ಈ ಹೆಸರು ಎಲ್ಲೋ ಕೇಳಿದ ನೆನಪಿದೆಯಾ? ಇದ್ದರೂ ಇರಬಹುದು. ಆದರೆ, ರಾಖಿ ಸಾವಂತ್ ಎಂಬ ಕನ್ಯಾಮಣಿಯ ಹೆಸರಂತೂ ಕೇಳೇ ಇರುತ್ತೀರಿ ಬಿಡಿ. ಹೌದು. ರಾಖಿ ಸಾವಂತ್ ಅಂದೊಮ್ಮೆ ರಾಖಿ ಕಾ ಸ್ವಯಂವರ್ ಎಂಬ ಕಾರ್ಯಕ್ರಮ ಮಾಡಿ ಇಳೇಶ್ ಎಂಬ ಕೆನಡಾ ಮೂಲದ ವರನನ್ನು ಮದುವೆಯಾದಂತೆ ನಾಟಕವಾಡಿ, ಆಮೇಲೆ ಕೈಕೊಟ್ಟ ಪ್ರಸಂಗ ಎಲ್ಲರಿಗೂ ಗೊತ್ತಿರೋ ವಿಷಯ. ಅದೇ ರಾಖಿ ಕಾ ಸ್ವಯಂವರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಕಷ್ಟು ಸುದ್ದಿ ಮಾಡಿದ 'ವರ'ರಲ್ಲಿ ಒಬ್ಬನೇ ಈ ಮನಮೋಹನ್ ತಿವಾರಿ.
ಈಗ ಈ ಮನಮೋಹನ್ ತಿವಾರಿ ವಿಷಯ ಏಕೆ ಅಂತೀರಾ? ಆತ ನೆನಪಾಗೊದಕ್ಕೆ ಕಾರಣವಿದೆ. ರಾಖಿ ಕಾ ಸ್ವಯಂವರ್‌ನಲ್ಲಿ ಹೃಷಿಕೇಶದ ತನ್ನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ತನ್ನ ಅಪ್ಪ ಅಮ್ಮನನ್ನು ಪರಿಚಯ ಮಾಡಿಸಿ ಇವೇ ನಿನ್ನ ಅತ್ತೆ ಮಾವ ಎಂದು ಈ ಮನಮೋಹನ್ ಹೇಳಿದ್ದ. ಆದರೆ ರಾಖಿ ತನಗೆ ಅರ ನಡತೆ ಇಷ್ಟವಾಗಲಿಲ್ಲ, ಅವರಿಗೆ ಸೊಸೆ ಬೇಕಾಗಿಲ್ಲ ಮನೆಕೆಲಸದ ಆಳು ಬೇಕಾಗಿದ್ದಾಳೆ ಎಂದಿದ್ದಳು. ಹೀಗೆ ಹೇಳಿ ರಾಖಿ ಮನಮೋಹನ್ ತಿವಾರಿಯನ್ನು ತನ್ನ ಶೋನಿಂದ ರಿಜೆಕ್ಟ್ ಮಾಡಿದ್ದಳು!
IFM
ರಾಖಿಯಿಂದ ರಿಜೆಕ್ಟ್ ಆಗಿ ಮನಮೋಹನ್‌ಗೆ ಏನೂ ನಷ್ಟವಾಗಿಲ್ಲ. ಬದಲಾಗಿ ಲಾಭವೇ ಆಗಿದೆ!!! ಅದೇನಂತೀರಾ? ತನ್ನ ಬಾಲ್ಯದ ಕನಸಾದ ನಟನೆ ನನಸಾಗಿದೆ. ನಟನೆಗೆ ಈ ಖ್ಯಾತ ಶೋ ಖಂಡಿತ ನನಗೆ ವೇದಿಕೆಯೊದಗಿಸಬಹುದೆಂದು ತೀರ್ಮಾನಿಸಿ ರಾಖಿ ಕಾ ಸ್ವಯಂವರ್‌ಗೆ ಮನಮೋಹನ್ ತಿವಾರಿ ಅರ್ಜಿ ಹಾಕಿದ್ದ. ಈಗದು ಈಡೇರಿದ್ದು, ಖ್ಯಾತ ಎನ್‌ಡಿಟಿವಿ ಇಮ್ಯಾಜಿನ್ ಚಾನಲ್‌ನ ಜಾಮುನಿಯಾ ಎಂಬ ಕಾರ್ಯಕ್ರಮದ ನಿರೂಪಕನಾಗಿ ಆಯ್ಕೆಯಾಗಿದ್ದಾನೆ!!! ಯಾರಿಗುಂಟು ಯಾರಿಗಿಲ್ಲ ಹೇಳಿ ಈ ಭಾಗ್ಯ?!
