹಾಕಿಕೊಳ್ಳುವ ಒಡವೆ, ವಸ್ತ್ರ ಎಲ್ಲವೂ ಐಶ್ವರ್ಯಾ ರೈ ತನ್ನ ಮದುವೆಗೆ ಹಾಕಿಕೊಂಡತಹವೇ ಇರಬೇಕೆಂದು ರಾಖಿ ಪಣ ತೊಟ್ಟಿದ್ದಾಳೆ. ಹಾಗಾಗಿ ರಾಖಿಯ ಮದುವೆ ಗೌನು, ಆಭರಣ ಎಲ್ಲವೂ ಐಶ್ವರ್ಯಾಳ ಮದುವೆಗೆ ಡಿಸೈನ್ ಮಾಡಿದ ಡಿಸೈನರ್ಗಳೇ ಆಗಿದ್ದಾರೆ ಅನ್ನೋದು ವಿಶೇಷ. ಆಕೆ ಹಾಕುವ ನೆಕ್ಲೆಸ್ ಬೆಲೆ 30 ಮಿಲಿಯನ್ ರುಪಾಯಿ ಬೆಲೆಬಾಳುವಂಥದ್ದು!
ಹೋಗಲಿ ಬಿಡಿ. ಈ ವಿಚಾರಗಳೆಲ್ಲಾ ಹಾಗಿರಲಿ. ರಾಖಿ ಗುಜರಾತಿ ಮೂಲದ ಕೆನಡಾದ ಬ್ಯುಸಿನೆಸ್ ಮ್ಯಾನ್ ಇಳೇಶ್ ಪರುಂಜವಾಲಾರನ್ನು ಮದುವೆಯಾಗಲು ಒಪ್ಪಿದ್ದಾದರೂ ಹೇಗೆ ಅಂತೀರಾ... ಹಾಂ, ಅದಕ್ಕೆ ಕಾರಣಗಳ ದೊಡ್ಡ ಪಟ್ಟಿಯೇ ಇದೆ.
ಕಾರಣ ನಂ.1- ಇಳೇಶ್ ಉದ್ಯಮಿ. ಭಾರತೀಯ ಮೂಲವಿದ್ದರೂ, ವಿದೇಶೀ ಸಂಪತ್ತಿದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಜತೆಗೆ ವಿದೇಶೀ ಮ್ಯಾನರಿಸಂ ರಾಖಿಯನ್ನು ಇಂಪ್ರೆಸ್ ಮಾಡಿದೆ. ಇಳೇಶ್ನ ಕಣ್ಣುಗಳಲ್ಲೇ ಪ್ರೀತಿಯ ನೋಟ ಅಳೆದು ರಾಖಿ ಸಂಪೂರ್ಣ ಬೌಲ್ಡ್ ಆಗಿದ್ದಾಳಂತೆ. ಆತನ ನೋಟಕ್ಕೆ ಸ್ವತಃ ರಾಖಿಯೇ ನಾಚಿ ನೀರಾಗಿದ್ದಾಳೆಂದರೆ ಆತನ ನೋಟ ಹೇಗಿರಬಹುದು ಊಹಿಸಿ!
ಕಾರಣ ನಂ.2- ಇಳೇಶ್ ಕುಟುಂಬ ತುಂಬಾ ಆಧುನಿಕ ಮನೋಭಾವದವರು. ಮೊನ್ನೆ ಮೊನ್ನೆ ರಾಖಿ ಜತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಇಳೇಶ್ ಅಪ್ಪ ಅಮ್ಮ ಇಬ್ಬರೂ ರಾಖಿ ತುಂಬ ಸಂಪ್ರದಾಯಸ್ಥೆ. ಆಕೆಯಂತಹ ಸೊಸೆಯೇ ನಮಗೆ ಬೇಕಿತ್ತು. ನಮಗೆ ಆಕೆ ತಕ್ಕ ಸೊಸೆ ಅಂದಿದ್ದಾರೆ.
