ಹೊಸ ಅಲೆ ಚಿತ್ರ ಎನ್ನುವುದೇ ಇಲ್ಲ: ಎಂ.ಎಸ್.ಸತ್ಯು
ಬೆಂಗಳೂರು, ಗುರುವಾರ, 6 ಡಿಸೆಂಬರ್ 2007( 18:37 IST )
ಖ್ಯಾತ ಕನ್ನಡ ನಟ, ನಿರ್ದೇಶಕ ಹಾಗೂ ಲೇಖಕರೊಬ್ಬರನ್ನು ಟೀಕಿಸಿ ಸುದ್ದಿಯಲ್ಲಿದ್ದ ಎಂ.ಎಸ್. ಸತ್ಯು ಅವರ ಬಗ್ಗೆ ಈಗಿನ ಪೀಳಿಗೆಯ ಚಿತ್ರ ಪ್ರೇಮಿಗಳಿಗೆ ಗೊತ್ತೇ ಇಲ್ಲ ಎನ್ನಬಹುದು.
ಗರಂ ಹವಾ, ಬರ, ಕನ್ನೇಶ್ವರ ರಾಮ ಮುಂತಾದ ಚಿತ್ರಗಳ ಮೂಲಕ ರಾಷ್ಟ್ತ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಎಂ.ಎಸ್. ಸತ್ಯು ಮೂಲತಃ ರಂಗತಜ್ಞ.
ಹಿಂದಿ, ಕನ್ನಡಗಳಲ್ಲಿ ಆಗಾಗ ಚಿತ್ರ ರೂಪಿಸುವ ಸತ್ಯು ಪ್ರಕಾರ ಹೊಸ ಅಲೆ ಚಿತ್ರ ಎನ್ನುವುದೇ ಇಲ್ಲ. ಹೊಸ ಅಲೆ ಚಿತ್ರಗಳೆಂದು ಬಂದ ಹಲವಾರು ಚಿತ್ರಗಳು ಹಣಕಾಸಿನ ವಿಚಾರದಲ್ಲಿ ಯಶಸ್ಸು ಕಂಡಿಲ್ಲ. ಚಿತ್ರ ಜನಪ್ರಿಯವಾಗದಿದ್ದರೆ ಅದರಿಂದ ಪ್ರಯೋಜನವಿಲ್ಲ ಎನ್ನವುದು ಅವರ ಖಚಿತ ಅಭಿಪ್ರಾಯ.
ಹೊಸ ಅಲೆ ಚಿತ್ರ ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಬಂದ ಸಂಸ್ಕಾರ ಚಿತ್ರದ ನಂತರ ಹಲವಾರು ಚಿತ್ರಗಳು ಬಂದವು. ಹಲವು ಚಿತ್ರಗಳಿಗೆ ಪ್ರಶಸ್ತಿಗಳೇನೋ ದೊರೆತವು. ಆದರೆ ಹಣ ಗಳಿಸುವಲ್ಲಿ ಸೋತವು.
70ರ ದಶಕದಲ್ಲಿ ಹೊಸ ಅಲೆ ಚಿತ್ರ ಟ್ರೆಂಡ್ ಇತ್ತು. ಈಗ ಹೊಸ ನಾಯಕರ ಚಿತ್ರಗಳ ಮತ್ತೊಂದು ಟ್ರೆಂಡ್. ಹೀಗೆ ಪ್ರೇಕ್ಷಕರ ಅಭಿರುಚಿ ಬದಲಾಗುತ್ತಲೇ ಇರುತ್ತದೆ ಎಂಬುದು ಎಂ.ಎಸ್.ಸತ್ಯು ಅವರು ಒಂದು ಅಭಿಪ್ರಾಯ.
ಅರ್ಥವಿಲ್ಲದ ಹಿಂಸಾಚಾರ, ಅಗತ್ಯವಿಲ್ಲದಿದ್ದರೂ ಕಾಮ ಪ್ರಚೋದಕ ಸನ್ನಿವೇಶಗಳನ್ನು ತುರುಕುವ ಚಿತ್ರಗಳಿಗಿಂತ ಭಿನ್ನವಾಗಿ ರೂಪುಗೊಳ್ಳುವ ಚಿತ್ರಗಳನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ ಎನ್ನುವುದನ್ನು ಬಹಳಷ್ಟು ಚಿತ್ರಗಳು ಸಾಬೀತುಪಡಿಸಿವೆ ಎನ್ನುತ್ತಾರೆ ಅವರು.