ಹಾಲಿವುಡ್ ಚಿತ್ರಕ್ಕೆ ಕನ್ನಡದ ಛಾಯಾಗ್ರಾಹಕ
ಬೆಂಗಳೂರು, ಶುಕ್ರವಾರ, 14 ಡಿಸೆಂಬರ್ 2007( 17:06 IST )
ತಾಯಿ ಸಾಹೇಬ್ ಹಾಗೂ ದ್ವೀಪ ಚಿತ್ರಗಳನ್ನು ನೋಡಿದವರು ಅದರ ಛಾಯಾಗ್ರಹಣದ ಶ್ರೀಮಂತಿಕೆಯನ್ನು ಮೆಚ್ಚದೇ ಇರಲಾರರು. ಹಾಗೇ ನೋಡಿ ಮೆಚ್ಚಿದ ನಿರ್ದೇಶಕ ಸಂಜಯ್ ಶ್ರೀನಿವಾಸ್ ಹಾಲಿವುಡ್ ಹಂಚಿಕೆದಾರರು ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ಮೇಲೆ ಹೇಳಿದ ಎರಡು ಚಿತ್ರಗಳ ಛಾಯಾಗ್ರಾಹಕ ಎಚ್.ಎಂ.ರಾಮಚಂದ್ರ ಅವರನ್ನು ತಮ್ಮ ಚಿತ್ರವೊಂದಕ್ಕೆ ಆಯ್ಕೆ ಮಾಡಿದ್ದಾರೆ.
ಆ ಚಿತ್ರ ಸಾಧಾರಣ ಚಿತ್ರವಲ್ಲ. ಹಾಲಿವುಡ್ ಹಂಚಿಕೆದಾರರು ನಿರ್ಮಿಸುತ್ತಿರುವ ಗಾಡ್ ಲಿವ್ಸ್ ಇನ್ ಹಿಮಾಲಯಾಸ್ ಚಿತ್ರವದು. ಹೀಗೆ ಹಾಲಿವುಡ್ ಚಿತ್ರವೊಂದಕ್ಕೆ ಕನ್ನಡದ ಛಾಯಾಗ್ರಾಹಕರೊಬ್ಬರು ಆಯ್ಕೆ ಆಗಿರುವುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ.
ಅಮೆರಿಕದ ಡಿಸ್ಟ್ತ್ರಿಬ್ಯೂಷನ್ ಸಂಸ್ಥೆ ಲಾಂಗ್ ಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮುಂದಿನ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ದೇವರನ್ನು ಹುಡುಕಿಕೊಂಡು ಹೋಗುವ ಮಕ್ಕಳ ಕಥಾವಸ್ತುವಿರುವ ಈ ಚಿತ್ರಕ್ಕೆ ರಾಮಚಂದ್ರ ಆಯ್ಕೆಯಾಗಿರುವುದು ಕನ್ನಡ ಚಿತ್ರರಂಗಕ್ಕೊಂದು ಖ್ಯಾತಿ ತರುವ ಸಂಗತಿ.
ಅಂತಾರಾಷ್ಟ್ತ್ರೀಯ ಚಿತ್ರಗಳ ಹಂಚಿಕೆಗಾಗಿ ಖ್ಯಾತರಾದ ಓಮರ್ ಕಚ್ಮರಿಕ್ ಈ ಚಿತ್ರದ ನಿರ್ಮಾಪಕ. ಇದರ ನಿರ್ದೇಶಕ ಸಂಜಯ್ ಮುಂಬಯಿಯಲ್ಲಿ ನಾಟಕಕಾರರಾಗಿ ಪ್ರಸಿದ್ದಿ ಪಡೆದಿದ್ದಾರೆ. ಎಚ್.ಎಂ. ರಾಮಚಂದ್ರ ದ್ವೀಪ ಚಿತ್ರದ ಛಾಯಾಗ್ರಹಣಕ್ಕೆ ರಾಷ್ಟ್ತ್ರಪ್ರಶಸ್ತಿ ಪಡೆದಿದ್ದಾರೆ. ಹಾಗೇ ತಾಯಿ ಸಾಹೇಬ ಹಾಗೂ ನೆನಪಿರಲಿ ಚಿತ್ರಗಳ ಛಾಯಾಗ್ರಹಣಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.