ಟಿವಿ ಕಾರ್ಯಕ್ರಮದಲ್ಲಿ ಸ್ವಯಂವರಕ್ಕೆ ನಿಂತು ನಿಶ್ಚಿತಾರ್ಥ ಮಾಡಿಕೊಂಡ ರಾಖಿ ಸಾವಂತ್ ಈಗ ಮತ್ತೆ ತನಗೆ ಇನ್ನೊಂದು ಸ್ವಯಂವರ ಮಾಡಬೇಕು ಎಂದು ಗೋಗರೆದಿದ್ದಾಳೆ. ಮೊದಲ ಸ್ವಯಂವರದಲ್ಲಿ ಕೆನಡಾ ಮೂಲದ ಇಳೇಶ್ ಪರುಜನ್‌ವಾಲಾನಿಗೆ ಒಲಿದ ಈಕೆ ಕೆಲವೇ ದಿನಗಳಲ್ಲಿ ಆತನ ವಿರುದ್ಧ ಮಾತನಾಡಲು ಶುರುಮಾಡಿದಾಗಲೇ ಇವರಿಬ್ಬರ ಗುಟ್ಟು ರಟ್ಟಾಗಿತ್ತು. ಇಳೇಶ್ ತನಗೆ ತಕ್ಕ ಜೋಡಿಯಲ್ಲ ಎಂದಿರುವ ರಾಖಿ ತನಗೆ ಇನ್ನೊಬ್ಬನ ಅಗತ್ಯವಿದೆ. ತಾನು ಅದಕ್ಕಾಗಿ ಇನ್ನೊಂದು ಸ್ವಯಂವರ ಮಾಡಿಕೊಳ್ಳಲು ಸಿದ್ಧ ಎಂದಿದ್ದಾಳೆ.
ನನಗೆ ಇನ್ನೊಂದು ಅವಕಾಶ ನೀಡಿದರೆ ಖಂಡಿತ ನಾನು ಸ್ವಯಂವರ ಮಾಡಿಕೊಳ್ಳುತ್ತೇನೆ. ಆದರೆ ಈ ಬಾರಿ ವರನ ಆಯ್ಕೆ ಮಾಡಲು ನಾನು ನನ್ನ ಕುಟುಂಬ ಸಹಕಾರ ಪಡೆಯುತ್ತೇನೆ. ಸ್ವಯಂವರ ನಿಜಕ್ಕೂ ನನಗೆ ಸೂಕ್ತನಾದ ವರನನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶವಾಗಿತ್ತು. ಆದರೆ ನನ್ನ ಅದೃಷ್ಟವೇಕೋ ಸರಿಯಾಗಿರಲಿಲ್ಲ. ಹಾಗಾಗಿ ರಾಖಿ ಕಾ ಸ್ವಯಂವರ ಕಾರ್ಯಕ್ರಮ ನನ್ನ ಪಾಲಿಗೆ ವರ್ಕ್ ಔಟ್ ಆಗಲಿಲ್ಲ ಎಂದು ರಾಖಿ ಹೇಳಿದ್ದಾಳೆ.
ಹಾಗಾದರೆ ಇಳೇಸ್ ಜೊತೆಗೇನಾಯ್ತು? ಎಂದರೆ ರಾಖಿ, ಇಳೇಶ್ ಪ್ರಾಮಾಣಿಕನಲ್ಲ. ಆತನ ಬಳಿ ದುಡ್ಡೇ ಇಲ್ಲ. ಕೆನಡಾದವನೆಂದು, ಭಾರೀ ದುಡ್ಡಿದೆಯೆಂದು ಸೋಗು ಹಾಕಿದ್ದ. ಅಷ್ಟೇ ಅಲ್ಲ, ನೈಟ್ ಕ್ಲಬ್ಬುಗಳಿಗೆ ಹೋಗೋದೆಂದರೆ ಆತನಿಗೆ ಪಂಚಪ್ರಾಣ. ಇದೆಲ್ಲವನ್ನೂ ನನಗೆ ಆತ ಹೇಳಿದ್ದು ಎಂಗೇಜ್‌ಮೆಂಟಿನ ನಂತರ. ಅವೆಲ್ಲವನ್ನೂ ಸ್ವೀಕರಿಸುವ ಗುಣದವಳಲ್ಲ ನಾನು ಎಂದು ರಾಖಿ ಕಾರಣ ವಿವರಿಸಿದ್ದಾಳೆ.
