ಯುವ ಚಿತ್ರಕ್ಕೆ ಶೂಟಿಂಗ್
ಬೆಂಗಳೂರು, ಸೋಮವಾರ, 10 ಡಿಸೆಂಬರ್ 2007( 19:12 IST )
ಎಂದೆಂದಿಗೂ ಹೊಸ ಕಥಾ ವಸ್ತುವಾಗಿ ಮುಂದುವರೆಯುತ್ತಿರುವ ಪ್ರೀತಿ ಸಬ್ಜೆಕ್ಟ್ನಿಂದ ಮತ್ತೊಂದು ಚಿತ್ರ ರೂಪುಗೊಳ್ಳುತ್ತಿದೆ.
ಓ ಗುಲಾಬಿಯೇ, ಪಲ್ಲಕ್ಕಿ ಚಿತ್ರಗಳ ನಿರ್ದೇಶಕ ನರೇಂದ್ರಬಾಬು ತಾವು ರೂಪಿಸುವ ಸುಮಧುರ ಚಿತ್ರಗಳ ಸಾಲಿಗೆ ಮತ್ತೊಂದು ಪ್ರೇಮ್ ಕಹಾನಿ ಚಿತ್ರ ಯುವ ಚಿತ್ರವನ್ನು ಸೇರ್ಪಡೆಗೊಳಿಸುತ್ತಿದ್ದಾರೆ.
ಯುವ ಚಿತ್ರದಲ್ಲಿ ಕಾಲೇಜು ಹುಡುಗ ಹುಡುಗಿಯರ ಸುತ್ತ ಕತೆ ಸುತ್ತಲಿದ್ದರೂ ನಂತರ ಮಕ್ಕಳನ್ನು ಪೋಷಕರು ಹೇಗೆ ಬೆಳೆಸಬೇಕು, ಸರಿಯಾಗಿ ಅವರನ್ನು ಬೆಳೆಸದಿದ್ದರೆ ಆಗುವ ದುಷ್ಪರಿಣಾಮಗಳನ್ನು ಬಾಬು ತೋರಿಸಲಿದ್ದಾರೆ.
ಈ ಕತೆ ಸುಮಾರು ಐದು ವರ್ಷಗಳ ಹಿಂದೆಯೇ ಸಿದ್ಧಗೊಂಡಿತ್ತಂತೆ. ಆದರೆ ಅವರ ಕಲ್ಪನೆಯ ನಾಯಕ ಸಿಗಲಿಲ್ಲ ಎಂದು ಚಿತ್ರ ಆರಂಭವಾಗಲಿಲ್ಲ ಎನ್ನುವುದು ನಿರ್ದೇಶಕರ ಹೇಳಿಕೆ. ಈ ಸಿನೆಮಾದ ವಿಶೇಷವೆಂದರೆ ಬಾಲಿವುಡ್ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡುತ್ತಿರುವುದು. ಈ ಚಿತ್ರದಲ್ಲಿ ನಾಯಕ ಕಾರ್ತಿಕ್ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ಕಾಣಿಸಕೊಳ್ಳಲಿದ್ದಾರೆ.
ಸಾಹಸ ದೃಶ್ಯಗಳನ್ನು ಸಂಯೋಜಿಸಲಿರುವುದು ಬಾಲಿವುಡ್ ಖ್ಯಾತ ಸಾಹಸ ಸಂಯೋಜಕ ಯಜ್ಞೇಶ್ ಶೆಟ್ಟಿ. ಅವರಿಗೆ ಥ್ರಿಲ್ಲರ್ ಮಂಜು ಸಹಾಯ ಮಾಡುತ್ತಿದ್ದಾರೆ. ನಾಯಕ ಕಾರ್ತಿಕ್ ಕನ್ನಡದ ಹುಡುಗನಾದರೂ ಕನ್ನಡ ಅಷ್ಟು ಚೆನ್ನಾಗಿ ಬರುವುದಿಲ್ಲ. ಕಾರಣ ಆತ ಮುಂಬೈನಲ್ಲಿ ನೆಲೆಸಿರುವುದು.
ಮಧು ಶರ್ಮಾ ಎಂಬ ಮುಂಬೈ ಬೆಡಗಿ ಈ ಚಿತ್ರದ ನಾಯಕಿ. ಯುವ ಚಿತ್ರೀಕರಣ ಯುರೋಪ್ ಹಾಗೂ ದಕ್ಷಿಣ ಫ್ರಾನ್ಸ್‌ಗಳಲ್ಲಿ ನಡೆಯಲಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ನರೇಂದ್ರಬಾಬು ಹೇಳಿದ್ದಾರೆ.