ಪ್ರೇಕ್ಷಕನ ಚಿತ್ತ ಸದಭಿರುಚಿಯ ಚಿತ್ರಗಳತ್ತ
ಬೆಂಗಳೂರು, ಸೋಮವಾರ, 10 ಡಿಸೆಂಬರ್ 2007( 19:31 IST )
ಕನ್ನಡ ಚಿತ್ರರಂಗದಲ್ಲಿ ಈಗ ಒಂದು ರೀತಿ ನವ (ಯುವ) ಉತ್ಸಾಹದ ಸಂಭ್ರಮ. ಲಾಂಗ್, ಮಚ್ಚು, ಅಬ್ಬರ-ಆಡಂಬರದ ಚಿತ್ರಗಳು ಸಾರಾಸಗಟಾಗಿ ತಿರಸ್ಕ್ಕತಗೊಂಡು ಭಿನ್ನ ಎನ್ನಬಹುದಾದ ಸರಳ-ಸುಂದರ ಸದಭಿರುಚಿಯ ಚಿತ್ರಗಳು ಜನಮೆಚ್ಚುಗೆ ಪಡೆಯುತ್ತಿವೆ.
ಬೆಳ್ಳಿತೆರೆಯ ಮೇಲೆ ಬಣ್ಣದ ಚಿತ್ತಾರ ಮೂಡಿಸುವ ಸುಂದರ ಲೊಕೇಷನ್‌ಗಳಲ್ಲಿ ಷೂಟಿಂಗ್ ನಡೆಸಿರುವ ಚಿತ್ರಗಳು, ಹೊಸ ಆಲೋಚನೆಗಳು ಗರಿಗೆದರಿ ರೂಪುಗೊಂಡಿರುವ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿವೆ.
ಇದರಿಂದಾಗ ಅಡ್ಡಕಸುಬಿ ಪ್ರವೃತ್ತಿಯ ಜನರಿಗೆ ಪ್ರೇಕ್ಷಕರು ಗೇಟ್ಪಾಸ್ ತೋರುತ್ತಿದ್ದಾರೆ. ಕಸುಬುದಾರಿಕೆಗೆ ಮಹತ್ವ ಬಂದಿದೆ. ಚಿತ್ರದ ಪ್ರತಿ ಫ್ರೇಮಿನಲ್ಲೂ ಕುಸುರಿಯ ನೈಪುಣ್ಯ ತೋರುವ ವೃತ್ತಿಪರ ನಿರ್ದೇಶಕರಿಗೆ ಬೇಡಿಕೆ ಹೆಚ್ಚಾಗಿದೆ. ಇಂಥ ಹೊಸತನ ತುಡಿತದ ನಿರ್ದೇಶಕರ ಜೊತೆಗೂಡಿ ಕನ್ನಡದ ಯುವ ಪ್ರತಿಭೆಗಳು ದಿನೇ ದಿನೇ ಪ್ರಬುದ್ಧರಾಗುತ್ತಾ ಅಭಿನಯದ ಹೊಸ ಆಯಾಮಗಳಿಗೆ ತೆರೆದುಕೊಳ್ಳುತ್ತಿದ್ದಾರೆ.
ಹೀಗೆ ಕಲಾವಿದರಾಗಿ ಅರಳುತ್ತಿರುವ ಯುವ ಪೀಳಿಗೆಯ ನಟರ ಸಂಖ್ಯೆ ಕಡಿಮೆ ಇದ್ದರೂ ಅವರ ಹೆಸರುಗಳನ್ನು ಪ್ರಸ್ತಾಪಿಸುವುದು ಸರಿಯಲ್ಲ. ಹಿಂದೆ ಬಹುತೇಕ ನಾಯಕನಟರು ಇಮೇಜ್ ಎಂಬ ಕ್ಲೀಷೆಗೆ ಅಂಟಿಕೊಂಡು ಮುದುಡಿಹೋಗಿದ್ದುಂಟು.
ಇತ್ತೀಚಿಗೆ ದಾಖಲೆ ಸೃಷ್ಟಿಸಿರುವ ಕೆಲ ಚಿತ್ರಗಳಲ್ಲಿ ಯುವನಟರ ಅಭಿನಯ, ಅದರ ಹಿಂದಿನ ನಿರ್ದೇಶಕರ ಚಾತುರ್ಯವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗುತ್ತಿವೆ. ಹಕ್ಕುಗಳು ಮಾರಾಟವಾಗುತ್ತಿವೆ. ಕನ್ನಡ ಚಿತ್ರರಂಗ ಹೀಗೆ ಮುಂದುವರೆದು ಭಾರತೀಯ ಚಿತ್ರರಂಗದಲ್ಲಿ ಮೇರು ಚಿತ್ರರಂಗವಾಗಿ ಮಾರ್ಪಡಲಿ ಎಂದು ಹಾರೈಸೋಣ.