ಸ್ವಯಂವರದಲ್ಲಿ ಹಾರ, ಉಂಗುರ ಬದಲಾಯಿಸಿದ್ದಾಯಿತು, ಈಗ ರಾಖಿ ಹಾಗೂ ಇಲೇಶ್ ಏನು ಮಾಡುತ್ತಿದ್ದಾರಪ್ಪಾ ಅಂತ ಶಿವಪೂಜೆಯಲ್ಲಿ ಕರಡಿ ಬಿಡಲು ಲೆಕ್ಕಾಚಾರ ಹಾಕುತ್ತಿದ್ದವರಿಗೆ ಉತ್ತರ ಇಲ್ಲಿದೆ. ನಿಶ್ಚಿತಾರ್ಥದ ಬಳಿಕ ರಾಖಿ ಹಾಗೂ ಇಲೇಶ್ ಇಬ್ಬರೂ ಬಿಚ್ಚು ಹೃದಯದ ಮಾತಾಡಿದ್ದಾರೆ. ರಾಖಿಯಿಂದ ಹಾರ ಹಾಕಿಸಿಕೊಂಡದ್ದೇ ತಡ, ರಾಖಿಯ ಹೃದಯ ಕದಿಯಲು ಇಲೇಶ್ ಮುಂಬೈನಲ್ಲಿ ಗ್ರ್ಯಾಂಡ್ ಪಾರ್ಟಿ ಮಾಡಿ ರಾಖಿಯನ್ನು ಮೆಚ್ಚಿಸಲು ಸರ್ವ ಪ್ರಯತ್ನವನ್ನೂ ಮಾಡಿದ್ದಾಗಿದೆ. ಈಗ ಕೆನಡಾಕ್ಕೂ ಆಕೆಯನ್ನು ಕರೆದೊಯ್ಯಲು ವೀಸಾಗೆ ಪ್ರಯತ್ನ ಮಾಡುತ್ತಿದ್ದಾನಂತೆ ಇಲೇಶ್. 30ರ ಹರೆಯದ ಇಲೇಶ್ ತಂಗಿಯ ಮದುವೆ ಆಗಸ್ಟ್ 16ರಂದು ಕೆನಡಾದ ಟೊರಂಟೋದಲ್ಲಿ ನಡೆಯಲಿದೆ. ಹೀಗಾಗಿ ರಾಖಿಯ ಜತೆಗೆ ಟೊರಂಟೋಗೆ ಹಾರುವುದು ಇಲೇಶ್ ಅಭಿಲಾಷೆ.
ಇದೆಲ್ಲಾ ಹಾಗಿರಲಿ, ರಾಖಿ ತನ್ನ ಹಳೇ ಬಾಯ್‌ಫ್ರೆಂಡ್ ಅಬಿಷೇಕ್ ಅವಸ್ತಿ ತನ್ನ ಮದುವೆ ಬಗ್ಗೆ ತೋರಿದ ಆಸಕ್ತಿ ತನಗೆ ಆಶ್ಚರ್ಯ ಹುಟ್ಟಿಸಿದೆ. ಇದು ನನಗೆ ಮೊದಲೇ ಗೊತ್ತಿದ್ದಿದ್ದರೆ, ನಾನು ಆತನನ್ನು ಸ್ವಯಂವರಕ್ಕೆ ಆಹ್ವಾನಿಸುತ್ತಿದ್ದೆ. ಆತ ಅಂದು ತಪ್ಪು ಮಾಡಿರಬಹುದು. ಆದರೆ ಈಗ ಇಂತಹ ಸಂದರ್ಭ ಆತ ನನ್ನ ಬಗ್ಗೆ ಮಾತಾಡಿದ್ದಾನೆ. ಆತನನ್ನು ನಾನು ಕ್ಷಮಿಸಿದ್ದೇನೆ ಎಂದಿದ್ದಾಳೆ ರಾಖಿ. ಆದರೆ ಕ್ಷಮಯಾಧರಿತ್ರಿಯಂತೆ ಮಾತನಾಡುವ ರಾಖಿ ತನ್ನ ಹೆತ್ತ ತಾಯಿಗೆ ಮಾತ್ರ ಕ್ಷಮೆ ನೀಡಲು ಎಂದಿಗೂ ತಯಾರಿಲ್ಲ.
