ಕರ್ನಾಟಕದಲ್ಲಿ ಚಿತ್ರೀಕರಣ ಕಷ್ಟ..ಕಷ್ಟ..!
ಬೆಂಗಳೂರು, ಮಂಗಳವಾರ, 4 ಡಿಸೆಂಬರ್ 2007( 11:08 IST )
ಬೇರೆ ರಾಜ್ಯದಲ್ಲಿ ದೂರದ ಊರಲ್ಲಿ ಷೂಟಿಂಗ್ ನಡೆಸಬೇಕು ಎಂದು ಸಜ್ಜಾದ ನಿರ್ಮಾಪಕ ಕಂ ನಿರ್ದೇಶಕರೊಬ್ಬರಿಗೆ ಅಲ್ಲಿ ಏನೇನು ಕಷ್ಟ ಕಾದಿದೆಯೋ ಎಂಬ ಭೀತಿ ಇತ್ತು.
ಆದರೆ ಅಲ್ಲಿಗೆ ಹೋದಮೇಲೆ ಗೊತ್ತಾಯಿತು. ಅದು ಸ್ವರ್ಗದ ಸಮಾನ ಎಂದು. ಅಲ್ಲಿಯ ಸರ್ಕಾರದ ಅಧಿಕಾರಿಗಳು ಹಾಗೂ ಜನರು ಕೊಟ್ಟ ಸಹಕಾರವನ್ನು ಬೆಂಗಳೂರಿಗೆ ಬಂದನಂತರವೂ ನೆನಪಿಸಿಕೊಳ್ಳುತ್ತಿದ್ದರು.
ಅಲ್ಲಿ ಚಿತ್ರೀಕರಣ ಎಂದರೆ ಸ್ವರ್ಗದಲ್ಲಿ ಓಡಾಡಿದಂತೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಅವರು ಒಂದು ಹಂತದ ಷೂಟಿಂಗ್ ಕಾಶ್ಮೀರದಲ್ಲಿ ಮುಗಿಸಿಕೊಂಡು ಇಲ್ಲಿಗೆ ಬಂದರು. ಇಲ್ಲಿ ಸರ್ಕಾರದ ಪ್ರಕಾರ ಚಿತ್ರಗಳ ಚಿತ್ರೀಕರಣಕ್ಕೆ ಏಕ ಗವಾಕ್ಷಿ ವ್ಯವಸ್ಥೆ ಇದೆ. ಆದರೆ ಆ ವ್ಯವಸ್ಥೆ ಸರಿಯಾಗಿ ಜಾರಿಗೆ ಬಂದಿಲ್ಲ ಎನ್ನುವುದು ಚಿತ್ರರಂಗದವರ ಕೊರಗು.
ಬೆಂಗಳೂರಿನ ಲಾಲ್ಬಾಗ್, ವಿಧಾನಸೌಧ, ಕಬ್ಬನ್‌ಪಾರ್ಕ್ ಹೀಗೆ ಯಾವುದೂ ಷೂಟಿಂಗ್‌ಗೆ ದೊರೆಯುವುದಿಲ್ಲ. ಇಲ್ಲಿ ಚಿತ್ರೀಕರಣ ಮಾಡುವುದಕ್ಕೆ ಸರಿಯಾದ ಕ್ಯಾಮರಾಗಳಿಲ್ಲ. ಚಿತ್ರೀಕರಣಕ್ಕೆ ಜಾಗಗಳಿಲ್ಲ. ಚೆನ್ನೈಗೆ ಹೋದ ನಿರ್ಮಾಪಕರಿಗೆ ಕನ್ನಡ ದ್ರೋಹಿ ಪಟ್ಟ ಗ್ಯಾರಂಟಿ.
ಬೆಂಗಳೂರಿನಲ್ಲಿ ಇತ್ತೀಚಿಗೆ ಚಿತ್ರಗಳ ಷೂಟಿಂಗ್‌ಗೆ ಸ್ಟುಡಿಯೋ ಸಿಗುತ್ತಿಲ್ಲ. ಸ್ಟುಡಿಯೋಗಳಲ್ಲಿರುವ ಫ್ಲೋರ್‌ಗಳನ್ನು ಟಿವಿ ಚಾನೆಲ್‌ಗಳು ಆಕ್ರಮಿಸಿಕೊಂಡುಬಿಟ್ಟಿವೆ.
ವರ್ಷಕ್ಕೆ 140 ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂದು ಜಂಭ ಕೊಚ್ಚಿಕೊಳ್ಳವುದಕ್ಕೆ ಮೊದಲು ಚಿತ್ರ ನಿರ್ಮಾಣಕ್ಕೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಿಕೊಳ್ಳುವ ನಿಟ್ಟಿನಲ್ಲಿ ಚಿತ್ರರಂಗದ ಮುಖಂಡರೇ ಮುಂದಾಗಬೇಕಿದೆ.