ನಕ್ಕುನಗಿಸಲು ತಯಾರಾಗುತ್ತಿದೆ ತಮಾಷೆಗಾಗಿ
ಪಂಚ ಸ್ನೇಹಿತೆಯರು ಸೇರಿ ಕನ್ನಡ ಸಿನಿ ಪ್ರೇಕ್ಷಕರನ್ನು ನಗಿಸಲು ಮುಂದಾಗಿದ್ದಾರೆ. ಚಿತ್ರದ ಹೆಸರೇ ತಮಾಷೆಗಾಗಿ. ಆದರೆ ನೀವು ನಗಲು ಇನ್ನು ಒಂದಿಷ್ಟು ದಿನ ಕಾಯಬೇಕಾಗುತ್ತದೆ. ಆದರೆ ಇದೀಗ ಸದ್ಯಕ್ಕೆ ತಮಾಷೆಗಾಗಿ ಚಿತ್ರದ ಹಾಡನ್ನು ಕೇಳಬಹುದು.
ಚಿತ್ರದ ಹಾಡುಗಳನ್ನು ಕನ್ನಡ ಸಿನಿರಂಗದ ತಾರಾ ವರ್ಚಸ್ಸಿನ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬುಧವಾರ ಬಿಡುಗಡೆ ಮಾಡಿದರು.ಕರಿಸುಬ್ಬು ಸ್ಟುಡಿಯೋದಲ್ಲಿ ತಮಾಷೆಗಾಗಿಯ ಡಿಟಿಎಸ್ ರೆಕಾರ್ಡಿಂಗ್ ಪೂರ್ಣಪ್ರಮಾಣದ ವೇಗದಲ್ಲಿ ಸಾಗುತ್ತಿದೆ. ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಕಂಪೆನಿಗೆ ನೀಡಲಾಗಿದೆ. ಆಡಿಯೋ ಮತ್ತು ಸಿಡಿ ಆಲ್ಬಂ ಬಿಡುಗಡೆಯಾಗಿದೆ. ಎಲ್ಲ ಸಿದ್ಧತೆಯೂ ಭರದಿಂದ ಸಾಗುತ್ತಿದೆ.
ಇವಿಷ್ಟು ಚಿತ್ರಕ್ಕೆ ಸಂಬಂಧಿಸಿದ ಕತೆಯಾಯಿತು.ಇನ್ನು ಒಂದಿಷ್ಟು ಚಿತ್ರದ ಹಿಂದಿನ ಕತೆ ಕೇಳೋಣ. ಇದು ಪಂಚ ಸ್ನೇಹಿತೆಯರ ನಗುವಿನ ಸಾಹಸ ಎಂದು ಆಗಲೇ ಹೇಳಿಯಾಗಿದೆಯಲ್ಲ. ಈ ತಂಡದ ನೇತೃತ್ವ ಪ್ರಫುಲ್ಲ ಶ್ರೀನಿವಾಸ್ ಅವರದ್ದು. ಕೋಡ್ಲು ರಾಮಚಂದ್ರ ಚಿತ್ರದ ನಿರ್ದೇಶಕ. ಆರ್.ಪಿ.ಪಟ್ನಾಯಕ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕವಿರಾಜ್ ಮತ್ತು ಹೃದಯ ಶಿವ ಹಾಡುಗಳನ್ನು ಬರೆದಿದ್ದಾರೆ.
ಕೋಡ್ಲು ಶ್ರೀನಿವಾಸ್ ಅಮೆರಿಕದಲ್ಲಿ ಮಿಸ್ ಕ್ಯಾಲಿಫೋರ್ನಿಯಾದ ಚಿತ್ರೀಕರಣದಲ್ಲಿ ತೊಡಗಿದ್ದಾಗ ಪ್ರಫುಲ್ಲ ತನ್ನ ಸ್ನೇಹಿತೆಯರ ಗಢಣದೊಂದಿಗೆ ಅವರನ್ನು ಭೇಟಿಯಾಗಿದ್ದು ಚಿತ್ರ ನಿರ್ಮಾಣದ ಬಯಕೆಯನ್ನು ಮುಂದಿಟ್ಟಿದ್ದರಂತೆ. ಆ ವೇಳೆಗೆ ಕೋಡ್ಲು ತಮ್ಮ ದಾಸ್ತಾನಿನಲ್ಲಿದ್ದ ಮೂರು ಕತೆಗಳ ಪೈಕಿ ಒಂದನ್ನು ಬಿಚ್ಚಿಡುತ್ತಲೇ, ಕತೆ ಹೇಳಿ ಮುಗಿಯುವ ಮುನ್ನವೇ ತಮಾಷೆಗಾಗಿ ನಿರ್ಮಾಪಕರನ್ನು ಆಕರ್ಷಿಸಿದ್ದು ಅವರು ಅದೇ ಕತೆಯನ್ನು ಆಯ್ಕೆ ಮಾಡಿದರಂತೆ.
ನಿರ್ಮಾಪಕರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ನಿರ್ದೇಶಕರು ಹಾಡಿಹೊಗಳಿದ್ದಾರೆ. ಅಲ್ಲದೆ ಸಿನಿಮಾ ತುಂಬ ಚೆನ್ನಾಗಿ ಬಂದಿದೆ ಎಂದೂ ಅವರು ಹೇಳಿದರು. ಹಾಗಾಗಿ ನಗಲು ಬಯಸುವವರು ತಮಾಷೆಗಾಗಿ ಕಾಯಲು ಸುರುಹಚ್ಚಿಕೊಳ್ಳಬಹುದು.