ಖಾಸಗಿ ಚಾನಲ್‌ಗಳ ಮುಂದೆ ರಾಖಿಯ ಅಮ್ಮ, ರಾಖಿ, ನಿನ್ನನ್ನು ನಾನು ತುಂಬ ಪ್ರೀತಿಸುತ್ತೇನೆ ಎಂದು ಆಕೆಯ ಸ್ವಯಂವರದ ದಿನ ಗಳಗಳನೆ ಅತ್ತಿದ್ದನ್ನು ಮಾತ್ರ ರಾಖಿ, ಇದೆಲ್ಲ ಅಮ್ಮನ ನಾಟಕ. ಆಕೆ ನನ್ನನ್ನು ಪ್ರೀತಿಸೋದಿಲ್ಲ. ಆಕೆ ನೀಡಿದ ಕಷ್ಟವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆಕೆಗೆ ಕ್ಷಮೆಯೇ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಹೀಗಾಗಿ ತನ್ನ ಕುಟುಂಬದೊಂದಿಗೆ ಸಂಬಂಧವನ್ನೇ ಕಡಿದುಕೊಂಡಿರುವ ರಾಖಿ ಅಪ್ಪ, ಅಮ್ಮ, ಸಹೋದರನಿಲ್ಲದೆ, ಸ್ವಯಂವರದಲ್ಲಿ ಉಂಗುರ ಬದಲಾಯಿಸಿಕೊಂಡ ನಂತರ ಮಾಧ್ಯಮದ ಜತೆಗೆ ರಾಖಿ ಹಾಗೂ ಇಲೇಶ್ ಇತಿಹಾಸ ಸೃಷ್ಟಿಸಿದ ಹವಾದಲ್ಲಿ ಖುಷಿಯನ್ನು ಹಂಚಿಕೊಂಡಿದ್ದು ಹೀಗೆ.
IFM
ಸ್ವಯಂವರದಲ್ಲಿ ಬರೀ ಎಂಗೇಜ್‌ಮೆಂಟ್ ಆಯ್ತು. ಮದುವೆ ಯಾಕೆ ತಡ?
ಇಲೇಶ್- ನಾನು ರಾಖಿಯನ್ನು ಮೊದಲ ಬಾರಿ ನೋಡಿದಾಗ ಆಕೆ ಆಕರ್ಷಕವಾಗಿ ಕಂಡಳು. ಆದರೆ ಮದುವೆಯಾಗಲು ಸ್ವಲ್ಪ ಕಾಲಾವಕಾಶ ಬೇಕು. ಬರೀ ಕ್ಯಾಮರಾದ ಎದುರು ಎಲ್ಲವೂ ಸಾಧ್ಯವಿಲ್ಲ. ನಾನು ರಾಖಿಯನ್ನು ಕ್ಯಾಮರಾ ಹಿಂದೆಯೂ ಅರ್ಥಮಾಡಿಕೊಳ್ಳಬೇಕು. ಆಕೆಯೂ ನನ್ನ ಟೊರಂಟೋ ಲೈಫ್‌ಸ್ಟೈಲನ್ನು, ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾನು ಇನ್ನು 2-3 ವರ್ಷ ಖಂಡಿತವಾಗಿಯೂ ಮುಂಬೈನಲ್ಲಿ ಇರುತ್ತೇನೆ.
