ಈಗಂತೂ ಅದ್ದೂರಿಯಾಗಿ ಸಭಾಂಗಣಗಳಲ್ಲಿ, ಆಕಾಶದಲ್ಲಿ, ನೀರ ಮೇಲೆ ಹೀಗೆಲ್ಲಾ ಡಿಫರೆಂಟ್ ಆಗಿ ಮದುವೆಯಾಗೋ ಕಾಲ ಮುಗೀತು ಅನಿಸುತ್ತಿದೆ. ಈಗೇನಿದ್ದರೂ, ರಿಯಾಲಿಟಿ ಶೋಗಳಲ್ಲಿ ಮದುವೆಯಾಗೋ ಕಾಲ ಬಂದು ಬಿಟ್ಟಿದೆ. ಅದು ಮದುವೆಯೋ, ಅಥವಾ ಮದುವೆಯೆಂಬ ಆಟವೋ ಗೊತ್ತಿಲ್ಲ, ಒಟ್ಟಾರೆ, ರಾಖಿ ಸಾವಂತ್ ಎಂಬ 'ದಿ ಅಲ್ಟಿಮೇಟ್ ಡ್ರಾಮಾ ಕ್ವೀನ್'ಳ 'ಸ್ವಯಂವರ'ವೆಂಬ ರಿಯಾಲಿಟಿ ಶೋ ಮುಗಿಯಿತು. ಆಮೇಲೆ ರಾಖಿಗೆ ಅದೇನು ರಿಯಾಲಿಟಿ ಗೊತ್ತಾಯ್ತೋ ಗೊತ್ತಿಲ್ಲ, ಇಳೇಶ್‌ಗೆ ಕೈಕೊಟ್ಟಳು. ಈಗಿನ ಸರದಿ ರಾಹುಲ್ ಮಹಾಜನ್‌ರದ್ದು. ಬಿಜೆಪಿಯ ಧುರೀಣ ಪ್ರಮೋದ್ ಮಹೋಜನ್ ಅವರ ಪುತ್ರ ರಾಹುಲ್ ಮಹಾಜನ್ ಇದೀಗ 'ರಾಹುಲ್ ದುಲ್ಹನಿಯಾ ಲೇ ಜಾಯೇಗಾ' ಎಂಬ ರಿಯಾಲಿಟಿ ಶೋ ಕಾರ್ಯಕ್ರಮದ ಮೂಲಕ ತನ್ನ ಮನಮೆಚ್ಚಿದ ಹುಡುಗಿಯನ್ನು ಆರಿಸಲಿದ್ದಾರೆ!
ನೀವು ನಿಜವಾಗ್ಲೂ ಟಿವಿ ರಿಯಾಲಿಟಿ ಶೋದಲ್ಲೇ ಮದುವೆಯಾಗ್ತೀರಾ, ಅಥವಾ ಇದು ಕೇವಲ ನಾಟಕಾನಾ ಎಂದರೆ ರಾಹುಲ್ ಮಾತ್ರ ಸುತಾರಂ ಒಪ್ಪೋದಿಲ್ಲ. ಕಾರ್ಯಕ್ರಮದ ಹೆಸರೇ ರಾಹುಲ್ ದುಲ್ಹನಿಯಾ ಲೇ ಜಾಯೇಗಾ ಅಂತ. ಅಂದರೆ ರಾಹುಲ್ ಮದುವಗಳನ್ನು ಮನೆಗೆ ಕರೆತರುತ್ತಾನೆ ಎಂಬುದೇ ಇದರರ್ಥ. ಹಾಗಾಗಿ ರಿಯಾಲಿಟಿ ಶೋ ಮೂಲಕ ಮದುವೆಯಾಗಿ, ಆ ಹುಡುಗಿಯನ್ನು ಮನೆಗೆ ಕರೆತಂದು ಚೆಂದದ ಸಂಸಾರ ಮಾಡುತ್ತೇನೆ ಎನ್ನುತ್ತಾರೆ ರಾಹುಲ್.
ಹಾಗಾದರೆ ಈಗಾಗಲ್ವೇ ಬಾಲ್ಯದ ಗೆಳತಿ ಶ್ವೇತಾರನ್ನು ಮದುವೆಯಾಗಿ ವಿಚ್ಛೇದನ ನೀಡಿ, ಈಗ ಎರಡನೇಯತ್ತ ಯಾಕೆ ಚಿತ್ತ ಎಂದರೆ ಅದಕ್ಕೂ ರಾಹುಲ್ ಬಳಿ ಸಿದ್ಧ ಉತ್ತರವಿದೆ. ನನ್ನ ಅಪ್ಪನಿಗೆ ನಾನು ಮದುವೆಯಾಗಬೇಕೆಂಬ ಬಯಕೆಯಿತ್ತು. ಮದುವೆಯಾಗಿ ಮಗ ಹಾಯಾಗಿ ಹನಿಮೂನ್ ಹೋಗಿ ಮನೆಗೆ ಮೊಮ್ಮಕ್ಕಳನ್ನು ಕರುಣಿಸಬೇಕೆಂದು ಅಪ್ಪ ಬಯಸಿದ್ರು. ಆದರೆ ಮೊದಲ ಮದುವೆ ಯಾಕೋ ನನ್ನ ಪಾಲಿಗೆ ಸಫಲತೆ ಆಗಲಿಲ್ಲ. ಎರಡನೇ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ. ನಾನು ಮದುವೆಯಾದರೆ ಅಪ್ಪನ ಆ ಕನಸು ನನಸು ಮಾಡಬಹುದು ಅಂತ ನನಗಾಸೆ.