ಸೊಸೆಯಾಗಿ ನಿಮ್ಮ ಅನುಭವ ಹೇಗಿತ್ತು ಎಂದರೆ ರಾಖಿಗೆ ತಕ್ಷಣ ಸಿಟ್ಟು ಬರುತ್ತದೆ. ಸೊಸೆಯಾ? ಯಾರು? ಎಂದು ಪ್ರಶ್ನಿಸುವ ರಾಖಿ, ಇಳೇಶ್‌ನ ಅಪ್ಪ ಅಮ್ಮ ನನ್ನನ್ನು ಸೊಸೆಯಂತೆ ಕಾಣಲಿಲ್ಲ. ಇಳೇಶ್ ಒತ್ತಾಯ ಮಾಡಿದ ಕಾರಣಕ್ಕೆ ಅವರು ಸ್ವಯಂವರಕ್ಕೆ ಬಂದಿದ್ದರು. ಅವರಿಗೆ ಇಷ್ಟವೇ ಇರಲಿಲ್ಲ. ಅವರು ಒಂದೇ ಒಂದು ಬಾರಿಯೂ ನನಗೆ ಕಾಲ್ ಮಾಡಿರಲಿಲ್ಲ ಎನ್ನುತ್ತಾಳೆ ರಾಖಿ.
ಇಷ್ಟೆಲ್ಲ ಆದರೂ, ರಾಖಿಗೆ ಇನ್ನೊಮ್ಮೆ ಸ್ವಯಂವರ ಮಾಡಲು ಅವಕಾಶ ಸಿಕ್ಕರೆ ಖಂಡಿತ ತನಗೆ ಅನುರೂಪನಾದ ವರನನ್ನೇ ಆಯ್ಕೆ ಮಾಡಿಕೊಳ್ಳುವ ಆತ್ಮವಿಶ್ವಾಸವಿದೆ. ಆದರೆ, ಹಳೆಯ ಸ್ವಯಯಂವರದಲ್ಲಿ ನಿಜಕ್ಕೂ ಯಾರಿಗೂ ನನ್ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಎಲ್ಲರಿಗೂ ನನ್ನ ಹಣವಷ್ಟೆ ಬೇಕಾಗಿತ್ತು ಎಂದಿದ್ದಾಳೆ ರಾಖಿ.
ಹಾಗಾದರೆ ಇನ್ನೊಂದು ಸ್ವಯಂವರದಲ್ಲಿ ಪ್ರಾಮಾಣಿಕ, ಉತ್ತಮ ವರ ಸಿಕ್ಕುತ್ತಾನೆ ಎಂದು ಏನು ಗ್ಯಾರೆಂಟಿ ಎಂದರೆ ರಾಖಿ, ಖಂಡಿತವಾಗಿ ಮುಂದೆ ಉತ್ತಮ ವರನೇ ಸಿಗುತ್ತಾನೆ. ಇನ್ನೊಂದು ಬಾರಿ ಸ್ವಯಂವರ ಮಾಡಿದಲ್ಲಿ ನಾನು ಮೊದಲೇ ವರನಾಗಬಯಸುವ ಗಂಡು ಉದ್ಯೋಗ ಹಾಗೂ ಸ್ವಂತ ಮನೆ ಹೊಂದಿರಬೇಕೆಂದು ಷರತ್ತು ವಿಧಿಸುತ್ತೇನೆ. ಅಷ್ಟೇ ಅಲ್ಲ, ಆ ಗಂಡು ನಾನು ಕೆಲಸಕ್ಕೆ ಹೋಗಬೇಕೆಂದು ಬಯಸುವವನಾಗಿರಬಾರದು. ಜೊತೆಗೆ ಆತನಿಗೆ ನಾನು ಸಪೋರ್ಟ್ ಮಾಡಬೇಕೆಂದು ಬಯಸುವುದೂ ಕೂಡಾ ತಪ್ಪು ಎಂದು ಮೊದಲೇ ಕಂಡೀಷನ್ ಹಾಕುತ್ತೇನೆ ಎನ್ನುತ್ತಾಳೆ ರಾಖಿ!!! ಸೆಕೆಂಡ್ ರೌಂಡಿಗೆ ಸಿದ್ಧರಾಗುತ್ತೀರಾ?