ಗಣೇಶ್‌ಗೆ ಹಲ್ಲೆಮಾಡಿಲ್ಲ: ಶಿವರಾಜ್
ಬೆಂಗಳೂರು, ಸೋಮವಾರ, 9 ಜುಲೈ 2007( 16:06 IST )
ಅಪ್ಪಾಜಿ ಮೇಲೆ ಆಣೆ ಮಾಡಿ ಹೇಳ್ತೀನಿ, ನಾನು ಗಣೇಶ್ ಮೇಲೆ ಹಲ್ಲೆ ಮಾಡಿಲ್ಲ. ನಮ್ಮ ಕುಟುಂಬದವರಾರೂ ಹಲ್ಲೆ ಮಾಡಿಲ್ಲ. ನಮಗೆ ಅಂಥಹ ಬುದ್ಧಿಯನ್ನು ಆ ಭಗವಂತ ಕೊಟ್ಟೇ ಇಲ್ಲ ಹೀಗೆಂದು ಸೇರಿದ್ದ ಲಕ್ಷಾಂತರ ಜನರ ಮುಂದೆ ಹೇಳಿಕೊಂಡವರು ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್.
ಭಾನುವಾರ ಸಂಜೆ ಅರಮನೆ ಮೈದಾನದಲ್ಲಿ ನಡೆದ ಮುಂಗಾರು ಮಳೆ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಂಗಾರು ಮಳೆಯ ಯಶಸ್ಸಿನ ಹೀರೋ ಗಣೇಶ್ ಮೇಲೆ ಹಲ್ಲೆ ನಡೆದಿದೆ ಎಂಬ ವದಂತಿಗಳು ಹಬ್ಬಿದ್ದವು. ರಾಜ್ ಕುಟುಂಬ ಗಣೇಶ್ ಮೇಲೆ ಕೈ ಮಾಡಿದೆ ಎಂಬರ್ಥದ ಸುದ್ದಿ ಗಾಂಧಿ ನಗರದಲ್ಲಿ ಹಬ್ಬಿತ್ತು.
ಇದು ಸಂಪೂರ್ಣ ತಪ್ಪು ಸುದ್ದಿ. ನಮ್ಮ ಕುಟುಂಬದ ಏಳಿಗೆಯನ್ನು ಸಹಿಸದ ಕೆಲವರು ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ. ದಯವಿಟ್ಟು ಇಂತಹ ಸುದ್ದಿಯನ್ನು ನಂಬೇಡಿ ಎಂದು ಭಾವಪರವಶರಾಗಿ ನುಡಿದರು ಶಿವಣ್ಣ.
ರಾಘವೇಂದ್ರ ರಾಜ್ ಕುಮಾರ್, ಪುನೀತ್ ಹೇಗೆಯೋ ಗಣೇಶ್ ಕೂಡಾ ನನಗೆ ಸಹೋದರನಿದ್ದಂತೆ. ಚಿತ್ರರಂಗವನ್ನು ಒಂದೇ ಕುಟುಂಬದಂತೆ ಕಾಣುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.