ರಾಖಿ- ನನಗೂ ಅಷ್ಟೆ, ಇಲೇಶ್ ಎಂಥವನೆಂದು ಆತನನ್ನು ಹತ್ತಿರದಿಂದ ನೋಡಬೇಕು. ನಾವಿಬ್ಬರೂ ಕ್ಯಾಮರಾ ಇಲ್ಲದೆ, ಮೇಕಪ್ ಇಲ್ಲದೆ, ಯಾವುದೇ ಜಂಜಡಗಳಿಲ್ಲದೆ ಹೆಚ್ಚು ಕಾಲ ಜತೆಯಲ್ಲಿ ಕಳೆಯಬೇಕು. ನಮಗಿಬ್ಬರಿಗೆ ಏಕಾಂತ ದಕ್ಕಬೇಕು. ಆಗ ನನಗೆ ಆತನನ್ನು ಅರ್ಥೈಸಲು ಸಾಧ್ಯವಿದೆ. ಆದರೆ, ಸತ್ಯ ಹೇಳಬೇಕೆಂದರೆ, ನಾನು ಸ್ವಯಂವರದಲ್ಲಿ ಇಲೇಶ್‌ನನ್ನು ಮದುವೆಯಾಗಲು ಸಿದ್ಧಳಿದ್ದೆ. ಆತ ನನ್ನ ಪಾಲಿಗೆ ಕೋಹಿನೂರ್ ವಜ್ರ. ಆದರೆ ಇಲೇಶ್ ನನ್ನಲ್ಲಿ ಕಾಲಾವಕಾಶ ಕೇಳಿದರು. ನನ್ನ ಸಂಗಾತಿಯಾಗುವವನಿಗೆ ಕಾಲಾವಕಾಶ ಬೇಕೆಂದರೆ ನಾನು ಕೊಡದಿದ್ದರೆ ಅದು ತಪ್ಪು. ಅದಕ್ಕಾಗಿ ಕೇವಲ ಎಂಗೇಜ್‌ಮೆಂಟ್ ಮಾಡಿಕೊಳ್ಳಲು ನಿರ್ಧರಿಸಿದೆವು.
ಇದು ನಿಜಕ್ಕೂ ನಿಜ ಜೀವನದ ಸ್ವಯಂವರವೇ? ನಿಜಕ್ಕೂ ಮದುವೆ ಮಾಡಿಕೊಳ್ಳುವ ಆಸಕ್ತಿಯಿದ್ದರೆ, ರಿಯಾಲಿಟಿ ಶೋ ಅಗತ್ಯ ಏಕೆ ಬೇಕಿತ್ತು?
ರಾಖಿ- ಹೌದು. ನಾನು ನಿಶ್ಚಿತಾರ್ಥ ಮಾಡಿಕೊಂಡರೂ ನಿಮಗೆ ನಂಬಿಕೆ ಬರದಿದ್ದರೆ ನಾನೇ ಮಾಡೋದಕ್ಕಾಗುತ್ತೆ? ಇರಲಿ ಬಿಡಿ. ಆದರೆ, ಒಬ್ಬ ಮಹಿಳೆ ರಾಷ್ಟ್ರೀಯ ಚಾನಲ್ ಒಂದರಲ್ಲಿ ರಿಯಾಲಿಟಿ ಶೋ ಮೂಲಕ ಮದುವೆ ಮಾಡಿಕೊಳ್ಳುವುದೆಂದರೆ ಸಾಮಾನ್ಯದ ಸಂಗತಿಯಲ್ಲ. ಜತೆಗೆ ನನಗೆ ಕಾರ್ಯಕ್ರಮದಲ್ಲಿ ಇಲೇಶ್ ನಿಜಕ್ಕೂ ಇಷ್ಟವಾದರು. ಪ್ರಾಮಾಣಿಕವಾಗಿ ಆತನನ್ನು ನಾನು ಇಷ್ಟಪಟ್ಟೆ. ಇದು ಸತ್ಯ. ಮತ್ತೆ, ಸ್ವಯಂವರ ಏಕೆ ಮಾಡಿಕೊಂಡೆನೆಂದರೆ, ಅದು ಮಾಧ್ಯಮಗಳಿಗಾಗಿ. ಹಲವು ಸೆಲೆಬ್ರಿಟಿಗಳು, ಸಿನಿಮಾ ತಾರೆಯರು ತಮ್ಮ ಖ್ಯಾತಿಯ ಉತ್ತುಂಗಕ್ಕೇರಲು ಮಾಧ್ಯಮಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ, ತಮ್ಮ ಮದುವೆಯ ಸಂದರ್ಭ ಬಂದಾಗ ಮಾಧ್ಯಮಗಳನ್ನು ತುಚ್ಛವಾಗಿ ಕಾಣುತ್ತಾರೆ. ಅವರಿಗೆ ಪ್ರವೇಶವೇ ನೀಡೋದಿಲ್ಲ. ಇದು ಅನ್ಯಾಯ. ನಾನು ಅದಕ್ಕಾಗಿ ಮಾಧ್ಯಮಗಳಿಗಾಗಿಯೇ ಮಾಧ್ಯಮಗಳ ಮೂಲಕವೇ ಸ್ವಯಂವರ ಮಾಡಿಕೊಳ್ಳಲು ನಿರ್ಧರಿಸಿದೆ. ನಾನು ಮಾಧ್ಯಮಗಳ ಮಗಳು. ಮಗಳು ತನ್ನ ಮನೆಯಲ್ಲೇ ಮದುವೆಯಾಗಿದ್ದಾಳೆ. ಅಷ್ಟೆ.
