ಮುಂಬೈ 26/11 ಭಯೋತ್ಪಾದನಾ ಕೃತ್ಯಕ್ಕೆ ನಲುಗಿದ ದೇಶ ಆ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಅಂತಹ ದುರಂತವೊಂದು ಸಂಭವಿಸಿ ಬರೋಬ್ಬರಿ ಒಂದು ವರ್ಷವಾಗಿದೆ. ಬಾಲಿವುಡ್ಡಿನ ಅನೇಕ ದಿಗ್ಗಜರು ತಮ್ಮ ತಮ್ಮದೇ ರೀತಿಯಲ್ಲಿ ಭಯೋತ್ಪಾದನಾ ದುರಂತದಲ್ಲಿ ಮರಣಿಸಿದ ಮುಗ್ಧರಿಗೆ, ದೇಶವನ್ನು ಭಯೋತ್ಪಾದನೆಯ ಕಪಿ ಮುಷ್ಠಿಯಿಂದ ಬಿಡಿಸಲು ಹೋರಾಡಿದ ಸೈನಿಕರಿಗೆ ನಮನ ಅರ್ಪಿಸಿದ್ದಾರೆ. ಮುಂಗಾರು ಮಳೆಯ 'ಅನಿಸುತಿದೆ ಯಾಕೋ ಇಂದು...' ಹಾಡಿನಿಂದ ಕನ್ನಡದಲ್ಲಿ ಜನಪ್ರಿಯರಾದ ಸೋನು ನಿಗಂ ಕೂಡಾ ಈ ದುರಂತಕ್ಕೆ ತಮ್ಮ ಅಶ್ರುತರ್ಪಣವನ್ನ ಹಾಡಿನ ಮೂಲಕವೇ ನೀಡಿದ್ದಾರೆ.
ಹೌದು. ಸೋನು ನಿಗಂ ಅಂದು 26/11 ದುರಂತದಲ್ಲಿ ಮಡಿದ ಮುಗ್ಧ ಜೀವಗಳ ನೆನಪಿಗಾಗಿ ತಾವೇ ಹಾಡೊಂದನ್ನು ಕಂಪೋಸ್ ಮಾಡಿದ್ದಾರೆ. 15 ಮಂದಿ ಹಾಡುಗಾರರನ್ನಿಟ್ಟುಕೊಂಡು ಸೋನು ನಿಗಂ ಉಂಗ್ಲೀ ಉಠೇ ತೋ... ಎಂದು ಅದ್ಭುತ ಕಂಠದಲ್ಲಿ ಹಾಡಿನ ಮೂಲಕ ಕಣ್ಣೀರಾಗಿದ್ದಾರೆ.
ಈ ಒಂದು 26/11 ನೆನಪಿನ ಗೀತೆಯನ್ನು ನಾನು ಕಂಪೋಸ್ ಮಾಡಿದ್ದು ಒಂದು ವಿಶೇಷ ಉತ್ತಮ ಕಾರಣಕ್ಕಾಗಿ ಎಂದು ಸೋನು ನಿಗಂ ಹೇಳಿದ್ದಾರೆ. ಶಂಕರ್ ಮಹದೇವನ್, ಸುನಿಧಿ ಚೌಹಾಣ್, ಕುನಾಲ್ ಗಾಂಜಾವಾಲಾ, ಕೈಲಾಶ್ ಖೇರ್, ರೂಪ್ ಕುಮಾರ್ ರಾಥೋಡ್, ಹರಿಹರನ್ ಸೇರಿದಂತೆ 15 ಮಂದಿ ಖ್ಯಾತ ಸಂಗೀತ ದಿಗ್ಗಜರು ಈ ಹಾಡಿಗೆ ದನಿಯಾಗಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡಾ ಈ ಹಾಡಿನ ಆರಂಭದಲ್ಲಿ ತನ್ನ ಸ್ವರ ಜೋಡಿಸಿದ್ದಾರೆ. ಅವರು ಹಾಡದಿದ್ದರೂ, 26/11ರ ದುರಂತಕ್ಕೆ ತಮ್ಮ ಭಾವನೆಗಳ ನಮನ ಸಲ್ಲಿಸಿದ್ದಾರೆ. ಈಗಾಗಲೇ ಈ ಹಾಡ ಎಫ್ ಎಂ ಚಾನಲ್‌ಗಳಲ್ಲಿ ಪ್ರಸಾರವಾಗಿದೆ. ಟಿವಿ ಚಾನಲ್‌ಗಳಲ್ಲೂ ಕಾಣಿಸಿಕೊಳ್ಳಲಿದೆ.