ತ್ರಿಕೋನ ಪ್ರೇಮಕಥೆ ಚಿಕ್ಕಮಗಳೂರು ಚಿಕ್ಕ ಮಲ್ಲಿಗೆ
ಬೆಂಗಳೂರು, ಶುಕ್ರವಾರ, 14 ಡಿಸೆಂಬರ್ 2007( 17:10 IST )
ಚಿಕ್ಕಮಗಳೂರಿನ ನಟಿಯೊಬ್ಬಳು ನಾಯಕಿ ಆಗಿ ಅಭಿನಯಿಸಿದ ಚಿತ್ರ ಸದ್ದಿಲ್ಲದೆ ಬಿಡುಗಡೆಯಾಗುತ್ತಿರುವ ಸುದ್ದಿಯ ಬೆನ್ನ ಹಿಂದೆಯೇ ಚಿಕ್ಕಮಗಳೂರು ಚಿಕ್ಕಮಲ್ಲಿಗೆ ಚಿತ್ರದ ಸುದ್ದಿ ಬಂದಿದೆ.
ಶಿವರಾಜ್‌ಕುಮಾರ್ ಹಾಗೂ ನಿವೇದಿತಾ ಜೈನ್ ಅಭಿನಯದ ಶಿವಸೈನ್ಯ ಚಿತ್ರದ ಹಾಡು ಚಿಕ್ಕಮಗಳೂರ ಓ ಚಿಕ್ಕಮಲ್ಲಿಗೆ ಚರಣವನ್ನೇ ತಮ್ಮ ಹೊಸ ಚಿತ್ರದ ಟೈಟಲ್ ಆಗಿಸಿ ತಮ್ಮ ನಿರ್ದೇಶನದಲ್ಲಿ ಚಿತ್ರವನ್ನು ರೂಪಿಸುತ್ತಿದ್ದಾರೆ ಚೆನ್ನಗಂಗಪ್ಪ.
ಮಲೆನಾಡಿನ ಪ್ರಕೃತಿ ಸೊಬಗಿನ ಹಿನ್ನೆಲೆಯಲ್ಲಿ ತ್ರಿಕೋನ ಪ್ರೇಮಕಥೆಯನ್ನು ಇಟ್ಟುಕೊಂಡು ಸಿನೆಮಾ ರೂಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಈ ಕಥೆಗೆ ರವೀಂದ್ರನಾಥ್ ಠಾಗೂರ್ ಬರೆದಿರುವ ಕಥೆಯೊಂದರ ಸ್ಪೂರ್ತಿ ಇದೆ ಎಂದು ತಿಳಿಸಿದ್ದಾರೆ.
ರಾಜರ ಮನೆತನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುತ್ತದೆ. ಆದರೂ ಆ ಮನೆತನದ ರಾಜ ಇನ್ನೂ ರಾಜನಂತೆ ವರ್ತಿಸುತ್ತಾನೆ. ಅವರ ಮೊಮ್ಮಗಳೇ ಚಿತ್ರದ ನಾಯಕಿ. ಚಿಕ್ಕವಯಸಲ್ಲಿರುವಾಗಲೇ ನಾಯಕಿಗೆ ಬೇರೊಬ್ಬನ ಜತೆಯಲ್ಲಿ ಬಾಲ್ಯವಿವಾಹವಾಗಿರುತ್ತದೆ. ಆದರೆ ಈ ವಿಷಯ ನಾಯಕಿಗೆ ಗೊತ್ತಿರುವುದಿಲ್ಲ. ಆಕೆ ಬೇರೊಬ್ಬನನ್ನು ಪ್ರೀತಿಸುತ್ತಾಳೆ. ಬಾಲ್ಯದ ಗಂಡ ಬಂದು ನಾನೇ ನಿನ್ನ ಗಂಡ ಎಂದು ಹೇಳುತ್ತಾನೆ.
ಹೀಗೆ ಚಿಕ್ಕಮಲ್ಲಿಗೆ ಕಥೆ ಸಾಗುತ್ತದೆ. ಬಲ್ಲಾಳದ ರಾಯದುರ್ಗ ಪ್ರದೇಶದಲ್ಲಿ, ಚಿಕ್ಕಮಗಳೂರು, ಕುಮಟಾ, ಶಿರಸಿ ಹೀಗೆ ಹಲವಾರು ಕಡೆ ಚಿತ್ರೀಕರಣ ನಡೆಸುವ ಯೋಜನೆ ನಿರ್ದೇಶಕರದ್ದು.