ಇಲೇಶ್, ನಿಮಗೆ ಮುಂಬೈನಲ್ಲೂ ಉದ್ಯಮ ಕ್ಷೇತ್ರವಿದೆ. ಆದರೆ ಈ ಸ್ವಯಂವರದಲ್ಲಿ ಪಾಲ್ಗೊಂಡದ್ದು ಯಾಕೆ?
ಇಲೇಶ್- ಹೌದು. ಮುಂಬೈನಲ್ಲಿ ನನಗೊಂದು ಫಿಲ್ಮ್ ಅಕಾಡೆಮಿ ಇರೋದು ಸತ್ಯ. ಪ್ರಾಮಾಣಿಕವಾಗಿ ಹೇಳೋದಾದ್ರೆ ನಾನು ಈ ಸ್ವಯಂವರದಲ್ಲಿ ಪಾಲ್ಗೊಂಡಿದ್ದು ರಾಖಿಯನ್ನು ಹತ್ತಿರದಿಂದ ನೋಡಲು ಅಷ್ಟೇ. ಆಕೆಯನ್ನು ನಟಿಯಾಗಿ, ಐಟಂ ಗರ್ಲ್ ಆಗಿ ನೋಡಿದ್ದೇನೆ. ಹಾಗಾಗಿ ಹತ್ತಿರದಿಂದ ಆಕೆಯ ಪ್ರಪಂಚವನ್ನು ನೋಡಬೇಕೆನಿಸಿತು. ಹಾಗಾಗಿ ಪಾಲ್ಗೊಂಡೆ. ಆದರೆ ಪಾಲ್ಗೊಂಡ ನಂತರ ಆಕೆಯ ಬಗ್ಗೆ ಹೆಮ್ಮೆಯಿನಿಸಿತು. ಆಕೆಯನ್ನು ನನ್ನ ಅರ್ಧಾಂಗಿಯಾಗಿ ಪಡೆಯುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ.
ಆಕೆ ಒಬ್ಬ ಸ್ಟಾರ್ ಆಗಿರೋದಕ್ಕೆ ನಿಮಗೆ ಅಸೂಯೆಯಾಗೋದಿಲ್ವೇ?
ಇಲೇಶ್- ಆಕೆ ಸ್ಟಾರ್ ಆಗಿರೋದಕ್ಕೆ ನಾನ್ಯಾಕೆ ಅಸೂಯೆಪಡಲಿ. ಗೌರವಾನ್ವಿತ, ತನ್ನ ಕಾಲ ಮೇಲೆ ನಿಂತಿರುವ ಸ್ವತಂತ್ರ ಮಹಿಳೆಯಾಗಿರುವ ಆಕೆಯ ಮೇಲೆ ನನಗೆ ಅತೀವ ಗೌರವವಿದೆ. ಆಕೆಯ ಸ್ಟಾರ್ ಪಟ್ಟದ ಮೇಲೆ ಹೆಮ್ಮೆಯಿದೆ. ಅಸೂಯೆಯಿಲ್ಲ.
