ಬೀಸಲಿರುವ ತಂಗಾಳಿ
ಬೆಂಗಳೂರು, ಶುಕ್ರವಾರ, 28 ಡಿಸೆಂಬರ್ 2007( 13:08 IST )
ಗಾಳಿಪಟದ ಸದ್ದು ಪಟಾ ಪಟಾ ಎಂದು ಕೇಳಿಸುತ್ತಿದ್ದರೆ ಮತ್ತೊಂದು ಕಡೆ ತಂಗಾಳಿ ಬೀಸುತ್ತಿದೆ. ಇದೇನು ಎಂಬ ಆಶ್ಚರ್ಯ ಬೇಡ. ಮತ್ತೊಂದು ಹೊಸಬರ ತಂಡ ತಂಗಾಳಿ ಎಂಬ ಸಿನೆಮಾ ನಿರ್ಮಾಣದಲ್ಲಿ ತೊಡಗಿದೆ.
ಇದರ ನಿರ್ದೇಶಕ ಕೀರ್ತಿವರ್ಧನ್. ಅವರಿಗೆ ಎಸ್.ಕೆ.ಭಗವಾನ್, ಬಿ.ಸುರೇಶ್, ಸುನಿಲ್ ಪುರಾಣಿಕ್ ಜತೆ ಕೆಲಸಮಾಡಿದ ಅನುಭವವಿದೆ. ನಿರ್ಮಾಪಕರು ಕುಮಾರ್ ಎ. ಟ್ವಿಂಕಲ್. ಸಂಗೀತ ನಿರ್ದೇಶಕ ನಂದಕಿಶೋರ್. ಯುವ ಪ್ರತಿಭೆ ರಾಮ್‌ನಾಯಕ್ ಈ ಚಿತ್ರದ ಹೀರೋ. ದಿವ್ಯಾ ಶ್ರೀಧರ್ ಹೀರೋಯಿನ್. ಛಾಯಾಗ್ರಾಹಕ ಸುಂದರ್ನಾಥ್ ಸುವರ್ಣ. ಈ ಚಿತ್ರಕ್ಕೆ ಇತ್ತೀಚಿಗೆ ಮುಹೂರ್ತ ನಡೆಯಿತು.
ಆ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಕೀರ್ತಿವರ್ಧನ್, ಇದೊಂದು ಮೆಲೋಡಿ ಭರಿತ ಚಿತ್ರ. ಪ್ರಕೃತಿ ಮಡಿಲಲ್ಲಿರುವ ತಾಯಿ ಮಗನ ಮಧ್ಯೆ ಹೀರೋಯಿನ್ ಬಂದು ನಿಲ್ಲುತ್ತಾಳೆ. ಅಲ್ಲಿಂದ ಮುಂದೆ ಕಥೆ ಮುಂದುವರೆಯುತ್ತದೆ ಎಂದರು.
ತಾಯಿಯ ಪಾತ್ರಕ್ಕೆ ಸುಹಾಸಿನಿ ಅವರನ್ನು ಆಹ್ವಾನಿಸುವ ಯೋಚನೆ ಅವರದ್ದು. ಹುಡುಗಿಯ ಅಪ್ಪನ ಪಾತ್ರ ನಿರ್ವಹಿಸಲು ರವಿ ಬೆಳಗೆರೆ ಅಥವಾ ನಾಜರ್ ಅವರನ್ನು ಕೇಳಬೇಕು ಎಂಬ ಐಡಿಯಾ ನಿರ್ದೇಶಕರಿಗಿದೆ.
ಮಡಿಕೇರಿ, ಕುಂದಾಪುರ, ಊಟಿ, ಮುಂತಾದ ಕಡೆ 50 ದಿನಗಳು ಚಿತ್ರೀಕರಣ ನಡೆಯಲಿದೆ. ಒಟ್ಟು ಆರು ಹಾಡುಗಳು ಚಿತ್ರದಲ್ಲಿವೆ. ನಿರ್ಮಾಪಕ ಕುಮಾರ್ ಜಾಹೀರಾತು ಏಜೆನ್ಸಿ ನಡೆಸುತ್ತಿದ್ದಾರೆ. ಬಹುದಿನಗಳಿಂದ ಅವರಿಗೆ ಕನ್ನಡ ಚಿತ್ರವೊಂದನ್ನು ನಿರ್ಮಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ನೆರವೇರುತ್ತಿದೆ.