IFM
ಕಾರಣ ನಂ.3- ಇಳೇಶ್ ಹೆತ್ತವರು ರಾಖಿ ಮದುವೆಯಾದ ಮೇಲೂ ಆಕೆ ತನ್ನ ಕೆರಿಯರ್ ಮುಂದುವರಿಸಬಹುದು. ಅರ್ಥಾತ್ ಐಟಂ ಗರ್ಲ್ ಆಗಿಯೇ ಮುಂದುವರಿಯಬಹುದು ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಕಾರಣ ನಂ.4- ಇಳೇಶ್ ಅಪ್ಪ ವಿಶೇಷವಾಗಿ ರಾಖಿಯ ಬಳಿ ಇಳೇಶ್ ಮದುವೆಯಾದ ಮೇಲೆ ಕೆರಿಯರ್ಗಾಗಿ ಮುಂಬೈನಲ್ಲೇ ಇರಬಹುದು ಎಂದು ರಾಖಿಗೆ ಅನುಮತಿ ನೀಡಿದ್ದಾರೆ. ಆದರೆ, ಆಗಾಗ ನೀನು ಕೆನಡಾಕ್ಕೆ ಬರುತ್ತಿರು. ಇಳೇಶ್ ಕೂಡಾ ನಿನ್ನ ಜತೆಗೇ ಇದ್ದರೆ ನಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ.
ಕಾರಣ ನಂ.5- ಇಳೇಶ್ ಕೂಡಾ ಮದುವೆಯಾದ ಮೇಲೆ ತಾನು ಮುಂಬೈಗೇ ತನ್ನ ಉದ್ಯಮವನ್ನು ಶಿಫ್ಟ್ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾನೆ. ಅದಕ್ಕೆ ತಯಾರಿಯನ್ನೂ ಮಾಡಿದ್ದಾನೆ.
ಕಾರಣ ನಂ. 6- ಇಳೇಶ್ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾನೆ. ನಟನೆಯ ಬಗ್ಗೆಯೂ ಮೂಗಿನ ತುದಿಯಲ್ಲಿ ಆಸೆಯಿದೆ. ಆತ ತುಂಬ ರೊಮ್ಯಾಂಟಿಕ್ ಕೂಡಾ.
ಕಾರಣ ನಂ.7- ರಾಖಿಯ ಸೋದರ, ಬಾಲಿವುಡ್ ನಟ, ನಿರ್ದೇಶಕ ರವಿ ಕಿಶನ್ ರಾಖಿಗೆ ಇಳೇಶ್ ಬೆಸ್ಟ್ ಚಾಯ್ಸ್ ಅಂತ ಹೇಳಿದ್ದು ಕೂಡಾ ಪ್ರಮುಖ ಕಾರಣ. ಇಳೇಶ್ ಎಲ್ಲ ತರದಲ್ಲೂ ರಾಖಿಗೆ ಸೂಟ್ ಆಗುತ್ತಾನೆ. ಮನ್ಮೋಹನ್ ತಿವಾರಿಯ ಆಟಿಟ್ಯೂಟ್ ಕಾರ್ಯಕ್ರಮದಲ್ಲಿ ಚೆನ್ನಾಗಿ ಕಂಡರೂ, ರಾಖಿ ಜತೆಗೆ ಕೆಟ್ಟದಾಗಿ ವರ್ತಿಸಿದ್ದಾನೆ. ಜತೆಗೆ ಆತನಿಗೆ ಬೇರೆ ಗರ್ಲ್ಫ್ರೆಂಡ್ ಇದ್ದಾಳೆ. ಹಾಗಾಗಿ ಆತನ ರಾಖಿ ಪ್ರೀತಿ ಕೇವಲ ನಾಟಕ ಅಂತ ರವಿ ಕಿಶನ್ ಸೋದರಿ ರಾಖಿಗೆ ಹೇಳಿದ್ದಾನೆ. ಎಲ್ಲರಿಗಿಂತಲೂ ಇಳೇಶ್ ತುಂಬ ಸಂಭಾವಿತನಾಗಿ ಕಾಣುವ ಕಾರಣ ಅವನನ್ನೇ ಸೂಕ್ತ ವರನನ್ನಾಗಿ ಆರಿಸು ಎಂದು ರಾಖಿಗೆ ಸೂಚಿಸಿದ್ದಾನೆ ಸೋದರ ರವಿ.