IFM
ಇಲೇಶ್‌ಗೆ ಟೊರಂಟೋದಲ್ಲಿ ಏಳು ಮಂದಿ ಗರ್ಲ್‌ಫ್ರೆಂಡ್‌ಗಳಿದ್ದರು. ಈಗ ಅವರು ಮತ್ತೆ ಟೊರಂಟೋಗೆ ಮರಳಿದ ಮೇಲೆ ಮತ್ತೆ ಆ ಏಳು ಮಂದಿಯಲ್ಲಿ ಒಬ್ಬರಾದರೂ ಆತನ ಹಾದಿ ಕಾಯುತ್ತಿರುವರೆಂದು ನಿಮಗೆ ಅನ್ನಿಸಿಲ್ಲವೇ?
ರಾಖಿ- ಇಲೇಶ್ ಸತ್ಯವನ್ನೆಲ್ಲ ನನ್ನ ಬಳಿ ಹೇಳಿಕೊಂಡಿದ್ದಾನೆ. ಆತನಿಗೆ ಏಳು ಮಂದಿ ಹುಡುಗಿಯರಿದ್ದ ಸತ್ಯ ನನಗೆ ಆತ ಸ್ವಯಂವರದಲ್ಲಿ ಹೇಳಿದ್ದ. ಆತನ ಈ ಸತ್ಯಕ್ಕೇ ನಾನು ಮಾರುಹೋಗಿದ್ದು. ಇದೇ ನನ್ನನ್ನು ಆತನೆಡೆಗೆ ಸೆಳೆಯುವಂತೆ ಮಾಡಿದ್ದು. ಆದರೆ ಆತ ಟೊರಂಟೋಗೆ ಮರಳುವಾಗ ಯಾರಾದರೂ ಆತನ ಹಾದಿ ಕಾಯುತ್ತಿದ್ದರೆ, ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗೋದು ನಿಜ. ಆದರೆ, ಆ ಏಳು ಮಂದಿಯನ್ನು ಹ್ಯಾಂಡಲ್ ಮಾಡೋದು ಇಲೇಶ್ ಕೈಯಲ್ಲಿದೆ. ಆದರೆ ನನಗೆ ಇಲೇಶ್ ಮೇಲೆ ನಂಬಿಕೆಯಿದೆ.
ಇಲೇಶ್- ಈಗ ನನಗೆ ರಾಖಿ ಸಿಕ್ಕಿದ್ದಾಳೆ. ಆಕೆಯನ್ನು ಬಿಟ್ಟು ಬೇರೆ ಯಾರನ್ನೂ ನಾನು ಯೋಚಿಸಲ್ಲ.
ನಿಮಗಿಬ್ಬರಿಗೂ ನೀವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಶುರುಮಾಡಿದ್ದೀರಿ ಅನಿಸಿದ್ದು ಯಾವ ಕ್ಷಣದಲ್ಲಿ? ಹಾಗೂ ಹೇಗೆ?
ರಾಖಿ- ಸತ್ಯವಾಗಿ ಹೇಳೋದಾದ್ರೆ, ನಾನು ಸ್ವಯಂವರದಲ್ಲಿ ಇಲೇಶ್‌ನನ್ನು ಲವ್ ಮಾಡಲಿಲ್ಲ. ಆದರೆ, ಈಗ ಎಂಗೇಜ್‌ಮೆಂಟ್ ನಂತರ ಶುರುವಾಗಿದೆ. ನನಗೆ ಇಲೇಶ್ ಮಾತು, ನಡೆ, ನುಡಿ, ನನ್ನ ಬಗ್ಗೆ ಇರೋ ಕಾಳಜಿ ಎಲ್ಲವೂ ಇಷ್ಟ. ಕಾರ್ಯಕ್ರಮದುದ್ದಕ್ಕೂ ನನ್ನ ಬಗ್ಗೆ ಇಲೇಶ್ ತೋರಿದ ಕಾಳಜಿ ಅದ್ಭುತ. ಇದಕ್ಕಾಗಿಯೇ ನನಗೆ ಇಲೇಶ್ ಇಷ್ಟವಾದ. ಹಾಗಾಗಿ ಆತನೊಂದಿಗೇ ಇರಲು ಬಯಸುತ್ತೇನೆ.
