ಜ್ಞಾನ ಜ್ಯೋತಿ ಸಿದ್ಧಗಂಗಾ
ಬೆಂಗಳೂರು (ಏಜೆನ್ಸಿ), ಬುಧವಾರ, 25 ಜುಲೈ 2007( 16:56 IST )
ತುಮಕೂರಿನ ಸಿದ್ಧಗಂಗಾಶ್ರೀಗಳೇ ಈ ಚಿತ್ರಕ್ಕೆ ಸ್ಫೂರ್ತಿ. ಚಿತ್ರದ ಹೆಸರು "ಜ್ಞಾನ ಜ್ಯೋತಿ ಸಿದ್ಧಗಂಗಾ". ಭರದಿಂದ ಚಿತ್ರೀಕರಣ ನಡೆಯುತ್ತಿರುವ ಇದರಲ್ಲಿ ಶ್ರೀಗಳ ಬದುಕಿನ ಸುತ್ತಲಿನ ವಿವಿಧ ಘಟನೆಗಳನ್ನು ಚಿತ್ರೀಕರಿಸಲಾಗುತ್ತಿದೆ.
ಶ್ರೀಗಳ ಸಮಾಜ ಸೇವೆ, ದಿನ ನಿತ್ಯ ಮಠದಲ್ಲಿ ನಡೆಯುವ ಅನ್ನದಾನ, ಅಭಯದಾನ, ವಿದ್ಯಾದಾನಗಳ ಬಗ್ಗೆ ಸವಿವರವಾಗಿ ದಾಖಲಿಸಿಕೊಳ್ಳಲಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಸುಂದರ ಗೀತೆಯೊಂದನ್ನು ಮಠದ ಆವರಣದಲ್ಲಿಯೇ ಚಿತ್ರೀಕರಿಸಲಾಯಿತು.
ಈ ಹಾಡಿನ ವಿಶೇಷತೆಯೆಂದರೆ ಗಿನ್ನಿಸ್ ದಾಖಲೆ ಖ್ಯಾತಿಯ ಮಾಸ್ಟರ್ ಕಿಶನ್, ಹಿರಿಯ ನಟ ದೊಡ್ಡಣ್ಣ ಹಾಗೂ ಸಾವಿರಾರು ಮಕ್ಕಳ ಸಮ್ಮುಖದಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಈ ಹಿಂದೆ ರವಿಚಂದ್ರನ್ ತಮ್ಮ ಶಾಂತಿ ಕ್ರಾಂತಿ ಚಿತ್ರದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಪುಟಾಣಿಗಳ ಸಮ್ಮುಖದ ಲ್ಲಿ ಚಿತ್ರೀಕರಣ ನಡೆಸಿದ್ದರು. ಅದಾದ ಬಳಿಕ ಜ್ಞಾನ ಜ್ಯೋತಿ ಸಿದ್ಧಗಂಗಾ ಚಿತ್ರದಲ್ಲಿ 20 ಸಾವಿರಕ್ಕೂ ಅಧಿಕ ಪುಟಾಣಿಗಳ ಸಮ್ಮುಖದಲ್ಲಿ ಚಿತ್ರೀಕರಿಸುವ ಮುಖೇನ ಹೊಸ ದಾಖಲೆ ಬರೆಯಲಾಗಿದೆ.
ಈ ಚಿತ್ರದಲ್ಲಿ ನಟಿ ತಾರಾ, ಶ್ರೀನಿವಾಸ ಮೂರ್ತಿ, ವಿನಯಾ ಪ್ರಸಾದ್, ಚೇತನ್, ರಮೇಶ್ ಭಟ್, ನಟಿಸುತ್ತಿದ್ದಾರೆ. ಮಂಜುನಾಥ್ ನಿರ್ದೇಶನದಲ್ಲಿ ನೃತ್ಯ ನಿರ್ದೇಶನ ಪೂರ್ಣಗೊಂಡಿದೆ.