ಮಚ್ಚಿಲ್ಲದ ಮಚ್ಚಾಗೆ ಮುಹೂರ್ತ
ಬೆಂಗಳೂರು, ಮಂಗಳವಾರ, 25 ಡಿಸೆಂಬರ್ 2007( 15:07 IST )
ಕೆಲ ಕನ್ನಡ ಸಿನೆಮಾಗಳ ಟೈಟಲ್ ಯಾವುದಾಗಿದ್ದರೂ ನಾಯಕನ ಕೈಯಲ್ಲಿ ಮಚ್ಚು ಇರಬೇಕೆಂಬುದು ಅಲಿಖಿತ ನಿಯಮ. ಆದರೆ ಟೈಟಲ್‌ನಲ್ಲೇ ಮಚ್ಚಾ ಇದ್ದರೂ ನಾಯಕನ ಕೈಯಲ್ಲಿ ಮಚ್ಚು ಇಲ್ಲದಿರುವುದು ಈ ಚಿತ್ರದ ವಿಶೇಷ.
ಕಳೆದ ವಾರ ಮಚ್ಚಾ... ಆನ್ ಫೀಲ್ಡ್ ಚಿತ್ರದ ಮುಹೂರ್ತ ನೆರವೇರಿತು. ಕಳೆದ ಮೂರು ವರ್ಷಗಳಿಂದ ನಿರ್ದೇಶಕರಾಗಬೇಕೆಂದು ಓಡಾಡುತ್ತಿದ್ದ ದತ್ತು ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ರೌಡಿಸಂ ಇದೆ. ಆದರೆ ಲಾಂಗ್ ಮಚ್ಚುಗಳಿಲ್ಲ ಎನ್ನುವುದು ಇದರ ವಿಶೇಷ.
ಪತ್ರಕರ್ತ ಹಾಗೂ ನಟ ಯತಿರಾಜ್ ಮೊದಲು ನಾಯಕನನ್ನು ಹಾಳು ಮಾಡುತ್ತಾನೆ. ನಂತರ ಸರಿದಾರಿಗೆ ತರುವಂಥ ಅಪರೂಪದ ಪಾತ್ರವನ್ನು ನೀಡಲಾಗಿದೆ. ಬೇಸಂಟ್ ರವಿ, ಸತ್ಯಪ್ರಕಾಶ್ ಹಾಗೂ ರಾಜನ್ ಪಿ. ದೇವ್ರಂಥ ವಿಲನ್‌ಗಳು ಆಮದಾಗಿದ್ದಾರೆ.
ಹೀರೋ ಜೀವನ್, ಹೀರೋಯಿನ್ ಸಾರಿಕಾ ಜೈನ್. ಈ ಚಿತ್ರದಲ್ಲಿ ಫೈಟ್ಸ್‌ಗೆ ಡಿಶುಂ ಡಿಶುಂ ಎಂಬ ಶಬ್ದಗಳಿರುವುದಿಲ್ಲ. ಫೈಟ್ಸ್ ನ್ಯಾಚುರಲ್ ಆಗಿ ಬಂದಿವೆ ಎಂದು ದತ್ತು ಹೇಳುತ್ತಿದ್ದರೆ ಪತ್ರಕರ್ತರಿಗೆ ಅರ್ಥವಾಗಲಿಲ್ಲ.
ಇದೆಲ್ಲದರ ಜತೆಗೆ ಅಂಬರೀಷ್ ಇರುತ್ತಾರೆಯೇ ಎಂಬ ಪ್ರಶ್ನೆಗೆ ಅವರ ಆಶೀರ್ವಾದವಿದೆ. ಅವರು ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ನಿರ್ದೇಶಕರ ಉತ್ತರವಾಗಿತ್ತು.
ಬಾಲಿವುಡ್ ಸ್ಟಾರ್ ನಟಿಯೊಬ್ಬಳು ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಾಯಕನ ತಾಯಿಯಾಗಿ ವಿನಯಾ ಪ್ರಕಾಶ್ ಇದ್ದಾರೆ. ತನ್ನ ಸರ್ವಸ್ವವನ್ನೂ ಮಗನ ಏಳಿಗೆಗಾಗಿ ಮುಡಿಪಾಗಿಡುವಂಥ ಪಾತ್ರ ಎಂದರು ವಿನಯ.
ಸಾರಿಕಾ ಜೈನ್‌ಗಿದು ಮೂರನೆ ಚಿತ್ರ. ಆರಡಿ ಆಜಾನುಬಾಹು ಜೀವನ್ ಮಾಡೆಲಿಂಗ್‌ನಿಂದ ಸೀದಾ ಚಿತ್ರರಂಗಕ್ಕೆ ಬಂದಿರುವುದಾಗಿ ಹೇಳಿಕೊಂಡರು.
ಒಟ್ಟು 75 ದಿನಗಳ ಚಿತ್ರೀಕರಣ. ಅರ್ಜುನ್ ಸಂಗೀತ ನೀಡುತ್ತಿದ್ದಾರೆ. ಯೂರೋಪ್‌ನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಕೊಡಾಕ್ 19 ನೆಗೆಟಿವ್ ಬಳಸಲಾಗುತ್ತದೆ. ಸುನೀಲ್ ಜೆ. ಪಾರೇಖ್ ನಿರ್ಮಾಪಕ. ದೀಪಕ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕ.