ಗಣೇಶ್‌ಗೆ ಶುರುವಾಯ್ತು ಆತಂಕ
ಬೆಂಗಳೂರು, ಬುಧವಾರ, 14 ನವೆಂಬರ್ 2007( 19:31 IST )
ಮುಂಗಾರುಮಳೆ, ಹುಡುಗಾಟ, ಚೆಲುವಿನ ಚಿತ್ತಾರ ಚಿತ್ರಗಳ ಭರ್ಜರಿ ಯಶಸ್ಸಿನಿಂದ ಖ್ಯಾತಿಯ ಉತ್ತುಂಗಕ್ಕೇರಿದ್ದ ಗಣೇಶ್ ಇದೀಗ ಕೃಷ್ಣ ಸೋಲಿನ ನಂತರ ಮುಖ ಕೆಂಪಗೆ ಮಾಡಿಕೊಂಡಿದ್ದಾರಂತೆ.
ರಮೇಶ್ ಯಾದವ್ ನಿರ್ಮಾಣದ `ಕೃಷ್ಣ ಎಲ್ಲರ ನೀರೀಕ್ಷೆಯಾಗಿತ್ತು. ಆದರೆ ಚಿತ್ರ ಹೇಳಿಕೊಳ್ಳುವ ಯಶಸ್ಸುಗಳಿಸಲಿಲ್ಲ. ಪೂಜಾಗಾಂಧಿ- ಜೆನ್ನಿಫರ್ ಕೊತ್ವಾಲ್ ಅವರಂತಹ ಮುದ್ದು ಮುಖದ ಬೆಡಗಿಯರಿದ್ದರೂ ಕೃಷ್ಣನ ಕೊಳಲಿನ ದನಿಗೆ ಪ್ರೇಕ್ಷಕ ತಲೆಯಾಡಿಸದಿರುವುದು ಗಣೇಶ್ ಆತಂಕಕ್ಕೆ ಕಾರಣವಾಗಿದೆಯಂತೆ.
ಇದೀಗ ಗಣೇಶ್ ಅಭಿನಯದ `ಅರಮನೆ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಕುತೂಹಲ ಹೆಚ್ಚಿದೆ. ಒಂದುವೇಳೆ ಈ ಚಿತ್ರವೂ ತೋಪೆದ್ದರೆ ಗೋಲ್ಡನ್ ಸ್ಟಾರ್ ಮಾರ್ಕೆಟ್ ಕುಸಿಯಿತೆಂದೇ ಅರ್ಥ ಎಂಬುದು ಗಾಂಧಿನಗರದ ಸಿನಿಪಂಡಿತರ ಲೆಕ್ಕಾಚಾರ.
ಅಂದಹಾಗೆ ಅರಮನೆ ಚಿತ್ರದ ನಿರ್ದೇಶಕ ನಾಗಶೇಖರ್. ಈ ಹಿಂದೆ ಹಲವು ಚಿತ್ರಗಳಲ್ಲಿ ಹಾಸ್ಯನಟನಾಗಿ ಮಿಂಚಿದ್ದ ನಾಗಶೇಖರ್ ಇದೇ ಪ್ರಥಮ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ನಾಗಶೇಖರ್ ಪಾಲಿಗೆ `ಅರಮನೆ ಮಹಾತ್ವಾಕಾಂಕ್ಷೆಯ ಚಿತ್ರ. ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ಸೋಲು ಕಂಡ ಗಂಡುಗಲಿ ಕೆ.ಮಂಜು ಚಿತ್ರದ ನಿರ್ಮಾಪಕರು.
ನಾಗಶೇಖರ್ ಪ್ರಕಾರ ಈಗಾಗಲೇ ಅರಮನೆಯ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆಯಂತೆ. ಮುಖ್ಯವಾಗಿ ಸದಾ ಹೊಸತನಕ್ಕೆ ತುಡಿಯುವ ನಾಗಶೇಖರ್ ಅವರದ್ದು ಕ್ರಿಯಾಶೀಲ ಮನಸ್ಸು ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ನಿರ್ದೇಶಕರಾಗಿಯಂತೂ ಅವರಿಗೆ ಅರಮನೆ ಅಗ್ನಿಪರೀಕ್ಷೆಯಾಗಿರುವುದಂತೂ ಸತ್ಯ.