ನಾನೇನು ಹಾಸ್ಯ ನಟನಲ್ಲ: ರವಿಶಂಕರ್
ಬೆಂಗಳೂರು, ಗುರುವಾರ, 6 ಡಿಸೆಂಬರ್ 2007( 18:29 IST )
ಈಟಿವಿಯ ಸಿಲ್ಲಿ ಲಲ್ಲಿ ಧಾರಾವಾಹಿ ಖ್ಯಾತಿಯ ಡಾ. ವಿಠಲ್‌ರಾವ್ ಎಂದರೆ ಯಾರಿಗೆ ನಗು ಬರದು ಹೇಳಿ.
ಮನೆ ಮಾತಾಗಿದ್ದ ಆ ಸೀರಿಯಲ್ ಹೀರೋ ರವಿಶಂಕರ್ ಈಗ ಒಂದು ಸಿನೆಮಾದ ಹೀರೋ. ತಮ್ಮ ಹಾಸ್ಯ ಅಭಿನಯದಿಂದಲೇ ಟಿವಿ ಪ್ರೇಕ್ಷಕರಲ್ಲಿ ಗುರುತಿಸಿಕೊಂಡಿರುವ ರವಿಶಂಕರ್‌ಗೆ ತನ್ನನ್ನು ಹಾಸ್ಯನಟ ಎಂದು ಕರೆದರೆ ಬೇಜಾರು.
ಅವರು ಸಿಲ್ಲಿ ಲಲ್ಲಿಯಲ್ಲಿ ನಟಿಸುವಾಗಲೇ ಸಾಕಷ್ಟು ಸಿನೆಮಾ ಅವಕಾಶಗಳು ಬಂದವು. ಆದರೆ ಅವು ರೀಮೇಕ್ ಅನ್ನೋ ಕಾರಣಕ್ಕೆ ತಾನು ತಿರಸ್ಕರಿಸಿದ್ದೆ ಅಂತಾರೆ ರವಿಶಂಕರ್.
ಕಡೆಗೆ ಪಯಣ ಚಿತ್ರದಲ್ಲಿ ಅವರು ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ. ಅವರ ಪ್ರಕಾರ ಒಳ್ಳೆ ನಟ ಹಾಗೂ ಕೆಟ್ಟ ನಟ ಮಾತ್ರ ಇರ್ತಾರೆ. ಒಳ್ಳೆ ನಟ ಎಂದು ತಾವು ನಟಿಸಿದ ಸೀರಿಯಲ್ ಮೂಲಕ ಸಾಬೀತಾಗಿದೆ.
ಹಾಗಾಗಿ ತಮ್ಮನ್ನು ಹಾಸ್ಯನಟ ಎಂದು ಕರೆಯಬಾರದು ಎನ್ನುವುದು ಅವರ ರಿಕ್ವೆಸ್ಟ್. ಪಯಣದಲ್ಲೂ ತಮ್ಮ ಪಾತ್ರಕ್ಕೆ ಹಾಸ್ಯವಿದೆ. ಆದರೆ ನವಿರಾಗಿರುತ್ತದೆ. ಸಂಗೀತ ಅಭ್ಯಾಸ ಮಾಡಲು ಬಂದು ನಟರಾದ ರವಿಶಂಕರ್‌ಗೆ ಸಂಗೀತವೂ ಒಲಿದಿದೆ.
ರವಿಶಂಕರ್‌ಗೆ ತಮ್ಮ ಹಿಂದಿನ ಬದುಕಿನ ಬಗ್ಗೆ ಹೇಳಿಕೊಳ್ಳಲು ಇಷ್ಟವಿಲ್ಲ. ತಾನು ಬಡವನಾಗಿದ್ದು ನಂತರ ಈ ಸ್ಟೇಜಿಗೆ ಬಂದೆ ಎಂದು ಟಿವಿಯ ಸಂದರ್ಶನದಲ್ಲಿ ಕೆಲ ನಟನಟಿಯರು ಹೇಳುವುದುಂಟು. ಅದರ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುವುದೂ ಉಂಟು. ಅಂಥ ವರ್ತನೆ ತಮಗೆ ಅಸಹ್ಯ ಉಂಟುಮಾಡುತ್ತದೆ ಎನ್ನುತ್ತಾರೆ ಅವರು.