ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೊಮ್ಮೆ ರಿಯಾಲಿಟಿ ಶೋ ಮೂಲಕ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲೂ ಜನಮಾನಸದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ಬಿಗ್ ಬಿ ಅಮಿತಾಬ್ ಬಚ್ಚನ್ ಈಗ ಖ್ಯಾತ ಟಿವಿ ಶೋ ಬಿಗ್ ಬಾಸ್ ನಡೆಸಿಕೊಡುವ ಮೂಲಕ ಮತ್ತೆ ಮನೆಮನೆಗೆ ಬರಲಿದ್ದಾರೆ.
ಕಲರ್ಸ್ ಟಿವಿ ವಾಹಿನಿ ಆರಂಭಿಸಿದ ಬಿಗ್ ಬಾಸ್ ಕಾರ್ಯಕ್ರಮವನ್ನು ಈವರೆಗೆ ಶಿಲ್ಪಾಶೆಟ್ಟಿ ನಡೆಸುತ್ತಿದ್ದರು. ಬಿಗ್ ಬಾಸ್‌ನ ಭಾಗ 1 ಹಾಗೂ ಭಾಗ 2 ಕಾರ್ಯಕ್ರಮಗಳು ಮುಗಿದಿವೆ. ಈಗ ಭಾಗ 3ರ ಸರದಿ. ಕಲರ್ಸ್ ಚಾನಲ್ ಈವರೆಗೆ ಹಿಡಿದಿದ್ದ ಶಿಲ್ಪಾ ಶೆಟ್ಟಿ ಕೈಯನ್ನು ಬಿಟ್ಟಿದ್ದು, ಆ ಸ್ಥಾನದಲ್ಲಿ ಅಮಿತಾಬ್ ಬಚ್ಚನ್ ಅವರನ್ನು ಕೂರಿಸಿದೆ.
ಮನೆಯಂತಿರುವ ಸೆಟ್‌ನಲ್ಲಿ ಕ್ಯಾಮರಾ ಅಳವಡಿಸಿ ಗುಣನಡತೆಯನ್ನು ಅಳೆಯುವ ರಿಯಾಲಿಟಿ ಶೋ ಇದಾಗಿದೆ. ಮನೆಯೊಳಗಿನ ಗುಣನಡತೆಯನ್ನು ಅಳೆಯುವ ಕಾಯಕವನ್ನು ಈವರೆಗೆ ಶಿಲ್ಪಾ ಶೆಟ್ಟಿ ನಿಭಾಯಿಸುತ್ತಿದ್ದರು. ಈಗ ಅಮಿತಾಬ್ ಬಚ್ಚನ್ ನಿರ್ವಹಿಸಲಿದ್ದಾರೆ.
ಖಾಸಗಿ ಮನರಂಜನಾ ಚಾನಲ್‌ಗಳ ನಡುವೆ ಇದೀಗ ಭಾರೀ ಸ್ಪರ್ಧೆ ನಡೆಯುತ್ತಿದೆ. ಚಾನಲ್‌ಗಳ ಸಂಖ್ಯೆಯೂ ಹಿಂದೆ ಇದ್ದುದಕ್ಕಿಂತ ಸಾಕಷ್ಟು ಹೆಚ್ಚಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಕ್ರಿಯಾತ್ಮಕ, ಡಿಫರೆಂಟ್ ಕಾರ್ಯಕ್ರಮ ಪ್ರಸ್ತುತ ಪಡಿಸುವ ಸ್ಪರ್ಧೆಯೂ ನಡೆಯುತ್ತಿದೆ. ಈಗ್ಗೆ ಕೆಲವೇ ದಿನಗಳ ಹಿಂದಷ್ಟೆ ಸ್ವಯಂವರವನ್ನೇ ಟಿ ಮೂಲಕ ಮಾಡಿಕೊಳ್ಳುವ ರಿಯಾಲಿಟಿ ಶೋನಲ್ಲಿ ರಾಖಿ ಮಿಂಚಿದ್ದು ಗೊತ್ತೇ ಇದೆ. ಬಿಗ್ ಬಾಸ್ ಕಾರ್ಯಕ್ರಮ ಕೂಡಾ ಅಂತಹುದೇ ಒಂದು ಪ್ರಯತ್ನ.
