ಕನ್ನಡ ಕಿರುತೆರೆಗೆ ರಜತೋತ್ಸವ ಸಂಭ್ರಮ
ಬೆಂಗಳೂರು, ಗುರುವಾರ, 6 ಡಿಸೆಂಬರ್ 2007( 18:33 IST )
ದೂರದರ್ಶನವೆಂಬ ಒಂದೇ ಚಾನೆಲ್ ಇದ್ದ ಕಾಲದಲ್ಲಿ ಆರಂಭವಾಗಿ ನಂತರ ಒಂದೊಂದಾಗಿ ಬಂದ ಟಿವಿ ವಾಹಿನಿಗಳಿಂದಾಗಿ ಸೀರಿಯಲ್‌ಗಳ ಸಂಖ್ಯೆ ಹೆಚ್ಚಾಗಿ ಕಿರುತೆರೆ ಕಲಾವಿದರಿಗೆ ಡಿಮ್ಯಾಂಡ್ ಉಂಟುಮಾಡಿದ್ದು ಇತಿಹಾಸವೇ.
ಈಗ ಈ ಕಿರುತೆರೆಗೆ 25 ವರ್ಷ. ಅಂದರೆ ರಜತೋತ್ಸವ ವರ್ಷ. ಆಚರಣೆಯನ್ನು ವರ್ಷವಿಡಿ ಅದ್ದೂರಿಯಾಗೆ ಆಚರಿಸಬೇಕು ಎನ್ನುತ್ತಾರೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ಕೆಟಿವಿಎ) ವಕ್ತಾರ ಬಿ.ಸುರೇಶ್.
ರಜತೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭ ಈ ತಿಂಗಳ 9ರಂದು ಸಂಜೆ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಎಲ್ಲಾ ಟಿವಿ ವಾಹಿನಿಗಳ ಮುಖ್ಯಸ್ಥರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸರ್ಕಾರದ ಉನ್ನತ ಅಧಿಕಾರಿಗಳಾಗಿ ಐ.ಎಂ.ವಿಠ್ಠಲಮೂರ್ತಿ, ಕೆ.ವಿ.ರವೀಂದ್ರನಾಥ್ ಟ್ಯಾಗೋರ್ ಹಾಗೂ ಮುಖ್ಯಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ.
ಈ ಸಮಾರಂಭದ ನಂತರ ಪ್ರತಿ ತಿಂಗಳಲ್ಲಿ ನಿಗದಿತ ದಿನಾಂಕದಂದು ಬೆಂಗಳೂರಿನಿಂದ ಹೊರಗೆ ಯಾವುದಾದರೂ ಒಂದು ಜಿಲ್ಲಾ ಕೇಂದ್ರದಲ್ಲಿ ಕೆಟಿವಿಎ ವತಿಯಿಂದ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಛಾಯಾಚಿತ್ರ ಪ್ರದರ್ಶನ, ಮನರಂಜನಾ ಕಾರ್ಯಕ್ರಮವಿರುತ್ತದೆ.
ಒಟ್ಟು 10 ಜಿಲ್ಲಾ ಕೇಂದ್ರಗಳಲ್ಲಿ ಸಂಘ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಮುಂದಿನ ತಿಂಗಳು ಬಾಗಲಕೋಟೆಯಲ್ಲೊಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.