ಸರಿ. ಇಳೇಶ್ ವಿಷಯ ಹಾಗಿರಲಿ. ಹಾಗಾದರೆ, ರಾಖಿ ತುಂಬ ಇಂಪ್ರೆಸ್ ಆಗಿದ್ದ, ಕಾರ್ಯಕ್ರಮದ ಅಂತಿಮ ಘಟ್ಟಕ್ಕೆ ತಲುಪಿದ್ದ ಇನ್ನಿಬ್ಬರು ಮಾನಸ್ ಕತ್ಯಾಲ್ ಹಾಗೂ ಮನ್ಮೋಹನ್ ತಿವಾರಿಯರನ್ನು ತನ್ನ ಲಿಸ್ಟಿನಿಂದ ತೆಗೆದು ಹಾಕಲು ಕಾರಣವೇನು ಅಂತೀರಾ? ವಿಷಯ ಸಿಂಪಲ್!
IFM
ಮನ್ಮೋಹನ್ ತಿವಾರಿಯ ಹೃಷಿಕೇಶದಲ್ಲಿರುವ ಮನೆಗೆ ರಾಖಿ ಹೋಗಿದ್ದಾಗ ತಿವಾರಿಯ ಹೆತ್ತವರು ಮುಂದೆ ರಾಖಿ ಅವರ ಮನೆಯಲ್ಲಿ ಹೇಗಿರಬೇಕೆಂದು ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಮನ್ಮೋಹನ್ಗಾಗಿ ರಾಖಿ ಮುಂಬೈ ಬಿಟ್ಟು ಹೃಷಿಕೇಶಕ್ಕೆ ಬರಬೇಕು. ಮನ್ಮೋಹನ್ನ ಕುಟುಂಬದ ಎಲ್ಲರ ಜತೆಗೇ ಆಕೆ ಇರಬೇಕು. ಕೆರಿಯರ್ ಆಸೆ ಬಿಡಬೇಕು. ತುಂಬ ಸಂಪ್ರದಾಯಸ್ಥಳಾಗಿ ಸಿಂಧೂರ ಇಡಬೇಕು ಎಂದೆಲ್ಲಾ ತಮ್ಮ ಮನೆಯ ನೀತಿ ನಿಯಮದ ಪುರಾಣ ಬಿಚ್ಚಿದ್ದಾರೆ. ಇಷ್ಟೆಲ್ಲಾ ನಿಯಮಾವಳಿ ಕೇಳಿ ರಾಖಿ ಹೌಹಾರಿದ್ದಾಳೆ. ಜತೆಗೆ ಕ್ಯಾಮರಾ ಕಣ್ಣಿಗೆ ಬೀಳದಂತೆ, 'ತಿವಾರಿ ಫ್ಯಾಮಿಲಿಗೆ ಸೊಸೆ ಬೇಕಾಗಿಲ್ಲ. ಅವರಿಗೆ ಮನೆ ಕೆಲಸದಾಳು ಬೇಕಾಗಿದೆ ಅಷ್ಟೆ' ಅಂತ ಕೆನ್ನೆಗೆ ಬಾರಿಸಿದ ಹಾಗೆ ಹೇಳಿ ವಾಪಸ್ಸು ಬಂದಿದ್ದಾಳೆ.
