ಗಂಗಾಕಾವೇರಿಯಲ್ಲಿ ರೂಪಾದೇವಿ
ಬೆಂಗಳೂರು, ಗುರುವಾರ, 13 ಡಿಸೆಂಬರ್ 2007( 13:56 IST )
ಸಿನೆಮಾಗಳಲ್ಲಿ ಯಾವ ಪಾತ್ರವನ್ನು ಯಾರು ಮಾಡಿದರೆ ಸಕ್ಸೆಸ್ ಆಗುತ್ತೆ ಎಂದು ನಿರ್ದೇಶಕ ನಿರ್ಧಾರ ಮಾಡುತ್ತಾನೆ. ಎಲ್ಲೋ ಒಂದು ಚಿತ್ರದಲ್ಲಿ ಅದು ಸಕ್ಸೆಸ್ ಆಗಲಿಲ್ಲವೆಂದರೂ ನಿರ್ದೇಶಕರ ಎಣಿಕೆ ತಪ್ಪು ಎಂಬ ಅಭಿಪ್ರಾಯ ಹೊರಹೊಮ್ಮುತ್ತದೆ.
ನಿರ್ದೇಶಕ ಪ್ರೇಮ್ ತಮ್ಮ ಚಿತ್ರ ಜೋಗಿಯಲ್ಲಿ ಅರುಂಧತಿ ನಾಗ್ ಅವರಿಗೆ ತಾಯಿ ಪಾತ್ರ ನೀಡದಿದ್ದರೆ, ಆ ಚಿತ್ರ ಅಷ್ಟೊಂದು ಪರಿಣಾಮಕಾರಿಯಾಗಿ ಬರುತ್ತಿರಲಿಲ್ಲ ಎಂದು ಹಲವರು ಭಾವಿಸಿದ್ದುಂಟು. ಅದು ನಿಜವೂ ಹೌದು. ಅರುಂಧತಿ ಅಲ್ಲದೇ ಬೇರೆ ಯಾರೇ ಅಭಿನಯಿಸಿದ್ದರೂ ಚಿತ್ರದಲ್ಲಿ ಅಮ್ಮನ ಪಾತ್ರ ಅಷ್ಟೊಂದು ಪರಿಣಾಮ ಬೀರುತ್ತಿರಲಿಲ್ಲ.
ಈಗ ವಿಷ್ಣುಕಾಂತ್ ಚಿತ್ರ ಗಂಗಾ ಕಾವೇರಿಯಲ್ಲಿ ಹಿರಿಯ ನಟಿ ರೂಪಾದೇವಿ ಅಕ್ಷಯ್ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದೂರದ ಊರಿನಿಂದ ಅವರನ್ನು ಕರೆತಂದಿರುವುದರ ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ಅಮ್ಮನ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಯೋಚನೆ ಮಾಡುವಾಗ ವಿಷ್ಣುಕಾಂತ್ಗೆ ಅನಂತನಾಗ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ರೂಪಾದೇವಿ ನೆನಪಿಗೆ ಬಂದರು.
ತಕ್ಷಣ ಕಾರ್ಯಪ್ರವೃತ್ತರಾದ ಅವರು ತಮ್ಮ ಚಿತ್ರದಲ್ಲಿ ಆಕೆಗೆ ಒಂದು ಪಾತ್ರ ಕೊಟ್ಟಿದ್ದಾರೆ. ಮೊದಲು ತಾವು ನಟಿಸುವುದಿಲ್ಲ ಎಂದು ಹೇಳಿದರೂ ಕಥೆ ಕೇಳಿದ ನಂತರ ಅವರು ಒಪ್ಪಿಕೊಂಡರು ಎಂದು ವಿಷ್ಣುಕಾಂತ್ ಹೇಳಿದ್ದಾರೆ.
ಪ್ರತಿಭಾವಂತ ನಟಿ ರೂಪಾದೇವಿಯವರು ಮತ್ತೆ ನಟಿಸುತ್ತಿರುವ ಕನ್ನಡ ಚಿತ್ರವನ್ನು ಪ್ರೇಕ್ಷಕರು ಒಪ್ಪುತ್ತಾರೆ ಎಂಬುದು ವಿಷ್ಣುಕಾಂತ್ ಲಾಜಿಕ್.