ವಿಜಯ್‌ಗೆ ಸುತ್ತಿಕೊಂಡ ಮತ್ತೊಂದು ವಿವಾದ
ಬೆಂಗಳೂರು, ಗುರುವಾರ, 6 ಡಿಸೆಂಬರ್ 2007( 18:35 IST )
ದುನಿಯಾ ಫೇಮ್ ವಿಜಯ್ ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕುತ್ತಲೇ ಇದ್ದಾರೆ. ಚಂಡ ವಿವಾದ ತಣ್ಣಗಾದ ಮೇಲೆ ಇನ್ನೊಂದು ವದಂತಿ ಎನ್ನಿ ಅಥವಾ ವಿವಾದ ಎನ್ನಿ ಮತ್ತೊಂದು ತರಹದ ಸುದ್ದಿಯಲ್ಲಿ ವಿಜಯ್ ಇದ್ದಾರೆ.
ವಿಜಯ್ ಹಾಗೂ ಶುಭಾ ಪೂಜಾ ಮದುವೆಯಾಗಿದ್ದಾರೆ ಎನ್ನುವುದು ಈ ಸುದ್ದಿಯ ಜಿಸ್ಟ್. ಈ ಸುದ್ದಿಗಳಿಂದ ವಿಚಲಿತರಾಗದ ಶುಭಾ ಪತ್ರಿಕಾಗೋಷ್ಠಿ ಕರೆದು ಅದರ ವಿವರಣೆ ನೀಡಿಯೇ ಬಿಟ್ಟರು. ಚಂಡ ಚಿತ್ರದಲ್ಲಿ ತಾನು ಎಲ್ಲರೊಂದಿಗೆ ಆತ್ಮೀಯವಾಗಿ ಇರುತ್ತಿದ್ದು ನಿಜ. ಹಾಗೆ ಆತ್ಮೀಯವಾಗಿರುವುದೇ ತಪ್ಪು ಎನ್ನುವಂತಾಗಿದೆ ಈಗ ಹರಡಿರುವ ಸುದ್ದಿಯಿಂದ. ಇನ್ನು ಮುಂದೆ ಹೀಗಿರುವುದರ ಕುರಿತು ಯೋಚನೆ ಮಾಡುವಂತಾಗಿದೆ ಎನ್ನುತ್ತಾರೆ ಶುಭಾ.
ವಿಜಯ್ ಒಳ್ಳೆಯ ಮನುಷ್ಯ. ನಟನೆ ವಿಷಯದಲ್ಲಿ ಅವರಿಂದ ಸಾಕಷ್ಟು ತಾವು ಕಲಿತಿದ್ದಾಗಿ ಹೇಳುತ್ತಾರೆ. ಚಂಡದಲ್ಲಿ ತಾನು ಮಾಡಿದ ಪಾತ್ರಕ್ಕೆ ಗೆಳತಿಯರಿಂದ ಶಹಬ್ಬಾಷ್‌ಗಿರಿ ಲಭಿಸಿದೆಯಂತೆ. ಆದರೂ ಆ ಪಾತ್ರದಲ್ಲಿ ಅಭಿನಯಕ್ಕೆ ಅವಕಾಶ ಇಲ್ಲದಂತಾಯಿತು ಎನ್ನುವುದು ಶುಭಾ ಅವರ ಕೊರಗು.