ಹಾಗಾದ್ರೆ ಟಿವಿ ರಿಯಾಲಿಟಿ ಶೋ ಮೂಲಕವೇ ಮದುವೆ ಯಾಕಪ್ಪಾ ಬೇಕಿತ್ತು ಎಂದರೆ, ನನ್ನ ಅಮ್ಮ ಯಾವಾಗಲೂ ನನ್ನ ಮೊದಲ ಮದುವೆ ವಿಫಲವಾದ ಮೇಲೆ ನನಗೆ ಮದುವೆ ಮಾಡಬೇಕೆಂಬ ಕನಸು ಹೊತ್ತು ವಿವಾಹ ಕೇಂದ್ರಗಳು, ವೈಬ್‌ಸೈಟ್‌ಗಳೆಲ್ಲಾ ತಡಕಾಡಿದ್ದಳು. ಅಂದೇ ಸಂದರ್ಭ ಎನ್‌ಡಿಟಿವಿಯ ಈ ಕಾರ್ಯಕ್ರಮದ ಮೂಲಕ ಯಾಕಾಗಬಾರದು ಅನಿಸ್ತು. ಅಷ್ಟೇ ಅಲ್ಲ. ನನ್ನ ಮದುವೆಯನ್ನು ಈ ಹಿಂದೆಯೂ ಮಾಧ್ಯಮಗಳೆಲ್ಲ ಪ್ರಸಾರ ಮಾಡಿದ್ದವು. ಮುಂದೆ ನಡೆದರೂ ಪ್ರಸಾರ ಮಾಡುತ್ತೆ. ಹಾಗಾಗಿ ಹೀಗೆ ಮಾಡಿದರೇನು ಹೇಗೆ ಅನಿಸ್ತು ಎನ್ನುತ್ತಾರೆ ರಾಹುಲ್.
ರಾಹುಲ್ ಈಗಾಗಲೇ ಅಂತಿಮವಾಗಿ 15 ಹುಡುಗಿಯರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ, ಈ 15 ಹುಡುಗಿಯರ ಪೈಕಿ ಹಲವರು ಗ್ಲ್ಯಾಮರ್ ಲೋಕದ ಬೆಡಗಿಯರಾದರೆ, ಇನ್ನ ಕೆಲವರು ಪತ್ರಕರ್ತೆಯರು, ಟಿವಿ ನಿರೂಪಕರು, ಹೆಚ್‌ಆರ್ ಹುದ್ದೆಯಲ್ಲಿರುವವರು, ಫ್ಯಾಷನ್ ಡಿಸೈನರ್‌ಗಳು, ವಕೀಲರು, ಕಾಲೇಜು ವಿದ್ಯಾರ್ಥಿನಿಯರು ಸೇರಿದ್ದಾರಂತೆ.
ಅಂತಿಮವಾಗಿ ಆಯ್ಕೆಯಾಗೋದು ಹೃದಯವಿರುವ, ಪ್ರಾಮಾಣಿಕ ಹಾಗೂ ಸದಾ ನಗುನಗುತ್ತಿರುವ ಹಾಗೂ ನಗಿಸುತ್ತಿರುವ ಸಾದಾ ಹುಡುಗಿ. ಹೀಗೆ ಆಯ್ಕೆಯಾದ ಹುಡುಗಿಯನ್ನು ಮದುವೆಯಾಗಿ ಮನೆ ತುಂಬಿಸಿಕೊಂಡು ಹನಿಮೂನ್‌ಗೆ ಕರೆದುಕೊಂಡು ಹೋಗಿ ಸದಾ ಕಾಲ ಆಕೆಯೊಂದಿಗೆ ಸುಖವಾಗಿ ಬಾಳುವ ಕನಸು ಹೊಂದಿದ್ದಾರೆ ರಾಹುಲ್. ಏನೋಪ್ಪಾ, ರಿಯಾಲಿಟಿ ಶೋ ಮುಗಿದ ಮೇಲೆ ಕಾಲವೇ ಉತ್ತರ ಹೇಳುತ್ತೆ ಬಿಡಿ ಅನ್ನೋದೇ ಲೇಸು.
ಕಾರ್ಯಕ್ರಮ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಎನ್‌ಡಿಟಿವಿ ಇಮ್ಯಾಜಿನ್‌ನಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.