ಗಾಳಿಪಟ ಕೆಸೆಟ್ ಮಾರಾಟ ಹಕ್ಕು ದಾಖಲೆ
ಬೆಂಗಳೂರು, ಶನಿವಾರ, 22 ಡಿಸೆಂಬರ್ 2007( 11:23 IST )
ಯೋಗರಾಜ ಭಟ್ ಕೈಚಳಕದಲ್ಲಿ ನಿರ್ಮಾಣವಾಗುತ್ತಿರುವ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ ಚಿತ್ರಗಳ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಆ ಹಾಡುಗಳು ಧ್ವನಿ ಸುರುಳಿ ಕುರಿತ ಸಿಹಿ ಸುದ್ದಿಯೊಂದು ಬಂದಿದೆ.
ಹಾಡುಗಳ ಬಗ್ಗೆ ನಾನು ಹೇಳುವುದಕ್ಕಿಂತ ಕೇಳುಗರು ಮಾತನಾಡಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಚಿತ್ರದ ಹಾಡುಗಳ ಬಗ್ಗೆ ಇರುವ ವಿಶ್ವಾಸವನ್ನು ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದರು.
ಆ ಸಂದರ್ಭದಲ್ಲೇ ಒಂದು ಸುದ್ದಿ ಹರಿದಾಡುತ್ತಿತ್ತು. ಗಾಳಿಪಟ ಆಡಿಯೋ ಹಕ್ಕುಗಳನ್ನು ಕೇಳಿಯೇ ಕೆಸೆಟ್ ಮಾರಾಟ ಹಕ್ಕುಗಳನ್ನು ಅಶ್ವಿನಿ ಪ್ರಸಾದ್ ಖರೀದಿಸಿರುವುದಾಗಿ ಹೇಳಿದರು. ಆದರೆ ಅವರು ಎಷ್ಟು ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ ಎಂದು ಆ ವೇಳೆ ಗೊತ್ತಾಗಲಿಲ್ಲ.
ಈಗ ಕೆಸೆಟ್ ಮಾರಾಟದ ಹಕ್ಕನ್ನು ಅಶ್ವಿನಿ ರಾಮಪ್ರಸಾದ್ ಬರೋಬ್ಬರಿ ಎಪ್ಪತ್ತು ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ ಎನ್ನುವುದು ಖಚಿತವಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದ ಕೆಸೆಟ್ ಮಾರಾಟ ಹಕ್ಕು ಹೆಚ್ಚು ದರಕ್ಕೆ ಮಾರಾಟವಾಗಿತ್ತು. ಝಂಕಾರ್ ಸಂಸ್ಥೆಯವರು ಅದನ್ನು ನಲವತ್ತು ಲಕ್ಷಕ್ಕೆ ಖರೀದಿಸಿದಿದ್ದರು.
ಈ ಹಿಂದೆ ಎಚ್ 2 ಒ ಚಿತ್ರದ ಕೆಸೆಟ್ ಐವತ್ತು ಲಕ್ಷಕ್ಕೆ ಮಾರಾಟವಾಗಿದ್ದು ದಾಖಲೆಯಾಗಿತ್ತು. ಈಗ ರಾಮಪ್ರಸಾದ್ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಸೆಟ್ ಪೈರಸಿಯಿಂದಾಗಿ ಆಡಿಯೋ ಕಂಪನಿಗಳೆಲ್ಲಾ ಮುಳುಗಿಹೋಗುತ್ತಿವೆ ಎಂಬ ಕೊರಗಿನ ನಡುವೆ ಇಂಥಾ ಬೆಳವಣಿಗೆ ಸೀಮಿತ ಅವಕಾಶವಿರುವ ಕನ್ನಡ ಚಿತ್ರರಂಗದಲ್ಲಿ ಆಗಿರುವುದು ಬೆರಗು ಹುಟ್ಟಿಸಿದೆ.