ದರ್ಶನ್ ಈಗ ಎಸಿಪಿ ಅರ್ಜುನ್
ಬೆಂಗಳೂರು, ಗುರುವಾರ, 27 ಡಿಸೆಂಬರ್ 2007( 15:11 IST )
ಪೊಲೀಸ್ ಇಲಾಖೆಯಲ್ಲಿ ಬಹುತೇಕ ಸಿಬ್ಬಂದಿ ಮಧ್ಯಮ ವರ್ಗದವರು. ಶ್ರೀಮಂತರೊಬ್ಬರ ಮಗ ಪೊಲೀಸ್ ಆದರೆ ಹೇಗೆ ಎಂಬ ಯೋಚನೆ ಬಂತು ನಿರ್ದೇಶಕ ಶಾಹುರಾಜ್ ಶಿಂಧೆ ಅವರಿಗೆ. ಇದನ್ನೇ ಸಬ್ಜೆಕ್ಟ್ ಆಗಿ ಇಟ್ಟುಕೊಂಡು ಅವರು ಕತೆಯೊಂದನ್ನು ಸಿದ್ಧಪಡಿಸಿದರು.
ಈ ಕತೆಯಲ್ಲಿ ಶ್ರೀಮಂತನೊಬ್ಬನಿಗೆ ಪೊಲೀಸ್ ಆಗಬೇಕೆಂಬ ಆಸೆಯಿರುತ್ತೆ. ಆದರೆ, ಆಗುವುದಿಲ್ಲ, ಮಗನಾದರೂ ಆಗಲಿ ಎಂದು ಆಸೆ ಪಡುತ್ತಾನೆ. ಸಮಾಜಸೇವೆ ಮಾಡುವುದಕ್ಕೆ ಹುರಿದುಂಬಿಸುತ್ತಾನೆ ಹಾಗಾಗಿ ಶ್ರೀಮಂತನ ಮಗ ಎಸಿಪಿ ಆಗುತ್ತಾನೆ.
ಈ ಎಸಿಪಿ ಮತ್ತಾರೂ ಅಲ್ಲ. ಈಗಾಗಲೇ ಎರಡು ಚಿತ್ರಗಳಲ್ಲಿ ಪೊಲೀಸ್ ಆಗಿದ್ದ ದರ್ಶನ್ ಎಸಿಪಿ ಅರ್ಜುನ್ ಆಗುತ್ತಿದ್ದಾರೆ. ಸಿನೆಮಾ ಹೆಸರು ಅರ್ಜುನ್ ಎಂದು ಖಚಿತವಾಗಿದ್ದರೂ ಇನ್ನೂ ತಾರಾಗಣದ ಆಯ್ಕೆ ಮುಗಿದಿಲ್ಲ.
ಅರ್ಜುನ್ ಅಪ್ಪನಾಗಿ ಯಾರು ಅಭಿನಯಿಸುತ್ತಾರೆ ಎಂಬ ಪ್ರಶ್ನೆಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರ ಸಿಗದಿದ್ದರೂ ಅಲ್ಲಿ ರಂಗಾಯಣ ರಘು ಇದ್ದಿದ್ದರಿಂದ ಅವರೇ ಇರಬಹುದು ಎಂಬುದು ಪತ್ರಕರ್ತರ ಗುಮಾನಿ. ನಾಯಕಿಯ ಆಯ್ಕೆಯಾಗಿಲ್ಲ.
ಸುಮನ್, ರಾಹುಲ್ದೇವ್ ಚಿತ್ರದಲ್ಲಿದ್ದಾರೆ. ದರ್ಶನ್‌ಗೆ ಈ ಪಾತ್ರ ಇಷ್ಟವಾಗಿದೆಯಂತೆ. ಈ ಪಾತ್ರ ಜಾಲಿ ಪಾತ್ರವಾಗಿರುವುದರಿಂದ ತಮಗೂ ಖಷಿಯಾಗಿದೆ ಎನ್ನುವುದು ಅವರ ಮಾತು. ಜಯಣ್ಣ ನಿರ್ಮಾಪಕರು. ದರ್ಶನ್ ಚಿತ್ರಗಳ ಖಾಯಂ ಹಂಚಿಕೆದಾರರು ಅವರು. ಜಯಣ್ಣ ಫಿಲಂನಲ್ಲಿ ನಾಲ್ವರು ಪಾಲುದಾರರಿದ್ದಾರೆ. ಹರಿಕೃಷ್ಣ ಸಂಗೀತ ನಿರ್ದೇಶಕರು.