ವಿನಯಾ ಪ್ರಸಾದ್ ನಿರ್ದೆಶನದತ್ತ ಗಮನ
ಮದುವೆಯಾದ ನಂತರ ಚಿತ್ರರಂಗಕ್ಕೆ ಬಂದು, ಹೆಚ್ಚು ಕಡಿಮೆ ಎಲ್ಲ ಪ್ರಮುಖ ನಟರ ಜತೆ ನಟಿಸಿದ ಹೆಗ್ಗಳಿಕೆಗೆ ಪಾತ್ರವಾದ ವಿನಯಾ ಪ್ರಸಾದ್, ಈಗ ವಿನಯಾ ಪ್ರಕಾಶ್ ಆಗಿದ್ದು, ಇತ್ತೀಚೆಗೆ 'ನಂದಗೋಕುಲ' ಎನ್ನುವ ಈ ಟಿವಿಯವರ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಧಾರಾವಾಹಿಗಳಲ್ಲಿನ ಅಭಿನಯದ ನಂತರ, ವಿನಯಾ ಪ್ರಕಾಶ್ ನಟನೆಯಿಂದ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ಆದರೆ ಯಾವ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬುದು ಮಾತ್ರ ಇನ್ನೂ ಕುತೂಹಲದ ವಿಷಯ.
ಈಗಾಗಲೇ ಚಿತ್ರಕಥೆ, ಸಂಭಾಷಣೆ ಹೀಗೆ ವಿನಯ ಪ್ರಕಾಶ್ ಫುಲ್ಲಿ ಬಿಜಿಯಾಗಿದ್ದಾರೆ. ಬರೆಯುವ ಕೆಲಸ ಮುಗಿದ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಾರೆ.
ಈವರೆಗೆ ಧಾರಾವಾಹಿಗಳ ಮುಖೇನ ಮನೆಮಂದಿಯ ಅಕ್ಕರೆಯ ನಟಿಯಾಗಿದ್ದ ವಿನಯಾ ನಿರ್ದೇಶನಕ್ಕೆ ಇಳಿದಿರುವುದು ಗಾಂಧಿ ನಗರಿಯಲ್ಲಿ ಅಚ್ಚರಿಯಲ್ಲಿ ಕಾರಣವಾಗಿದೆ.
ಚಿತ್ರರಂಗಕ್ಕೆ ಬಂದು ದಶಕಗಳಿಗೂ ಹೆಚ್ಚು ಕಾಲ ಆಗಿದೆ. ಚಿತ್ರರಂಗಕ್ಕಾಗಿ ಏನಾದರೂ ಸಾಧನೆ ಮಾಡಬೇಕು. ಇಲ್ಲಿ ಹೊಸತನಕ್ಕೆ ಬಹಳಷ್ಟು ಅವಕಾಶವಿದೆ. ಆದರೆ ಅದಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು ಎಂಬ ಚಿಂತನೆಯ ವಿನಯಾಗೆ ಅವರ ಪತಿ ಪ್ರಕಾಶ್ ಪ್ರೇರಣೆಯಂತೆ.
ಅಂದ ಹಾಗೆ ಅವರು ನಿರ್ದೇಶಿಸುವ ಚಿತ್ರ ಕಲಾತ್ಮಕ ಚಿತ್ರ ಎಂಬ ಬಗ್ಗೆ ಸುದ್ದಿಯಿದೆ. ಆದರೆ ವಿನಯಾ ಸದ್ಯಕ್ಕಂತೂ ಬಾಯಿ ಬಿಡುತ್ತಿಲ್ಲ. ನಿರ್ದೇಶನದ ಬಿಜಿಯಲ್ಲಿ ಅಭಿನಯವನ್ನು ಬಿಡ್ತೀರಾ ಅಂದ್ರೆ ಇಲ್ಲಾ, ಇಲ್ಲಾ, ಅಭಿನಯಾನೂ ನನಗೆ ತೀರಾ ಮುಖ್ಯ. ಏಕೆಂದರೆ ಅಭಿನಯದ ಮುಖೇನ ನಾನು ಮೊದಲು ಗುರುತಿಸಿಕೊಂಡಿದ್ದು ಎನ್ನಲು ವಿನಯಾ ಮರೆಯೋಲ್ಲ.