ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರರಂಗದ ಸಮಸ್ಯೆಯತ್ತ ಕಣ್ಣು ಹಾಯಿಸದ ಕುಮಾರ: ದೂರು
ಸುದ್ದಿ/ಗಾಸಿಪ್
Feedback Print Bookmark and Share
 
ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಮೇಲೆ ಟೀಕಾಪ್ರಹಾರ ನಡೆಯುತ್ತಿರುವಾಗಲೇ ಚಿತ್ರರಂಗದವರಿಂದಲೂ ಮಾಜಿ ಮುಖ್ಯಮಂತ್ರಿ ವಿರುದ್ಧ ದೂರುಗಳು ಕೇಳಿಬರುತ್ತಿವೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೂಲತಃ ಚಿತ್ರೋದ್ಯಮಿಯಾಗಿದ್ದವರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳೆಲ್ಲವೂ ಪರಿಹಾರವಾಗುತ್ತವೆ ಎಂದು ಚಿತ್ರೋದ್ಯಮದವರೆಲ್ಲರೂ ನಂಬಿದ್ದರು.

ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಎರಡೂ ಕಡೆಯವರ ಪರಸ್ಪರ ಅಸಹಕಾರ. ಕುಮಾರಸ್ವಾಮಿ ಅವರು ತಾವಾಗಿಯೇ ಆಸಕ್ತಿ ವಹಿಸಿ ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸಬಹುದಾಗಿತ್ತು.

ಆದರೆ ಅವರು ಆ ಕೆಲಸಕ್ಕೆ ಮುಂದಾಗಲಿಲ್ಲ. ಚಿತ್ರರಂಗದ ಪ್ರಮುಖರೂ ಸಹಾ ಕುಮಾರಸ್ವಾಮಿ ಅವರ ಬಳಿ ಹೋಗಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬಹುದಿತ್ತು. ಅದೂ ಆಗಲಿಲ್ಲ. ವರ್ಷಕ್ಕೆ 150 ಸಿನಿಮಾಗಳು ಸೆಟ್ಟೇರುವ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಬೇಕಾದ ಮೂಲಸೌಕರ್ಯಗಳು ಇಲ್ಲಿ ಇಲ್ಲ. ಇರುವ ನಾಲ್ಕು ಸ್ಟುಡಿಯೋಗಳ 4 ಫ್ಲೋರ್‌ಗಳು ಮಾತ್ರ ಚಿತ್ರೀಕರಣಕ್ಕೆ ಲಭ್ಯ. ಉಳಿದ ಫ್ಲೋರ್‌ಗಳನ್ನು ಟಿವಿ. ಚಾನೆಲ್‌ಗಳು ಬಾಡಿಗೆಗೆ ಪಡೆದಿವೆ. ಹೀಗೆ ನಿರ್ಮಾಪಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಹಾಗೇ ಉಳಿದಿವೆ.

ವಿಧಾನಸೌಧ, ಲಾಲ್‌ಬಾಗ್, ಕಬ್ಬನ್‌ಪಾರ್ಕ್, ಹೈಕೋರ್ಟ್, ಎಲ್ಲೂ ಚಿತ್ರೀಕರಣ ಮಾಡುವ ಹಾಗಿಲ್ಲ. ಹೊಸದಾಗಿ ರೈಲ್ವೇ ನಿಲ್ದಾಣದ ಸೆಟ್ ಹಾಕುವಷ್ಟು ಜಾಗವೂ ಬೆಂಗಳೂರು ನಗರದಲ್ಲಿ ಇಲ್ಲ. ರೈಲು ನಿಲ್ದಾಣದಲ್ಲಿ ಚಿತ್ರೀಕರಣಮಾಡೋಣವೆಂದರೆ ಹತ್ತರಷ್ಟು ದುಡ್ಡು ಕೇಳುತ್ತಾರೆ ಎಂದು ನಿರ್ಮಾಪಕರು ಹೇಳುತ್ತಾರೆ.

ಕನ್ನಡ ಚಿತ್ರೋದ್ಯಮದ ಗಣ್ಯರು ಒಟ್ಟಾಗಿ ಬಂದು ಮಾತುಕತೆ ನಡೆಸಿದರೆ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥ್ಯ ಮಾಡಬಹುದು ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹೇಳಿದ್ದರು. ಆದರೆ ಚಿತ್ರೋದ್ಯಮದ ಒಳಜಗಳದಿಂದಾಗಿ ಅದು ಸಾಧ್ಯವಾಗಲಿಲ್ಲ. ಒಂದು ನಿಯೋಗ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದು ನಿಜ. ನಿಯೋಗದಲ್ಲಿ ಬಂದವರು ಕೇಳಿದ್ದು, ರೀಮೇಕ್ ಚಿತ್ರಗಳಿಗೂ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು ಎನ್ನುವುದಾಗಿತ್ತು. ಮುಖ್ಯಮಂತ್ರಿಗಳು ತಮ್ಮ ಬೇಡಿಕೆಗೆ ಒಪ್ಪಿಕೊಂಡಿದ್ದಾರೆ ಎಂದು ನಿಯೋಗದ ಸದಸ್ಯರು ಹೇಳಿಕೊಂಡಿದ್ದರೂ ಆ ಭರವಸೆ ಈಡೇರಲಿಲ್ಲ.