ತನ್ನದೇ ಆದ ಸೃಷ್ಟಿಶೀಲತೆಯಿಂದಾಗಿ ಗಾಂಧಿ ನಗರದಲ್ಲಿ ಬೇಡಿಕೆಯ ನಿರ್ದೇಶಕಿಯಾಗಿರುವ ಕವಿತಾ ಲಂಕೇಶ್ ಸದ್ಯ ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ.
ದೇವೀರಿ, ಪ್ರೀತಿ ಪ್ರೇಮ ಪ್ರಣಯ, ತನನಂ ತನನಂ ಚಿತ್ರಗಳ ಮುಖಾಂತರ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ ಗಟ್ಟಿ ನೆಲೆಯೂರಿದರೂ ಹೆಸರಾಂತ ಸಾಹಿತಿ ಲಂಕೇಶ್ ಅವರ ಪುತ್ರಿ ಎಂಬ ಹೊರತಾಗಿಯೂ ಕವಿತಾ ನಿರೀಕ್ಷಿಸಿದಷ್ಟು ಉನ್ನತಿಗೇರಿಲ್ಲ. ಈ ಕುರಿತು ಆಕೆಯ ಅನಿಸಿಕೆಗಳು ಇಲ್ಲಿವೆ.
ಏಳು ವರ್ಷಗಳ ನಂತರ ಅಪ್ಪನ ಕೃತಿಯನ್ನು ಆಧರಿಸಿದ ಚಿತ್ರವೊಂದನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದೇನೆ.ಇನ್ನೂ ಚಿತ್ರದ ಹೆಸರನ್ನು ಪ್ರಕಟಿಸಿಲ್ಲ. ಅಗಸ್ಟ್ ವೇಳೆ ಚಿತ್ರೀಕರಣ ಆರಂಭಗೊಳ್ಳಲಿದೆ.5ಕ್ಕೂ ಹೆಚ್ಚು ಪುಟಗಳ ಸ್ಕ್ರಿಪ್ಟ್ ರೆಡಿಯಾಗಿದೆ. ನಾಯಕ, ನಾಯಕಿಯರ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ತನನಂ ತನನಂ ಚಿತ್ರ ಯಾಕೆ ತೋಪಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಅದು ತೋಪು ಎಂದು ಹೇಳಲ್ಲ. ಆದರೆ ಕೆಲವೊಮ್ಮೆ ನಿರ್ದೇಶಕಿ ನಾನಾದರೂ ಇತರರ ಸಲಹೆಯನ್ನು ಕೇಳಿಕೊಂಡು ಚಿತ್ರ ನಿರ್ಮಿಸಿದರೆ ಏನಾಗುತ್ತೆ ಎಂಬುದು ಈ ಚಿತ್ರದಿಂದ ಅರಿವಾಗಿದೆ.
ಇತರ ಯೋಜನೆಗಳ ಮಾಹಿತಿ ನೀಡಿದ ಅವರು ಈ ಟಿವಿಗಾಗಿ ನೀನಡೆವ ಹಾದಿ ಧಾರಾವಾಹಿಯ ಪೈಲಟ್ ಪೂರ್ಣಗೊಂಡಿದೆ. ಇನ್ನು ರೇಡಿಯೋ ಒಂದಕ್ಕೆ ಕಾರ್ಯಕ್ರಮ ನಿರ್ಮಿಸಿ ಕೊಡುತ್ತಿದ್ದೇನೆ. ಪತ್ರಿಕೆಗೆ ಅಂಕಣ ಬರೀತಿದೀನಿ. ಖಾಸಗಿ ಬದುಕಿನ ಬಗ್ಗೆ, ನೀವು ಸಿಂಗಲ್ ಪೇರೆಂಟ್ ಅಂತೆ ಹೌದಾ ಎಂಬ ಪ್ರಶ್ನೆಗೆ ಹೌದು. ಅದರಲ್ಲಿ ತಪ್ಪೇನಿದೆ ? ಮಗಳು ಈಶಾಳಿಗೆ 3 ವರ್ಷ ಆಗುತ್ತಿದೆ. ಮುಂದಿನ ವರ್ಷ ಆಕೆಯನ್ನು ಎಲ್.ಕೆ.ಜಿಗೆ ಸೇರಿಸಲಿದ್ದೇನೆ ಎಂದು ಉತ್ತರಿಸಿದರು.