ರಾಖಿ ಸಾವಂತ್ ಎಂಬ 'ಅಲ್ಟಿಮೇಟ್ ಡ್ರಾಮಾ ಕ್ವೀನ್' ಮಾಡುವ ಸುದ್ದಿ ಒಂದೇ, ಎರಡೇ..? ನಿಂತರೂ, ಕೂತರೂ, ಮುತ್ತಿಕ್ಕಿದರೂ, ಕಿರುಚಿದರೂ, ಕುಣಿದರೂ ಎಲ್ಲವೂ ಸುದ್ದಿಯೇ. ಇಂತಹ ಕಾಂಟ್ರಾವರ್ಸಿ ಕ್ವೀನ್ ಮೊನ್ನೆ ಮೊನ್ನೆ ಸ್ವಯಂವರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಭಾರತೀಯ ಮೂಲದ ಕೆನಡಾ ನಿವಾಸಿ ಇಲೇಶ್ ಪರುಜನ್ವಾಲಾ ಜತೆಗೆ ಡ್ಯುಯೆಟ್ ಹಾಡತೊಡಗಿ ಒಂದು ತಿಂಗಳ ಮೊದಲೇ 'ರಾಖಿಗೆ ಇಲೇಶ್ ಬೇಡವಂತೆ' ಎಂಬ ಗಾಳಿಸುದ್ದಿ ಬಂದೆರಗಿತ್ತು. ಆದರೆ, ಆ ಸುದ್ದಿ ಹಳತಾಗುವ ಮುನ್ನವೇ ರಾಖಿ ತಾನು ಹಾಗೂ ಇಲೇಶ್ ಎಷ್ಟು ಪ್ರೀತಿಸುತ್ತಿದ್ದೇವೆ ಎಂಬುದನ್ನು ಕ್ಯಾಮರಾ ಎದುರೇ ಸೂಚ್ಯವಾಗಿ ತೋರಿಸಿಬಿಟ್ಟಿದ್ದಾಳೆ. ಅದೂ ಕೂಡಾ ರಿಯಾಲಿಟಿ ಶೋನಲ್ಲೇ ಜಗವನ್ನೇ ಮರೆತು ಗಾಢವಾಗಿ ಇಲೇಶ್ ತುಟಿಗೆ ತನ್ನ ತುಟಿಯೊತ್ತುವ ಮೂಲಕ!!!
ಅಬ್ಬಾ. ರಾಖಿಯ ಎದೆಗಾರಿಕೆಗೆ ಮೆಚ್ಚಲೇಬೇಕು ಅಂತೀರಾ? ಅಂದು ಮಿಕಾ ಸಿಂಗ್‌ನಿಂದ ಚುಂಬನ ಸ್ವೀಕರಿಸಿ 'ದಂತಭಗ್ನ'ಕ್ಕೊಳಗಾಗಿದ್ದ ರಾಖಿ ಸಾವಂತ್ ಇಂದು ತಾನೇ, ಇಲೇಶ್ ಎಂಬ ತನ್ನ ಇನಿಯನಿಗೆ ತುಟಿಯೊತ್ತಿದ್ದಾಳೆ. ಹೌದು. ರಾಖಿ ಹಾಗೂ ಇಲೇಶ್ ಇಬ್ಬರೂ ಸದ್ಯಕ್ಕೆ ಟಿವಿ ರಿಯಾಲಿಟಿ ಕಾರ್ಯಕ್ರಮ 'ಪತಿ ಪತ್ನಿ ಔರ್ ವೋ'ನಲ್ಲಿ ಪತಿ ಪತ್ನಿಯರಾಗಿ ಅಭಿನಯಿಸುತ್ತಿದ್ದಾರೆ. ಅವರಿಗೊಂದು ಮಗುವನ್ನೂ ಕೊಡಲಾಗುತ್ತದೆ. ಮನೆಯೊಂದರಲ್ಲಿ ಒಂದು ತಿಂಗಳ ಕಾಲ ಕ್ಯಾಮರಾ ಜೋಡಿಸಿ ವಾಸಿಸಲು ಹೇಳಲಾಗುತ್ತದೆ. ಗಂಡ-ಹೆಂಡತಿಯಾಗಿ ತಮ್ಮದೇ ಮಗುವನ್ನು ನೋಡಿಕೊಂಡು 'ಉತ್ತಮ ಸಂಸಾರ' ಮಾಡಿದವರು ರಿಯಾಲಿಟಿ ಶೋನ ವಿಜೇತರು!
