ತಾರಾ, ವಿಜಯ್‌ಗೆ ಚಲನಚಿತ್ರ ಪ್ರಶಸ್ತಿ ಪ್ರದಾನ
ಬೆಂಗಳೂರು, ಶುಕ್ರವಾರ, 31 ಆಗಸ್ಟ್ 2007( 10:36 IST )
ಹಲವು ಅಡೆತಡೆಗಳ ಬಳಿಕ ಗುರುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಅತ್ಯುತ್ತಮ ನಟ ಪ್ರಶಸ್ತಿಯನ್ನು 'ದುನಿಯಾ' ಚಿತ್ರದ ನಾಯಕ ವಿಜಯ್ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಾರಾ ಸ್ವೀಕರಿಸಿದರು.
ಪ್ರಶಸ್ತಿ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕನ್ನಡ ಚಿತ್ರರಂಗ ಸಾಧನೆಯ ಹಾದಿಯಲ್ಲಿದೆ ಎಂದರಲ್ಲದೆ, ಮುಖ್ಯಮಂತ್ರಿಯಾಗಿದ್ದ 18 ತಿಂಗಳ ಅವಧಿಯಲ್ಲಿ ಮೂರು ಬಾರಿ ಚಿತ್ರರಂಗದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಅವಕಾಶದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗ ಇಂದು ತನ್ನ ಗತ ವೈಭವಕ್ಕೆ ಹಿಂತಿರುಗುತ್ತಿದ್ದು ಸಿನೆಮಾ ವಿತರಕನಾಗಿ ಉದ್ಯಮ ರಂಗ ಪ್ರವೇಶಿಸಿದ ನನಗೆ ಖುಷಿ ತಂದಿದೆ ಎಂದರು. ಡಾ.ರಾಜ್ ಪ್ರಶಸ್ತಿ ಪಡೆದ ಹಿರಿಯ ನಟಿ ಡಾ.ಎಂ.ಎನ್.ಲಕ್ಷ್ಮೀದೇವಿ ಹಾಗೂ ಶ್ರೀಮತಿ ಜಯಾ ಅವರಿಗೆ ಸರಕಾರದ ವತಿಯಿಂದ ಬಿಡಿಎ ಸೈಟ್ ನೀಡುವ ಭರವಸೆ ನೀಡಿದರು.
ಸಮಾರಂಭದಲ್ಲಿ ಸಚಿವ ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐಎಂ ವಿಠಲಮೂರ್ತಿ ಭಾಗವಹಿಸಿದ್ದರು.