ಕಲ್ಪನೆಗಳು ಅರಳುವುದೇ ಪತ್ರಗಳ ಪದಗಳಲ್ಲಿ, ಪದ ಪ್ರಯೋಗಗಳ ಭಾಷಾಲಂಕಾರದಲ್ಲಿ ಮನದಲ್ಲಿ ಮಿಡಿದದ್ದನ್ನು ಮಿಡಿದ ಹಾಗೆ ನಾಡಿ ಮಿಡಿತದ ತರಂಗಗಳಂತೆ ಉಭಯ ಕುಶಲೋಪರಿ ಸಾಂಪೃತದಿಂದ ಮೇಳೈಸಿ ಪುಟಾನುಗಟ್ಟಲೆ ಗೀಚುತ್ತಾ ಕೊನೆಗೆ ಇಂತಿ ನಿನ್ನ ಪ್ರೀತಿಯ...ಲ್ಲಿ
ಅನ್ನುತ್ತಾ ಪೆನ್ನನ್ನು ಕೆಳಗಿಳಿಸಿದಾಗಲೇ ತೃಪ್ತಿ. ಅದನ್ನೇ ಕಾನ್ಸೆಪ್ಟ್ ಆಗಿ ಒಂದು ಚಿತ್ರ ಕಥೆಯಾಗಿ ಮಾಡಿದರೆ ಹೇಗೆ? ಎಂಬ ಕಲ್ಪನಾ ಲಹರಿಯ ಹಂದರದ ವಸ್ತುವೇ ಇಂತಿ ನಿನ್ನ ಪ್ರೀತಿಯ ಸೂರಿಯ ಬಂಡವಾಳ.
ಇದೊಂದು ವಿಚಿತ್ರ. ಸ್ಪೆಷಲ್ ಕಾನ್ಸೆಪ್ಟ್ಗಳ ಕಡೆ ಜನ ನೋಡ್ತಾರೆ ಆದ್ರೆ ನಮ್ಮ ಜೊತೇನೇ ಇರೋದನ್ನ ಗುರ್ತಿಸೋದೇ ಇಲ್ಲ. ಇನ್ನೂ ಕೆಲವರಿರ್ತಾರೆ ಹೊಸದನ್ನ ಹುಡುಕುತ್ತ ಹೋಗಿ ಕೊನೆಗೆ ಹಳೆಯದಕ್ಕೇ ಜೋತು ಬೀಳ್ತಾರೆ ಹೇಗೆಂದ್ರೆ ಹೊಸ ರುಚಿ ಸ್ವಲ್ಪ ಡಿಫರೆಂಟಾಗಿರ್ಬೇಕು ಅಂತ.
ಹೋಟೆಲ್ ಹೋಟೆಲ್‌ಗಳನ್ನ ಸುತ್ತಿ ಕೊನೆಗ್ಯಾವುದೋ ಒಂದರಲ್ಲಿ ಹಳಸಲನ್ನು ತಿಂದು ಚಪ್ಪರಿಸಿಯೋ ಇಲ್ಲಾ ಕ್ಯಾಕರಿಸಿಯೋ ಬರುವುದು ನಮ್ಮ ಜಾಯಮಾನ. ಇಂತಹ ಗೊಂದಲಗಳ ಗೂಡಲ್ಲಿ ಸಿಲುಕಿದ ನಮಗೆ ಆಪ್ಯಾಯಮಾನವಾದ ವಸ್ತು ವಿಷಯಗಳು ಹೊರಬರುವುದೇ ಕಡಿಮೆ.
ನಮ್ಮ ಪ್ರೀತಿ, ಪ್ರೇಮ ಅದನ್ನ ಹಂಚಿಕೊಳ್ಳುವ ರೀತಿ ಸಹ ವಿಭಿನ್ನವಾದದ್ದೇ. ಆಧುನೀಕತೆಯ ಸೊಗಡಿನಲ್ಲಿ ಈ ಮೇಲ್, ಎಸ್ಎಂಎಸ್, ವೆಬ್ ಚಾಟ್ನಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳುವ ನಾವು ಎಂದಾದರು ನಮ್ಮ ಪತ್ರ ಪ್ರಣಯದ ಬಗ್ಗೆನೋ ಪತ್ರ ಸಂವಾದದ ಬಗ್ಗೆಯೋ ಚಿಂತಿಸಿದ್ದೇವಾ? ಎಂದು ಕೇಳಿದರು ಸೂರಿ.
ಸ್ನೇಹಿತನ ಜೀವನದ ಕೆಲವು ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಹೆಣೆದ ಚಿತ್ರಕಥೆಯಲ್ಲಿ ಸಾಮಾನ್ಯ ಜೀವನದ ಆಗುಹೋಗುಗಳು ಮೈದಳೆದಿವೆ. ಈ ಚಿತ್ರದಲ್ಲಿ ಆರು ಮುಖ್ಯ ಪಾತ್ರಗಳಿರುತ್ತವೆ. ಪತ್ರ ಮುಖೇನ ನಾಯಕ, ನಾಯಕಿ ಪ್ರೀತಿಯ ಬಲೆಯಲ್ಲಿ ಸಿಲುಕುವರೇ? ಎಂಬುದೇ ಚಿತ್ರದ ಥ್ರಿಲ್ಲಿಂಗ್ ಪಾಯಿಂಟ್.
ಕಂಠೀರವಾ ಸ್ಟುಡಿಯೋ ಎಂದಿನಂತಿರದೆ ಲಕಲಕ ಹೊಳೆಯುತ್ತಿತ್ತು. ಇಂತಿ ನಿನ್ನ ಸೂರಿ ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡಿದರು. ನಾಯಕ ಶ್ರೀನಗರ ಕಿಟ್ಟಿ (ಇದೀಗ ಕೃಷ್ಣ), ಮೇಕಪ್ ಮ್ಯಾನ್ ರಾಮಕೃಷ್ಣರ ಮಗಳಾದ ಸೋನು ಪರಿಚಯ ಇದರಿಂದಾಗಿದೆ ಜೊತೆಗೆ ಪ್ರಮುಖ ಪಾತ್ರದಲ್ಲಿ ಭಾವನಾ ನಟಿಸುತ್ತಿದ್ದಾರೆ.