ಇಲೇಶ್- ನನಗೆ ಮೊದಲು ರಾಖಿಯನ್ನು ನಾನು ಪ್ರೀತಿಸುತ್ತೇನಾ ಎಂದೇ ತಿಳಿಯಲಿಲ್ಲ. ಆದರೆ, ರಾಖಿ ತನ್ನ ಇತರ ಅಭ್ಯರ್ಥಿ-ವರರ ಜತೆಗೆ ಅವರ ಕುಟುಂಬವನ್ನು ಭೇಟಿ ಮಾಡಲು ದೇಶದೆಲ್ಲೆಡೆ ಸಂಚರಿಸಲು ಶುರು ಮಾಡಿದಾಗ ನನಗೆ ರಾಖಿ ಮೇಲಿದ್ದ ಪ್ರೀತಿ ಅರಿವಾಗಲು ಶುರುವಾಯಿತು. ಅದೇ ಸಂದರ್ಭ ಮೈಕಲ್ ಜಾಕ್ಸನ್ ತೀರಿಕೊಂಡ ಸುದ್ದಿಯೂ ಬಂತು. ಆ ಸುದ್ದಿ ಕೇಳಿ ನನಗೆ ಆಘಾತವಾಯ್ತು. ಆ ಸಂದರ್ಭ ನನಗೆ ರಾಖಿಯನ್ನು ಮಿಸ್ ಮಾಡಿಕೊಂಡ ಅನುಭವವಾಯ್ತು. ಛೇ, ಈಗಲಾದರೂ ನನ್ನ ಜತೆಗೆ ರಾಖಿ ಇದ್ದಿದ್ದರೆ ಎಂದು ಅನಿಸತೊಡಗಿತು. ಆಗಲೇ ನನಗೆ ಗೊತ್ತಾಗಿದ್ದು, ನಾನು ರಾಖಿಯನ್ನು ನಿಜವಾಗಿಯೂ ಪ್ರೀತಿಸಲು ಶುರುಮಾಡಿದ್ದೇನೆ ಎಂದು.
ಮದುವೆಯ ನಂತರವೂ ಮುಂಬೈನಲ್ಲೇ ಇರುತ್ತೀರಾ?
ರಾಖಿ- ನಾನು ಮುಂಬೈ ಕೂಸು. ಈ ಮುಂಬೈಯನ್ನು ಬಿಟ್ಟು ಬೇರೆಲ್ಲೂ ಹೋಗಲು ನನಗೆ ಇಷ್ಟವಿಲ್ಲ. ನನಗೆ ಮದುವೆಯ ನಂತರವೂ ಕೆಲಸ ಮಾಡೋದು ಇಷ್ಟ. ಅದನ್ನು ಬಿಡಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಮುಂಬೈನಲ್ಲೇ ಇರಬೇಕು. ಇವೆಲ್ಲವನ್ನೂ ನಾನು ಇಲೇಶ್ ಬಳಿ ಹೇಳಿಕೊಂಡಿದ್ದೇನೆ. ಆತ ಒಕೆ ಅಂದಿದ್ದಾನೆ.
ಇಲೇಶ್- ಹೌದು. ಇಂದಿನಿಂದ ನಾವಿರೋದು ಮುಂಬೈನಲ್ಲಿ. ನಮ್ಮ ರಜೆಯ ದಿನಗಳು ಟೊರಂಟೋಗೆ ಮೀಸಲು. ರಜೆಯ್ನನು ರಾಖಿಯೊಂದಿಗೆ ಟೊರಂಟೋದಲ್ಲಿ ಕಳೆಯಬೇಕೆಂಬ ಆಸೆ ನನಗೆ.
