ಕಥೆ ಕದಿಯುವ ಕಥೆ
ಬೆಂಗಳೂರು, ಶುಕ್ರವಾರ, 14 ಡಿಸೆಂಬರ್ 2007( 17:08 IST )
ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ನಾಟಕವೊಂದರ ಪಾತ್ರವನ್ನು ಗೊಂದಲ ಮಾಡುವ ಪ್ರಯತ್ನದಲ್ಲಿ ಕೆಂಪಣ್ಣಾ ...ಕೆಂಪಣ್ಣಾ ಎಂದು ಕರೆಯುತ್ತಾರೆ. ಅದಕ್ಕೆ ಆ ಪಾತ್ರ ನಾನು ಕೆಂಪಣ್ಣ ಅಲ್ಲ, ಕರಿಯಣ್ಣ ಎಂದು ಹೇಳುತ್ತದೆ. ಅದಕ್ಕೆ ಹಿರಣ್ಣಯ್ಯ ಅವರು ನಮ್ಮೂರಿನ ಕೆಂಪಣ್ಣನೇ ಇಲ್ಲಿ ಕರಿಯಣ್ಣ ಎನ್ನುತ್ತಾರೆ.
ಕನ್ನಡ ಚಿತ್ರಗಳ ಕಥೆಗಳ ವಿಷಯದಲ್ಲಿ ಈ ಸನ್ನಿವೇಶ ಅನ್ವಯವಾಗಬಹುದೇನೋ. ಹಾಲಿವುಡ್ ಚಿತ್ರಗಳನ್ನು ನೋಡಿ ಅದರಲ್ಲಿರುವ ಒಳ್ಳೆ ಸನ್ನಿವೇಶಗಳನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವರು, ಬೇರೆ ಭಾಷಾ ಚಿತ್ರಗಳ ಕಥೆ ಹಾಗೂ ಸನ್ನಿವೇಶಗಳನ್ನು ತಮ್ಮ ಚಿತ್ರಗಳಿಗಾಗಿ ಕದಿಯುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಹಾಗೆ ಕನ್ನಡ ಚಿತ್ರಗಳ ಕತೆಯನ್ನೇ ಕದಿಯುವವರೂ ಇದ್ದಾರೆ ಎಂದು ಇತ್ತೀಚಿಗೆ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರಿಗೆ ಅನಿಸಿದೆ.
ವರ್ಷದ ಹಿಂದೆ ಬಾಬು ಟೀನ್ ಟೀನ್ ಟೀನ್ ಎಂಬ ಚಿತ್ರ ಪ್ರಕಟಿಸಿದ್ದರು. ಹದಿಹರೆಯದ ನಾಲ್ಕು ಹುಡುಗಿಯರ ಕತೆ ಇದು ಎಂದಿದ್ದರು. ಅದೇ ಕತೆ ಈಗ ಮೊಗ್ಗಿನ ಮನಸ್ಸು ಚಿತ್ರವಾಗುತ್ತಿದೆ ಎನ್ನುವುದು ಅವರ ಗುಮಾನಿ.
ಮುಂಗಾರುಮಳೆ ಚಿತ್ರದ ನಿರ್ಮಾಪಕ ಕೃಷ್ಣಪ್ಪ ಅವರ ಮೊಗ್ಗಿನ ಮನಸ್ಸು ಚಿತ್ರ ಷೂಟಿಂಗ್ ನಡೆಯುತ್ತಿದೆ. ಆದರೆ ತಮ್ಮ ಕತೆಯನ್ನು ಕದಿಯಲಾಗಿದೆ ಎಂದು ರಾಜೇಂದ್ರಸಿಂಗ್‌ಬಾಬು ಅವರು ಫಿಲಂ ಚೇಂಬರ್‌ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.