ಅದೇನೇ ಇರಲಿ. ನಟನೆಯ ಆಸಕ್ತಿಯಿಂದ ರಾಖಿಯ ಶೋನಲ್ಲಿ ಭಾಗವಹಿಸಿದಿರಲ್ಲ, ನಿಮಗೆ ನಿಜವಾಗಿಯೂ ರಾಖಿಯನ್ನು ಮದ್ವೆಯಾಗೋ ಆಸಕ್ತಿಯಿರಲಿಲ್ಲವಾ? ಎಂದರೆ ತಿವಾರಿ ಚಾಲಾಕಿಯಾಗಿಯೇ ಉತ್ತರಿಸುತ್ತಾನೆ. ರಾಖಿ ತನ್ನ ಸ್ವಯಂವರದ ಮೂಲಕ 16 ಪುರುಷರನ್ನು ಮೂರ್ಖರನ್ನಾಗಿಸಿದಳು. ಪುಣ್ಯಕ್ಕೆ ದೇವರು ನನ್ನನ್ನು ಬಚಾವಾಗಿಸಿದರು. ರಾಖಿ ಸ್ವಯಂವರದ ಮೂಲಕ ಆಡಿದ ನಾಟಕವನ್ನು ಪ್ರಶ್ನಿಸದಿರುವ ನೀವು ನನ್ನನ್ನೇ ಯಾಕೆ ಬೊಟ್ಟು ಮಾಡುತ್ತೀರಿ? ನಟನೆಯ ಆಸಕ್ತಿಯಿಂದ ಬಂದಿದ್ದು ತಪ್ಪಾ? ಎಂದು ಮರು ಪ್ರಶ್ನೆ ಹಾಕುತ್ತಾರೆ.
ಹಾಗಾದ್ರೆ ನಿಮ್ಗೆ ರಾಖಿಯನ್ನು ಮದ್ವೆಯಾಗೋ ಇಚ್ಛೆ ಇರಲಿಲ್ವೇ ಎಂದರೆ, ರಾಖಿ ಎಂಬ ಆ ಐಟಂ ಗರ್ಲ್ ನನ್ನನ್ನು ಇಷ್ಟಪಟ್ಟು ನನ್ನ ಕೊರಳಿಗೆ ಮಾಲೆ ಹಾಕುತ್ತಿದ್ದರೆ ಖಂಡಿತವಾಗಿಯೂ ಮದ್ವೆಯಾಗುತ್ತಿದ್ದೆ. ಅಷ್ಟೇ ಅಲ್ಲ, ನಾನು ಆಕೆಯನ್ನೂ ನನ್ನ ಊರಿಗೇ ಕರೆದೊಯ್ಯುತ್ತಿದ್ದೆ. ಆದರೆ ಆಕೆ ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮನೆಯ ಹಸುವಿನ ಹಾಲು ಕರೆಯಲು ಗೊತ್ತಿರಬೇಕು. ಸೆಗಣಿಯನ್ನು ಬಾಚಿ ತಟ್ಟಿ ಬೆರಣಿ ಮಾಡಲು ಗೊತ್ತಿರಬೇಕು. ಆಕೆ ಇವಿಷ್ಟನ್ನೂ ಕೇವಲ ಎರಡು ತಿಂಗಳಲ್ಲಿ ಕಲಿತರೂ ಸಾಕು, ನಾನು ಜೀವನ ಪರ್ಯಂತ ಆಕೆಯೊಂದಿಗೇ ನಿಷ್ಠೆಯಿಂದ ಸಂಸಾರ ನಡೆಸುತ್ತಿದೆ ಎಂದು ಸವಾಲನ್ನೂ ಹಾಕುತ್ತಾರೆ.
ಹಾಗಾದ್ರೆ ಈಗಿಬ್ಬರೂ ಟಿವಿಯಲ್ಲಿ ರಿಯಾಲಿಟಿ ಶೋ ನಡೆಸುವ ಒಂದೇ ಕೆಲಸ ಮಾಡುತ್ತಿದ್ದೀರಲ್ಲಾ ಇದಕ್ಕೇನಂತೀರಿ ಎಂದರೆ, ಇನ್ನೇನನ್ನಲಿ, ಜೈ ರಾಮ್ ಎನ್ನುತ್ತೇನೆ ಎಂದು ಹೇಳುತ್ತಾ ಕಿಸಕ್ಕನೆ ನಗುತ್ತಾರೆ ಮನಮೋಹನ್ ತಿವಾರಿ!