ಎಸ್.ನಾರಾಯಣ್, ವಿಜಯ್ 'ಧ್ವನಿ'ಯಾ ತಗಾದೆ ತಾರಕಕ್ಕೆ
ಬೆಂಗಳೂರು, ಮಂಗಳವಾರ, 23 ಅಕ್ಟೋಬರ್ 2007( 19:49 IST )
ಕನ್ನಡ ಚಿತ್ರರಂಗದ ಭರವಸೆಯ ನಟ "ದುನಿಯಾ" ಖ್ಯಾತಿಯ ವಿಜಯ್ ಹಾಗೂ ಹಿರಿಯ ನಿರ್ದೇಶಕ ಕಲಾಸಾಮ್ರಾಟ್ ಎಸ್.ನಾರಾಯಣ್ ಅವರ ನಡುವಿನ ಜಗಳ ತಾರಕಕ್ಕೇರಿದೆ.
ವಿಜಯ್‌ಗಾದ ಅನ್ಯಾಯದ ವಿರುದ್ಧ ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ಸಾವಿರಾರು ಅಭಿಮಾನಿಗಳು ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸಿದರು. ದುನಿಯಾ ಚಿತ್ರದಲ್ಲಿ ನಟಿಸಿ ಜನಮನ ಸೂರೆಗೂಂಡ ಯಶಸ್ಸಿನ ಉನ್ನತ ಶಿಖರಕ್ಕೇರಿದ ನಟ ವಿಜಯ್, ನಿರ್ದೇಶಕ ಎಸ್ ನಾರಾಯಣ್ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ.
ನಾರಾಯಣ್ ನಿರ್ದೇಶನದ "ಚಂಡ" ಸಿನಿಮಾಕ್ಕೆ ವಿಜಯ್ ಧ್ವನಿಗೆ ಬದಲು ಬೇರೆಯವರ ಧ್ವನಿಯನ್ನು ಡಬ್ಬಿಂಗ್ ಮಾಡಿಸಿ ಬಿಡುಗಡೆ ಮಾಡಲು ಹೊರಟಿರುವ ನಿರ್ದೇಶಕರ ವರ್ತನೆ ಈ ಅಸಮಾಧಾನಕ್ಕೆ ಪ್ರಮುಖ ಕಾರಣ.
ಇದನ್ನು ವಿರೋಧಿಸಿರುವ ವಿಜಯ್, ಡಬ್ಬಿಂಗನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕನ್ನಡಿಗರಿಗೆ ಬಿಟ್ಟಿದ್ದು. ರಾಜ್ಯ ಪ್ರಶಸ್ತಿಯನ್ನು ನನಗೆ ದೊರಕಿಸುವಂತೆ ಮಾಡಿದ ಅಭಿಮಾನಿ ಬಳಗದೊಂದಿಗೆ ನಾನು ನ್ಯಾಯ ಕೇಳ್ತಿನಿ. ಕಲೆಗೆ ನಾ ಎಂದೂ ಅವಮಾನ ಮಾಡಲಾರೆ. ಈ ವಿಷಯದ ಬಗ್ಗೆ ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ ನಡೆದರೆ ನಾನು ಜವಾಬ್ದಾರಿಯಲ್ಲ ಎಂದಿದ್ದಾರೆ.
ಇತ್ತ ಎಸ್. ನಾರಾಯಣ್ ಪ್ರತಿಕ್ರಿಯಿಸಿ, ಯಾವ ನಟರೂ ನನ್ನ ವಿರುದ್ದ ಧ್ವನಿ ಇಂದಿಗೂ ಎತ್ತಿಲ್ಲ, ಇದು ನನ್ನಲ್ಲಿ ಬೇಸರ ಹುಟ್ಟಿಸಿದೆ. ಅಭಿಮಾನ ಬಳಗ ನನಗೂ ಇದೆ, ಆದರೆ ಈ ರೀತಿಯ ವಾತಾವರಣ ಸೃಷ್ಟಿಸುವುದು ನನಗೆ ಇಷ್ಟವಿಲ್ಲ. ನಾನು ಯಾರಿಗೂ ಮೋಸ ಮಾಡಿಲ್ಲ. ಚಿತ್ರವನ್ನು ಬಿಡುಗಡೆ ಮಾಡಿಯೇ ತೀರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.