ಹೀಗೊಂದು `ಸಾಚಾ ಚಿತ್ರ !
ಬೆಂಗಳೂರು, ಗುರುವಾರ, 15 ನವೆಂಬರ್ 2007( 18:38 IST )
ಮುಂಗಾರು ಮಳೆ, ದುನಿಯಾ ಚಿತ್ರಗಳ ಭರ್ಜರಿ ಗೆಲುವಿನಿಂದ ಗಾಂಧಿನಗರದ ಚಿತ್ರಣವೇ ಬದಲಾಗಿದೆ.
ಹೊಸಾ ನಿರ್ಮಾಪಕರು, ನಿರ್ದೇಶಕರು, ನಟ ನಟಿಯರ ಹಿಂಡೇ ಗಾಂಧಿಗರಕ್ಕೆ ಬಂದು ಚಿತ್ರಗಳ ತಯಾರಿಯಲ್ಲಿ ತೊಡಗಿದೆ. ಈ ಪೈಕಿ ಹೊಸಾ ನಿರ್ಮಾಪಕರಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಗಳೇ ಹೆಚ್ಚಿರೋದು ಮತ್ತೊಂದು ವಿಶೇಷ.
ಹೊಸಾ ಹೊಸಾ ಪ್ರಯೋಗಗಳ ಹೆಸರಿನಲ್ಲಿ ಸಿನಿಮಾಗಳಿಗೆ ವಿಚಿತ್ರ ಟೈಟಲ್ ಇಡುವುದೂ ಈಗ ಸಾಮಾನ್ಯವಾಗಿದೆ. `ದುನಿಯಾ ಗೆಲುವಿನಿಂದ ಪ್ರೇರಿತರಾದ ನಿರ್ಮಾಪಕರೊಬ್ಬರು ತಮ್ಮ ಚಿತ್ರಕ್ಕೆ `ಜಮಾನಾ ಅಂತ ಹೆಸರಿಟ್ಟಿದ್ದಾರೆ.
ಮುಂಗಾರುಮಳೆ ನಂತರ `ಮುಂಗಾರು ಮಳೆ ಭಾಗ-2ಳಿ `ಹನಿ ಹನಿ `ಮೊಗ್ಗಿನ ಮನಸ್ಸು ಎಂಬ ಟೈಟಲ್ ಸಿನಿಮಾಗಳು ಸೆಟ್ಟೇರಿವೆ.ಇವೆಲ್ಲಾ ಬದಿಗಿರಲಿ ಅಂದ್ರೆ ಈ ಟೈಟಲ್ ನೋಡಿ. ಚಿತ್ರದ ಹೆಸರು `ಸೈಕೋ ಅಂತೆ !
ಇದರ ನಡುವೆಯೇ `ದುರಹಂಕಾರಿ ಎಂಬ ಮತ್ತೊಂದು ಚಿತ್ರ ಸೆಟ್ಟೇರಿದೆ. ಈ ಚಿತ್ರದ ಕಥೆ, ಚಿತ್ರಕಥೆ, ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕ ಎಲ್ಲವೂ ಒಬ್ಬರದ್ದೇ. ಬಹುಶಃ ಪ್ರೇಕ್ಷಕ ಕೂಡ ಅವರೊಬ್ಬರೇ ಇರಬಹುದೆ ಎಂಬ ಕೆಟ್ಟ ಕುತೂಹಲ ಸಿನಿಮಾ ಪತ್ರಕರ್ತರದ್ದು !!
ಈ ನಡುವೆಯೇ ಮೊನ್ನೆ ಮೊನ್ನೆ `ಬಂದೇ ಬರ್ತಾಳೆ ಎಂಬ ಮತ್ತೊಂದು ಚಿತ್ರ ಸೆಟ್ಟೇರಿದೆ. ಶೂಟಿಂಗ್ ಮುಗಿಸಿ ಈ ಚಿತ್ರ ಥಿಯೇಟರ್‌ಗೆ ಬಂದೇ ಬರುತ್ತಾ ಅನ್ನೋದು ಇನ್ನೂ ಖಚಿತವಾಗಿಲ್ಲ!! `ಹೈಸ್ಕೂಲು, `ಪಿಯುಸಿ ಎಂಬ ಇನ್ನೆರಡು ಚಿತ್ರಗಳಿಗೆ ಮುಹೂರ್ತ ನಡೆದು ತುಂಬಾ ದಿನಗಳಾಗಿವೆ.
ಮತ್ತೊಂದು ಹೊಸಬರ ತಂಡ `ಸಾಚಾ ಎಂಬ ಚಿತ್ರಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಹಾಡುಗಳ ಧ್ವನಿಮುದ್ರಣ ಕಾರ್ಯ ಪೂರ್ಣಗೊಂಡಿದೆ. ಯಾವುದು ಸಾಚಾ ಯಾವುದು ಸುಳ್ಳು ಅನ್ನೋದನ್ನ ಮಾತ್ರ ಕನ್ನಡದ ಪ್ರೇಕ್ಷಕನೇ ನಿರ್ಧರಿಸಬೇಕು!!