IFM
ಕಾರ್ಯಕ್ರಮದಲ್ಲಿ ಹೆಂಡತಿಯಾದವಳು ಮಗುವಿನ ಹೆರಿಗೆಯ ನಾಟಕವೂ ಮಾಡಬೇಕು. ಇತ್ತೀಚೆಗೆ ರಾಖಿ ಹಾಗಾಗಿ ಗರ್ಭಿಣಿಯಾದಳು. ಆಕೆಯ ಹೊಟ್ಟೆಗೆ ಚೆನ್ನಾಗಿ ಬಟ್ಟೆ ಕಟ್ಟಿ ತುಂಬು ಗರ್ಭಿಣಿಯನ್ನಾಗಿ ಮಾಡಲಾಯಿತು. ಆ ಸಮಯದಲ್ಲಿ ಆಕೆಗಾಗುವ ಕಷ್ಟಕ್ಕೆ ಇಲೇಶ್ ಹೆಗಲು ಕೊಟ್ಟನಂತೆ. ಮನೆಕೆಲಸವನ್ನೆಲ್ಲಾ ತಾನೇ ಮಾಡಿ ಹೆಂಡತಿಗೆ ಸಹಕಾರ ನೀಡಿದನಂತೆ. ಆಗ ರಾಖಿಗೆ ಆತ ತನಗಾಗಿ ಪಡುವ ಕಷ್ಟ ನೋಡಿ ಆನಂದಭಾಷ್ಪವೇ ಬರುವಷ್ಟು ಖುಷಿಯಾಯಿತು. ಹೀಗಾಗಿ ಆಕೆಯ ಖುಷಿ ಮಿತಿ ಮೀರಿ, 'ಕ್ಯಾಮರಾ ತಮ್ಮ ದಿನನಿತ್ಯದ ಆಗುಹೋಗುಗಳನ್ನು ಚಿತ್ರಿಸುತ್ತಿದೆ' ಎಂಬುದನ್ನೂ ಮರೆತು, ಇಲೇಶ್ ತುಟಿಗೆ ತುಟಿಯೊತ್ತಿ ಬಿಟ್ಟಳಂತೆ. ಕ್ಯಾಮರಾ ರಾಖಿ- ಇಲೇಶ್ ಎಂಬಿಬ್ಬರ ಅನ್ಯೋನ್ಯ ದಾಂಪತ್ಯವನ್ನು ಎಳ್ಳಷ್ಟೂ ಬಿಡದೆ ಚಿತ್ರೀಕರಿಸಿದೆ. ಹಾಗಾಗಿ ಎಲ್ಲ ಟಿವಿ ವಾಹಿನಿಗಳಲ್ಲೂ ಅವರಿಬ್ಬರ ಪ್ರೀತಿಯನ್ನು ಬಿಟ್ಟೂ ಬಿಡದೆ ಪ್ರಸಾರ ಮಾಡಿವೆ.
ಈಗ ರಾಖಿಗೆ ಟಿವಿಯಲ್ಲಿ ಮಗುವಾಗಿದೆ. ಮಗುವಿನ ಉಚ್ಚೆ ಕ್ಲೀನ್ ಮಾಡಿ, ರಂಪ ಮಾಡುವುದನ್ನು ನಿಲ್ಲಿಸಿ ಸಮಾಧಾನ ಮಾಡಿ ರಾಖಿಗೆ ತಲೆನೋವೇ ಬಂದಿದೆಯಂತೆ. ಜೀವಮಾನದಲ್ಲಿ ನಾನೆಂದೂ ಮಗುವನ್ನು ಹೆರಲಾರೆ ಎಂದು ರಾಖಿ ಪ್ರಮಾಣ ಮಾಡಿದ್ದಾಳಂತೆ.
ಈ ಕಾರ್ಯಕ್ರಮದಲ್ಲಿ ಉತ್ತಮ ಸಂಸಾರ ಮಾಡಿದವರು ವಿಜೇತರು. ಬಹುಶಃ ಎಲ್ಲವನ್ನೂ ರಿಯಲ್ಲಾಗೇ ಮಾಡುತ್ತಿರುವ ರಾಖಿ- ಇಲೇಶ್ ಇಬ್ಬರೂ ಎಲ್ಲರಿಗಿಂತ 'ಉತ್ತಮ ಸಂಸಾರ' ಮಾಡಿದವರಾಗಿ ಹೊರಹೊಮ್ಮಬಹುದು ಎಂಬುದು ಹಲವರ ಲೆಕ್ಕಾಚಾರ!!!