ರಾಖಿ ಸಾವಂತ್ ಮದುವೆಯ ನಂತರ ರಾಖಿ ಸಾವಂತ್ ಆಗೇ ಇರುತ್ತಾಳೋ? ಅಥವಾ ರಾಖಿ ಸಾವಂತ್ ಪರುಜನ್‌ವಾಲಾ ಆಗುತ್ತಾಳೋ?
ಇಲೇಶ್- ಹೆಸರಿನ ಬಗ್ಗೆ ಅಷ್ಟಾಗಿ ತಲೆಬಿಸಿಯಿಲ್ಲ. ಬಹುಷಃ ಮಿಸಸ್ ಪರುಜನ್‌ವಾಲಾ ಆಗುತ್ತಾಳೇನೋ.
ರಾಖಿ- ..... ( ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ) ನಾನು ರಾಖಿ ಪರುಜನ್‌ವಾಲಾ ಎಂದು ಕರೆಸಿಕೊಳ್ಳಲು ಬಯಸುತ್ತೇನೆ.
ಇಲೇಶ್‌ಗ ಹಿಂದಿ ಕಲಿಸೋದು ಯಾರ ಜವಾಬ್ದಾರಿ?
ಇಲೇಶ್- ರವಿ ಕಿಶನ್ ಕೂಡಾ ನನಗೆ ಹಿಂದಿ ಕಲಿಯೋದಕ್ಕೆ ಹೆಲ್ಪ್ ಮಾಡ್ತೀನಿ ಅಂದಿದ್ದಾರೆ. ಅದು ಬಿಟ್ಟರೆ ರಾಖಿಯೇ ನನಗೆ ಹಿಂದಿ ಕಲಿಸ್ತಾಳೆ. ಆಕೆಗೆ ಇಂಗ್ಲೀಷ್ ಅಷ್ಟಾಗಿ ಬರೋದಿಲ್ಲ. ಹಾಗಾಗಿ ನಾನು ಆಕೆಗೆ ಉತ್ತಮ ಇಂಗ್ಲೀಷ್ ಕಲಿಸ್ತೇನೆ.
ರಾಖಿ- ಹೌದು. ಇಲೇಶ್ ಅರೆಬರೆ ತಪ್ಪು ತಪ್ಪು ಹಿಂದಿ ಮಾತಾಡ್ತಾನೆ. ಆದರೆ, ಇಲೇಶ್ ಮೊದಲು ಹಿಂದಿ ಕಲಿತುಕೊಳ್ಳಬೇಕು. ಇಲ್ಲವಾದರೆ ಕಷ್ಟ. ಆತನ ಇಂಗ್ಲೀಷ್ ತುಂಬಾ ಫಾಸ್ಟ್. ಕೆಲವೊಮ್ಮೆ, ಆತ ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನನಗೆ ಒಂದು ಗಂಟೆ ಹಿಡಿಯುತ್ತೆ. ಇದು ತುಂಬಾ ಕಷ್ಟವಾಗುತ್ತೆ.
ಇಲೇಶ್, ನೀವು ರಾಖಿ ಕುಟುಂಬವನ್ನು ಭೇಟಿ ಮಾಡುತ್ತೀರಾ?
ಇಲೇಶ್- .... ( ಯಾವುದೇ ಉತ್ತರವಿಲ್ಲ)
ರಾಖಿ ತನ್ನ ಹೆತ್ತವರನ್ನು ಗೌರವಿಸುವುದಿಲ್ಲ ಎನ್ನುತ್ತಾಳೆ. ಹಾಗಾದರೆ ಆಕೆಯ ಈ ಭಾವನೆಗೆ ನಿಮ್ಮ ಬೆಂಬಲವೂ ಇದೆಯಾ?
