ನಟಿ ಅಮೂಲ್ಯ ಅಭಿನಯ ವಿವಾದ:
ಬೆಂಗಳೂರು, ಸೋಮವಾರ, 1 ಅಕ್ಟೋಬರ್ 2007( 11:10 IST )
ಮತ್ತೆ ಮಹಿಳಾ ಆಯೋಗದ ನೋಟಿಸ್ ಬೆಂಗಳೂರು: ಚೆಲುವಿನ ಚಿತ್ತಾರ ಚಲನಚಿತ್ರದ ನಾಯಕಿ ಅಮೂಲ್ಯಾ ಅಪ್ರಾಪ್ತ ವಯಸ್ಸಿನವಳಾಗಿದ್ದು, ಆಕೆಯನ್ನು ಪ್ರಣಯ ದೃಶ್ಯಗಳಲ್ಲಿ ಚಿತ್ರೀಕರಿಸಿದ್ದನ್ನು ಪ್ರಶ್ನಿಸಿ ರಾಜ್ಯ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯೆ ಬಂದಿಲ್ಲವಾದ್ದರಿಂದ ಆಯೋಗ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ.
ಈಗಾಗಲೇ ಒಮ್ಮೆ ನೋಟಿಸ್ ನೀಡಲಾಗಿತ್ತು. ಮತ್ತೆ ಚೆಲುವಿನ ಚಿತ್ತಾರ ಚಿತ್ರದ ನಿರ್ಮಾಪಕ, ನಿರ್ದೇಶಕ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸೆನ್ಸಾರ್ ಮಂಡಳಿಗೆ ನೋಟೀಸ್ ಜಾರಿಯಾಗಿದೆ.
ಈ ಪ್ರಕರಣದ ವಿಚ್ಫರಣೆ ಮಹಿಳಾ ಆಯೋಗದಲ್ಲಿ ಅಕ್ಟೌಬರ್ 11ರಂದು ನಡೆಯಲಿದೆ. ಹಿಂದೆ ಜಾರಿಮಾಡಲಾಗಿದ್ದ ನೋಟಿಸ್ಗೆ ಯಾವ ಪ್ರತಿಕ್ರಿಯೆ ಬಂದಿರಲಿಲ್ಲ.
ಸೆ. 18ರಂದು ಆಯೋಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದಲ್ಲಿ ನೋಟಿಸ್ ಜಾರಿಮಾಡಿ ತಿಂಗಳಾಂತ್ಯದಲ್ಲಿ ವಿವರಣೆ ಕೋರಿತ್ತು.
ಅದಕ್ಕೆ ವಿವರಣೆ ಬಂದಿರಲಿಲ್ಲ. ತಮಗೆ ನೋಟಿಸ್ ತಲುಪಿಲ್ಲ ಎಂದು ಸಂಬಂಧಿತ ವ್ಯಕ್ತಿಗಳು ಹೇಳಿರುವ ಸುದ್ದಿ ಪತ್ರಿಕೆಗಳಲ್ಲಿ ಬಂದಿತ್ತು.
ಹಾಗಾಗಿ ಮತ್ತೆ ನೋಟಿಸ್ ಜಾರಿ ಮಾಡಿರುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ತಿಳಿಸಿದ್ದಾರೆ.