ಅಷ್ಟೇ ಅಲ್ಲ, ತಿವಾರಿಗೆ ನಾಟುವಂತೆ, ''ನಾನು ನನ್ನ ಸ್ವಂತ ಪರಿಶ್ರಮದಿಂದ ಹಗಲೂ ರಾತ್ರಿ ದುಡಿದು ಇಷ್ಟು ಮೇಲಕ್ಕೆ ಬಂದಿದ್ದೇನೆ. ಈಗ ನನ್ನ ಬಳಿ ಹಣ ಇದೆ, ಪ್ರಸಿದ್ಧಿ ಇದೆ. ಪ್ರತಿಭೆ ಇದೆ, ಸೌಂದರ್ಯ ಇದೆ, ಎಲ್ಲವೂ ಇದೆ. ಆದರೆ ಇದನ್ನು ಸಂಭಾಳಿಸಬಲ್ಲ ಅರ್ಹತೆ ನನಗೆ ನಿನ್ನಲ್ಲಿ ಕಾಣುತ್ತಿಲ್ಲ'' ಅಂತ ಹೇಳಿ ಆತನನ್ನು ಕಾರ್ಯಕ್ರಮದಿಂದ ಹೊರಕ್ಕೆ ಕಳುಹಿಸುವ ಕುರುಹುಗಳನ್ನು ತೋರಿಸಿದ್ದಾಳೆ. ದೆಹಲಿಯ ಮಾನಸ್ ಕತ್ಯಾಲ್ ಫ್ಯಾಮಿಲಿ ಆಧುನಿಕವಾಗಿ ಕಂಡರೂ, ಇಳೇಶ್ ಕುಟುಂಬದಷ್ಟು ಪ್ರೀತಿ, ವಿಸ್ವಾಸ ರಾಖಿಗೆ ಅಲ್ಲಿ ಕಂಡಿಲ್ಲವಂತೆ.
ಅಂದಹಾಗೆ, ಇಳೇಶ್ ಮಾತ್ರ ರಾಖಿಯನ್ನು ಮದ್ವೆಯಾಗೋದಕ್ಕೆ ತುಂಬ ಥ್ರಿಲ್ಲಾಗಿದ್ದಾನಂತೆ. ರಾಖಿಯನ್ನು ನಾನು ಸಿನಿಮಾದಲ್ಲಿ, ಮ್ಯೂಸಿಕ್ ವಿಡಿಯೋಗಳಲ್ಲೇ ಈ ಮೊದಲೇ ನೋಡಿದ್ದೆ. ಆದರೆ, ಆಕೆಯನ್ನು ಮದುವೆಯಾಗುವ ಸಾಲಿನಲ್ಲಿ ನಾನು ಸ್ವತಃ ನಿಲ್ಲುತ್ತೇನೆಂದು ಕನಸು ಮನಸಿನಲ್ಲಿ ಅಂದುಕೊಂಡಿರಲೇ ಇಲ್ಲ. ಈ ಜೀವನ ಎಂಬುದು ಒಂದು ತಮಾಷೆ ಎಂದು ತನ್ನ ಅನಿಸಿಕೆ ವ್ಯಕ್ತಪಡಿಸಿದ್ದಾನೆ.
ಅತ್ತ ರಾಖಿ ಇಳೇಶ್ ಗುಣಾವಗುಣಗಳ ಬಗ್ಗೆ ಆತನ ಗೆಳಯರಲ್ಲಿ ಕೇಳಿ ತಿಳಿದುಕೊಂಡಿದ್ದಾಳೆ. ಇಳೇಶ್ಗೆ ಗರ್ಲ್ಫ್ರೆಂಡ್ಗಳಿದ್ದಾರಾ ಎಂದು ಕೇಳಲೂ ಮರೆಯಲಿಲ್ಲ. ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಕಂಡು ರಾಖಿಯೂ ಥ್ರಿಲ್ಲಾಗಿದ್ದಾಳೆ. ಕೊನೆಗೆ ಇಳೇಶ್ ಬಳಿ, ಇಳೇಶ್, ನೀನು ನನಗೆ ಇಷ್ಟವಾಗಿದ್ದಿ. ನನಗೆ ನಿನ್ನ ಬಗ್ಗೆ ಮೊದಲಿನಿಂದಲೂ ಪಾಸಿಟಿವ್ ಅಭಿಪ್ರಾಯಗಳೇ ಕೇಳಿ ಬಂದಿವೆ. ನನಗೆ ನಿನ್ನಲ್ಲಿ ನನ್ನ ಗಂಡನಾಗಲು ಬೇಕಾದ ಎಲ್ಲ ಅರ್ಹತೆಗಳೂ ಕಾಣುತ್ತಿವೆ. ಆದರೆ ನೀನಿನ್ನೂ ಕೆಲ ಕಾಲ ಕಾಯಬೇಕು ಎಂದಿದ್ದಾಳೆ.