ಇಲೇಶ್- ..... (ಯಾವುದೇ ಉತ್ತರವಿಲ್ಲ)
ಇಲೇಶ್ ತನಗೆ ಏಳು ಗರ್ಲ್‌ಫ್ರೆಂಡ್‌ಗಳಿದ್ದರು ಎಂದಿದ್ದಾರೆ. ಆದರೆ ನೀವು ಮಾತ್ರ ಒಬ್ಬನೇ ಬಾಯ್‌ಫ್ರೆಂಡ್ ಇದ್ದುದಾಗಿ ಇಲೇಶ್ ಬಳಿ ಹೇಳಿಕೊಂಡಿದ್ದೀರಿ? ಹಾಗಾದರೆ, ನೀವು 2004ರಲ್ಲಿ ಅಶ್ರಫ್ ಖಾನ್ ಜತೆಗೆ ಮದುವೆಯಾಗಿದ್ದೆಯೆಂಬುದನ್ನು ಇಲೇಶ್ ಬಳಿ ಹೇಳಿಲ್ಲವೇ?
ರಾಖಿ- ..... (ಯಾವುದೇ ಉತ್ತರವಿಲ್ಲ)
ಇಲೇಶ್- ಈ ಪ್ರಶ್ನೆ ಈಗ ಸೂಕ್ತವೆಂದು ನನಗನ್ನಿಸುತ್ತಿಲ್ಲ.
ರಾಖಿ ಯಾವತ್ತಾದರೂ ಸ್ವಯಂವರದ ವಿಜೇತ ನೀವೆಂದು ಯಾವತ್ತಾದರೂ ಮೊದಲೇ ಹೇಳಿದ್ದಳೇ?
ಇಲೇಶ್- ಖಂಡಿತ ಇಲ್ಲ. ಅಂತಿಮ ಕ್ಷಣದಲ್ಲಿ ಆಕೆ ಮಾಲೆ ಕೈಯಲ್ಲಿ ಹಿಡಿದು ಮೂವರ ಎದುರು ಅತ್ತಿಂದಿತ್ತ, ಇತ್ತಿಂದತ್ತ ನಡೆಯುವಾಗಲೂ ಯಾರಿಗೆ ಮಾಲೆ ಹಾಕುತ್ತಾಳೆ ಎಂದು ನನ್ನ ಎದೆ ಢವಗುಟ್ಟುತ್ತಿತ್ತು.
ರಾಖಿ, ನೀವು ನಿಮ್ಮ ಇನ್ನುಳಿದ ಅಭ್ಯರ್ಥಿ ವರರಾದ 15 ಮಂದಿಯ ಜತೆಗೆ ಎಂತಹ ಸಂಬಂಧ ಹೊಂದುತ್ತೀರಿ?
ರಾಖಿ- ಅವರೊಂದಿಗೆ ಸ್ಹೇಹ ಮುಂದುವರಿಸುತ್ತೇನೆ. ಯಾವತ್ತಾದರೂ ಭೇಟಿಯಾಗಿ ಸೌಹಾರ್ದಯುತ ಮಾತಾಡುತ್ತೇನೆ.
ಆದರೆ, ರಾಖಿ ಇಷ್ಟೆಲ್ಲಾ ಇಲೇಶ್ ಜತೆ ಓಡಾಡಿಕೊಂಡಿರುವಾಗ ಅತ್ತ ಒಂದು ಕಾಲದಲ್ಲಿ ರಾಖಿಗೆ ಲೊಚಲೊಚನೆ ಕಿಸ್ಸು ಕೊಟ್ಟು ಸುದ್ದಿ ಮಾಡಿದ್ದ ಮಿಕಾ ಸಿಂಗ್ ಮಾತ್ರ ರಾಖಿ ಪ್ರಖ್ಯಾತಿ ಪಡೆದುದು ಆಕೆಯ ಪ್ರತಿಭೆಯಿಂದ ಖಂಡಿತಾ ಅಲ್ಲ, ಅದೆಲ್ಲವೂ ಕೇವಲ ನನ್ನ ಒಂದು ಕಿಸ್ಸಿನಿಂದ ಅಂತ ತಿರುಗಾಡುತ್ತಿದ್ದಾನಂತೆ.