ಬದಲಾಗಲಿಲ್ಲ ರಶ್ಮಿ ದುನಿಯಾ!
ಬೆಂಗಳೂರು, ಬುಧವಾರ, 14 ನವೆಂಬರ್ 2007( 20:24 IST )
`ದುನಿಯಾ ಚಿತ್ರ ಗೊತ್ತಲ್ಲಾ?
ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ `ದುನಿಯಾ ಎಲ್ಲರ ಲೆಕ್ಕಾಚಾರ, ನಿರೀಕ್ಷೆಯನ್ನು ಮೀರಿ ಭರ್ಜರಿ ಹಿಟ್ ಆದದ್ದು ಈಗ ಹಳೆಯ ಕಥೆ.
ದುನಿಯಾ ಚಿತ್ರದ ಗೆಲುವು ನಿರ್ದೇಶಕ ಸೂರಿ ಹಾಗೂ ನಾಯಕ ವಿಜಯ್ ಹಣೆಬರಹವನ್ನೇ ಬದಲು ಮಾಡಿತು. ಸೂರಿ ಇದೀಗ `ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ, ನಾಯಕ ವಿಜಯ್ ಮುಂದೆ ಮೂರ್ನಾಲ್ಕು ಚಿತ್ರಗಳಿವೆ.
ಎಲ್ಲವೂ ಸರಿಯಾಗಿದ್ದರೆ ದುನಿಯಾದ ನಾಯಕಿ ರಶ್ಮಿಯೂ ಈಗ ಬೇಡಿಕೆಯಲ್ಲಿರಬೇಕಿತ್ತು. ಆದರೆ ಯಶಸ್ಸಿನ ಅಲೆಯಲ್ಲಿದ್ದ ರಶ್ಮಿಗೆ ನಿರೀಕ್ಷೆಯಂತೆ ಅವಕಾಶಗಳು ಮಾತ್ರ ಸಿಕ್ಕಿಲ್ಲ.
ಸಾಯಿಪ್ರಕಾಶ್ ನಿರ್ದೇಶನದ `ಬಂಧು-ಬಳಗ ಚಿತ್ರದಲ್ಲಿ ರಶ್ಮಿಗೆ ಶಿವರಾಜ್ ಕುಮಾರ್ ತಂಗಿ ಪಾತ್ರ ಸಿಕ್ಕಿತ್ತಂತೆ. ಆರಂಭದಲ್ಲಿ ಇದಕ್ಕೆ ಒಪ್ಪಿಗೆ ನೀಡಿದ್ದ ರಶ್ಮಿ ಕೇಳಿದ್ದ ಸಂಭಾವನೆ ಎಷ್ಟಂತೆ ಗೊತ್ತೆ? ಹನ್ನೆರಡು ಲಕ್ಷ! ತಂಗಿಗೇ ಇಷ್ಟು ದುಬಾರಿಯಾದರೆ ಇನ್ನು ನಾಯಕಿ ಎಷ್ಟು ಕೇಳಿಯಾಳು ಎಂಬ ಆತಂಕವಿದ್ದರೂ ಕೊನೆಗೆ ಎಂಟು ಲಕ್ಷ ರೂ. ಸಂಭಾವನೆಗೆ ಒಪ್ಪಿಸಿದ್ದರಂತೆ ಸಾಯಿ.
ಆದರೆ ಆ ನಂತರವೇ ಆರಂಭವಾದದ್ದು ರಶ್ಮಿ ಮೇಡಂ ದಶಾವತಾರಗಳು. ಶೂಟಿಂಗ್ ಆರಂಭವಾಗುತ್ತಿದ್ದಂತೆಯೇ ಸಣ್ಣಗೆ ತಗಾದೆ ತೆಗೆದ ರಶ್ಮಿ `ನಾನ್ ತಂಗಿ ಪಾತ್ರ ಮಾಡೊಲ್ಲ.. ನಾನೇನಿದ್ರೂ ಹೀರೋಯಿನ್ನು.. ಅಂದರಂತೆ.
ಇದರ ಪರಿಣಾಮ ರಶ್ಮಿಗೆ ಗೇಟ್ಪಾಸ್ ಕೊಟ್ಟ ನಿರ್ಮಾಪಕರು ಆ ಪಾತ್ರಕ್ಕೆ ಮತ್ತೊಬ್ಬ ನಟಿಯನ್ನು ಆಯ್ಕೆ ಮಾಡಿಕೊಂಡರಂತೆ.
ಸದ್ಯಕ್ಕೆ ರಶ್ಮಿ ಮುಂದೆ ಅಂತಹ ಹೇಳಿಕೊಳ್ಳುವ ಚಿತ್ರಗಳಿಲ್ಲ. ಈಗ ತಾನೇ ಗಾಂಧಿನಗರಕ್ಕೆ ಎಂಟ್ರಿಯಾಗಿರುವ ರಮೇಶ್ ಸುರ್ವೆ ನಿರ್ದೇಶನದ `ಮಂದಾಕಿನಿ ಎಂಬ ಚಿತ್ರದಲ್ಲಿ ಮಾತ್ರ ಈಕೆಯೇ ನಾಯಕಿ. ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದ ಚೇತನ್ ಚಿತ್ರದ ನಾಯಕ.
ಮಂದಾಕಿನಿ ಚಿತ್ರದ ನಿರ್ಮಾಪಕರ ಪ್ರಕಾರ ಹದಿನಾರರಿಂದ ಹದಿನೆಂಟರ ಯುವತಿಯೊಬ್ಬಳ ಬದುಕಿನ ವಿವಿಧ ಹಂತದಲ್ಲಿ ಬರುವ ಮಾನಸಿಕ ಸಮಸ್ಯೆಗಳು, ಬುದ್ದಿವಂತಿಕೆ, ಛಲ ಹಾಗೂ ಅವಳ ಹಠದ ಹಿನ್ನೆಲೆಯಲ್ಲಿ ಕಥೆಯನ್ನು ರೂಪಿಸಲಾಗಿದೆಯಂತೆ.
ಒಟ್ಟಿನಲ್ಲಿ ರಶ್ಮಿ ಇನ್ನಾದರೂ ತನ್ನ ದಶಾವತಾರಗಳನ್ನು ಬಿಟ್ಟು ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಭವಿಷ್ಯದಲ್ಲಿ `ದುನಿಯಾ ಕಷ್ಟ..ಕಷ್ಟ...