IFM
ಪ್ರೇಕ್ಷಕರನ್ನು ಕಾರ್ಯಕ್ರಮದತ್ತ ಮತ್ತೆ ಸೆಳೆಯಲು ಈಗ ಅಮಿತಾಬ್ ಬಚ್ಚನ್ ಅವರನ್ನು ಕಾರ್ಯಕ್ರಮ ನಡೆಸುವಂತೆ ಕೋರಲಾಗಿದೆ ಎನ್ನಲಾಗಿದೆ. ಶಿಲ್ಪಾ ಶೆಟ್ಟಿ ಈಗಾಗಲೇ ಹಲವು ಸಮಯದಿಂದ ಕಾರ್ಯಕ್ರಮ ನಿರ್ವಹಿಸಿರುವುದರಿಂದ ಜನರಿಗೆ ಬದಲಾವಣೆ ನೀಡಲು ಅಮಿತಾಬ್ ಬಚ್ಚನ್ ಅವರನ್ನು ಆರಿಸಲಾಗಿದೆ. ಈಗಾಗಲೇ ಕಾರ್ಯಕ್ರಮ ಸಂಬಂಧ ಅಮಿತಾಬ್ ಹಾಗೂ ಚಾನಲ್ ನಡುವೆ ಒಪ್ಪಂದವೂ ನಡೆದಿದ್ದು, ಕಾರ್ಯಕ್ರಮದ ಹೊಸ ಪ್ರೋಮೋ ಕೂಡಾ ಸಿದ್ಧಗೊಂಡಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಲು ಅಮಿತಾಬ್ ಮಾತ್ರ ಮುಂಬೈನಲ್ಲಿಲ್ಲ. ಈಗಾಗಲೇ ಅವರು ಸಿಂಗಾಪುರದ ವಿಮಾನ ಹತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯಕ್ಕಂತೂ ಸಿಂಗಾಪುರದಿಂದ ಬರುವ ಲಕ್ಷಣವೂ ಇಲ್ಲ.
ಅಮಿತಾಬ್ ಹೇಳುವಂತೆ, ಕಾರ್ಯಕ್ರಮ ನಾನು ನಡೆಸುತ್ತಿರುವುದು ಹೌದು. ಆದರೆ ನಾನು ಮುಂಬೈನಲ್ಲಿಲ್ಲ. ಸಿಂಗಾಪುರಕ್ಕೆ ನನ್ನ ಗೆಳೆಯ ಅಮರ್‌ಸಿಂಗ್ (ಸಮಾಜವಾದಿ ಪಕ್ಷದ ಮುಖಂಡ) ಅವರನ್ನು ನೋಡಿಕೊಳ್ಳಲೆಂದು ಸಿಂಗಾಪುರಕ್ಕೆ ಬಂದಿದ್ದೇನೆ. ಅಮರ್ ಸಿಂಗ್ ಆರೋಗ್ಯ ಸರಿಯಿಲ್ಲ. ಇತ್ತೀಚೆಗಷ್ಟೆ ಆಪರೇಷನ್ ನಡೆದಿದೆ. ಇಂಥ ಸಂದರ್ಭ ಆತ್ಮೀಯ ಗೆಳೆಯನಾಗಿ ನಾನಿಲ್ಲಿ ಇರಲೇಬೇಕು. ಹಾಗಾಗಿ ಸದ್ಯಕ್ಕೆ ಮುಂಬೈಗೆ ಬರುವ ಪ್ಲಾನ್ ಇಲ್ಲ. ಆದರೆ ಕಾರ್ಯಕ್ರಮ ನಡೆಸುವುದಕ್ಕಾಗಿ ಪ್ರತಿ ಶುಕ್ರವಾರ ಮುಂಬೈಗೆ ಬಂದು ಮತ್ತೆ ಸಿಂಗಾಪುರಕ್ಕೆ ಮರಳುತ್ತೇನೆ ಎನ್ನುತ್ತಾರೆ.